ಬೀದಿ ನಾಯಿ ಸಂತಾನ ಶಕ್ತಿ ಹರಣ ಕೇಂದ್ರ ನಿರ್ಮಾಣ ಉದ್ದೇಶ ಕೈಬಿಡಿ

ಸುದ್ದಿಗೋಷ್ಠಿ
ಸುದ್ದಿಗೋಷ್ಠಿ
Published on

ಪ್ರಮುಖ ಮುಖ್ಯಾಂಶಗಳು

  • ಸೊಪ್ಪಿನಹಳ್ಳಿ ಗ್ರಾಮಸ್ಥರ ಆಗ್ರಹ
ಆಲೂರು : ಪಟ್ಟಣ ಪಂಚಾಯಿತಿ ವತಿಯಿಂದ ಕಸಬಾ ಸೊಪ್ಪಿನಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಕೇಂದ್ರ ಮಾಡಲು ಉದ್ದೇಶಿಸಿರುವುದನ್ನು ಕೈ ಬಿಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಆಲೂರು ಪಟ್ಟಣ ಪಂಚಾಯಿತಿ ವತಿಯಿಂದ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಕೇಂದ್ರ ಮಾಡಲು ತಾಲೂಕು ಭೂಮಾಪಕರು ಸ್ಥಳ ಪರಿಶೀಲಿಸಲು ನಮ್ಮ ಗ್ರಾಮಕ್ಕೆ ಬಂದಿದ್ದು, ಜಮೀನಿನಲ್ಲಿ ಈಗಾಗಲೇ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿರುವುದರಿಂದ ಈ ಭಾಗದ ರೈತರಿಗೆ ಸಮಸ್ಯೆಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 
ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿರುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ದುರ್ವಾಸನೆ ಬರುತ್ತಿದ್ದು, ರೈತರು ಜಮೀನುಗಳಲ್ಲಿ ಕೆಲಸ ಮಾಡಲು ಸಮಸ್ಯೆಯಾಗುತ್ತಿದೆ. ಅಲ್ಲದೇ ಸಾಂಕ್ರಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ. ಪಕ್ಕದ ಬಾಚನಹಳ್ಳಿ ಗ್ರಾಮದೊಳಗೆ ಬೀದಿ ನಾಯಿಗಳು ಹೆಚ್ಚಾಗಿವೆ. ಘನ ತ್ಯಾಜ್ಯ ವಿಲೇವಾರಿ ವಾಹನವು ಪ್ರತಿ ದಿನ ಬಾಚನಹಳ್ಳಿ ಮುಖ್ಯ ರಸ್ತೆಯಿಂದಲೇ ಹಾದುಹೋಗುತ್ತಿರುವುದರಿಂದ ಗ್ರಾಮದಲ್ಲಿ ದುರ್ವಾಸನೆ ಬರುತ್ತಿದೆ. ಪರ್ಯಾಯ ರಸ್ತೆ ಮಾಡಿ ಸಾಗುವಂತೆ ಕೋರಿದರೂ ಪ್ರಯೋಜನವಾಗಿಲ್ಲ. ಬೀದಿ ನಾಯಿಗಳ ಸಂಗ್ರಹ ಕೇಂದ್ರವನ್ನು ಮಾಡಬಾರದು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಗ್ರಾಮಸ್ಥ ಸಂಪತ್ ಮಾತನಾಡಿ, ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಯಾನಿಟರಿ ತ್ಯಾಜ್ಯವನ್ನು ಸಹ ವಿಲೇವಾರಿ ಮಾಡುತ್ತಿರುತ್ತಾರೆ. ಬಾಚನಹಳ್ಳಿ ಗ್ರಾಮ ತ್ಯಾಜ್ಯ ವಿಲೇವಾರಿ ಘಟಕಕ್ಕಿಂತ ತಗ್ಗು ಪ್ರದೇಶದಲ್ಲಿ ಇದೆ. ಮಳೆ ನೀರಿನ ಹರಿವಿನಿಂದ ಮತ್ತು ಎತ್ತರದ ಪ್ರದೇಶದಿಂದ ತಗ್ಗು ಪ್ರದೇಶಕ್ಕೆ ಗಾಳಿ ಬೀಸುವುದರಿಂದ ಸಾಂಕ್ರಾಮಿಕ ರೋಗ ಹರಡುವ ಬೀತಿ ಎದುರಾಗಿದೆ. ಇಂತಹ ಸನ್ನಿವೇಷದಲ್ಲಿ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಕೇಂದ್ರವನ್ನು ಸ್ಥಾಪಿಸುವ ಉದ್ದೇಶ ಹೊಂದಿರುವುದನ್ನು ಕೈ ಬಿಡಬೇಕು. ಈ ಬಗ್ಗೆ ಈಗಾಗಲೇ ತಹಸೀಲ್ದಾರ್ ಮತ್ತು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಘಟಕ ತೆರೆಯಲು ಮುಂದುವರಿಸಿದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. 
ಗ್ರಾಮಸ್ಥರಾದ ಮನು, ಶರತ್, ಲಿಖಿತ್ ಭಾಗವಹಿಸಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net