ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬೇಲೂರು ತಾಲೂಕು ಬರ ಪೀಡಿತ ಪಟ್ಟಿಯಿಂದ ಹೊರಗುಳಿದಿದೆ. ದಾಖಲೆ ಸಮೇತ ವರದಿ ನೀಡಿ ಬೇಲೂರನ್ನು ಬರ ಪೀಡಿತ ಪಟ್ಟಿಗೆ ಸೇರಿಸಲು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಮಾಜಿ ಸಚಿವ ಬಿ.ಶಿವರಾಂ ಹೇಳಿದರು.
ಒಂದು ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಗುರುತಿಸಲು ಆ ಪ್ರದೇಶದ ನೀರಾವರಿ ಬೆಳೆಗಳ ಸ್ಥಿತಿಗತಿ, ಕೆರೆಗಳ ಪರಿಸ್ಥಿತಿ ಅರಿತು ಸಮಗ್ರ ಪಟ್ಟಿ ಮಾಡಿ ವರದಿ ನೀಡಿದರೆ ಮಾತ್ರ ಬರ ಪೀಡಿತ ಪ್ರದೇಶವೆಂದು ಘೋಷಿಸಲು ಸಾಧ್ಯ. ಅಧಿಕಾರಿಗಳು, ಜನಪ್ರತಿನಿದಿಗಳ ನಿರ್ಲಕ್ಷ್ಯದಿಂದಾಗಿ ಬೇಲೂರು ತಾಲೂಕು ಬರ ಪಟ್ಟಿಯಿಂದ ಹೊರಗುಳಿದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕು ಬಯಲು ಸೀಮೆ, ಅರೆ ಮಲೆನಾಡು, ಮಲೆನಾಡು ಪ್ರದೇಶ ಹೊಂದಿದೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದು ಪಟ್ಟಿಮಾಡಿ ಮುಖ್ಯಮಂತ್ರಿ, ಕಂದಾಯ ಸಚಿವರನ್ನು ಭೇಟಿ ಮಾಡುತ್ತೇನೆ. ಅಲ್ಲದೆ ತಾಲೂಕಿನ ಕೆರೆಗಳಿಗೆ ನೀರು ಹರಿಸಬೇಕಾದರೆ ಏತ ನೀರಾವರಿ, ರಣಘಟ್ಟ, ಹೆಬ್ಬಾಳು ಏತ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ಮಾಡಿಸಿ ಕೆರೆಗೆ ನೀರು ಹರಿಸಿದರೆ ಅಂತರ್ಜಲ ವೃದ್ಧಿಯಾಗುತ್ತದೆ. ತಾಲೂಕಿನಲ್ಲಿ 700 ಕ್ಕೂ ಅಧಿಕ ಕೊಳವೆ ಬಾವಿಗಳು ಸ್ಥಗಿತವಾಗಿವೆ. ಶೇ. 80 ಬಾವಿಗಳು ಬತ್ತಿವೆ.
ಇಷ್ಟೆಲ್ಲ ಮಾಹಿತಿ ಇರುವ ದಾಖಲೆಯನ್ನು ಸಂಬಂಧಿಸಿದ ಸಚಿವರಿಗೆ ನೀಡಿದರೆ ಬರ ಪೀಡಿತ ಪಟ್ಟಿಗೆ ಸೇರಿಸಲು ಸಾಧ್ಯ ಎಂದರು.