ಬಿಸಿಲಿನ ಪ್ರಖರಕ್ಕೆ ಹೇಮೆ ಇಳಿಮುಖ

ಹೇಮಾವತಿ ಹಿನ್ನೀರು ಬರಿದಾಗಿರುವುದು.
ಹೇಮಾವತಿ ಹಿನ್ನೀರು ಬರಿದಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬಿಸಿಲಿನ ಪ್ರಖರಕ್ಕೆ ಹೇಮೆ ಇಳಿಮುಖ
  • ಜಿಲ್ಲೆಯ ಜೀವನಾಡಿ ಹೇಮಾವತಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕುಸಿತ
  • ಬರಿದಾಗುತ್ತಿರುವ ಕೆರೆ, ಕಟ್ಟೆಗಳು
  • ಜನ-ಜಾನುವಾರುಗಳಿಗೆ ಎದುರಾದ ಸಂಕಷ್ಟ
ಕೆ.ಆರ್.ಪ್ರಸಿನ್ ಹಾಸನ
ಬಿಸಿಲಿನ ಪ್ರಖರತೆಗೆ ಒಂದೆಡೆ ಜಿಲ್ಲೆಯ ಜೀವನಾಡಿಯಾಗಿರುವ ಹೇಮಾವತಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ದಿನೇ ದಿನೆ ಕುಸಿಯುತ್ತಿದೆ. ಮತ್ತೊಂದೆಡೆ ಬರಿದಾಗುತ್ತಿರುವ ಕೆರೆ-ಕಟ್ಟೆಗಳಿಗೆ ನೀರು ಹರಿಸಿ, ಜನ-ಜಾನುವಾರುಗಳ ಬಾಯಾರಿಕೆ ನೀಗಿಸಬೇಕೆಂಬ ಕೂಗು ಕೇಳಿಬರುತ್ತಿದೆ.
ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ನೀರು ವೇಗವಾಗಿ ಆವಿಯಾಗುತ್ತಿದೆ. ಅಣೆಕಟ್ಟೆ ಮಾತ್ರವಲ್ಲದೆ ಜಿಲ್ಲೆಯ ಕೆರೆ, ಕಟ್ಟೆಗಳು ಕೂಡ ಒಣಗಿ ಹೋಗುತ್ತಿರುವುದರಿಂದ ನೀರಿನ ಮೂಲಗಳು ಬರಿದಾಗುತ್ತಿವೆ. ಈ ಸಂಕಷ್ಟದಿಂದ ಜನ-ಜಾನುವಾರುಗಳನ್ನು ಪಾರು ಮಾಡಲು ಕನಿಷ್ಠ ಪ್ರಮಾಣದ ನೀರನ್ನಾದರೂ ಕಾಲುವೆಗಳ ಮೂಲಕ ಕೆರೆಕಟ್ಟೆಗೆ ಹರಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಜಲಾಶಯದಲ್ಲಿ ಪ್ರಸ್ತುತ 17.796 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 19.378 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 2 ಟಿಎಂಸಿಯಷ್ಟು ನೀರಿನ ಕೊರತೆ ಕಂಡುಬಂದಿದೆ. ಇದು ನೀರಿನ ಲಭ್ಯತೆ ಕುಸಿತವಾಗಿರುವುದು ಮತ್ತು ಮುಂದಿನ ದಿನಗಳಲ್ಲಿ ಸಮಸ್ಯೆ ತೀವ್ರಗೊಳ್ಳುವ ಲಕ್ಷಣಗಳನ್ನು ಎಚ್ಚರಿಸುತ್ತಿದೆ.
ಬಿಸಿಲಿನ ಝಳಕ್ಕೆ ಆವಿಯಾಗಿ ಅಣೆಕಟ್ಟೆ ಮತ್ತು ಹಿನ್ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಒಳಹರಿವು ಕೂಡ ಸಂಪೂರ್ಣ ಕ್ಷೀಣಿಸುವ ಹಂತಕ್ಕೆ ತಲುಪಿದೆ. ಇದಲ್ಲದೇ ನದಿಯಲ್ಲೂ ನೀರಿನ ಪ್ರಮಾಣ ಕುಸಿತ ಕಾಣುತ್ತಿರುವುದರಿಂದ ಜಲಚರಗಳನ್ನು ರಕ್ಷಿಸುವ ಉದ್ದೇಶದಿಂದ ಜಲಾಶಯದ ಹೊರ ಹರಿವನ್ನು ಹೆಚ್ಚಿಸುವ ಅನಿವಾರ್ಯತೆಯೂ ಎದುರಾಗಿದೆ.
ಜಲಾಶಯದಲ್ಲಿ ಈಗಿರುವ ಒಟ್ಟು ನೀರಿನ ಪ್ರಮಾಣದಲ್ಲಿ 4 ಟಿಎಂಸಿ ಡೆಡ್ ಸ್ಟೋರೇಜ್ ಆಗಿರುವುದರಿಂದ, ವಾಸ್ತವವಾಗಿ ಬಳಕೆಗೆ ಲಭ್ಯವಿರುವ ನೀರು ಕೇವಲ 13 ಟಿಎಂಸಿ ಮಾತ್ರವಾಗಿದೆ. ಈ ನೀರನ್ನು ನಾಲೆಗೆ ಹರಿಸಿದರೆ, ಕುಡಿಯುವ ನೀರಿಗೆ ಹಾಹಾಕಾರ ಎದುರಾಗಲಿದೆ ಎಂಬ ಆತಂಕವೂ ಕಾಣುತ್ತಿದೆ.
ಬತ್ತಿ ಹೋಗುತ್ತಿವೆ ಕೆರೆ-ಕಟ್ಟೆ:
ಜಿಲ್ಲೆಯ ಹಲವೆಡೆ ಕೆರೆ-ಕಟ್ಟೆಗಳು ಈಗಾಗಲೇ ಬತ್ತಿ ಹೋಗಿದ್ದು, ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ನೀರನ್ನು ಕಾಲುವೆಗಳ ಮೂಲಕ ಕೆರೆಗಳಿಗೆ ಹರಿಸಿ ಜಾನುವಾರುಗಳಿಗೆ ನೆರವಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ನೀರಿನ ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು, ಅನವಶ್ಯಕ ಹೊರಹರಿವು ತಡೆಯುವುದು ಹಾಗೂ ಮಳೆಗಾಲದವರೆಗೆ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಹಂಚಿಕೆ ಮಾಡುವುದು ಅಗತ್ಯವಾಗಿದೆ. ಇಲ್ಲವಾದರೆ ಬೇಸಿಗೆಯ ಕೊನೆಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.
ಬಳಕೆಗೆ 13 ಟಿಎಂಸಿ ಮಾತ್ರ ಲಭ್ಯ:
ಪ್ರಸ್ತುತ ಜಲಾಶಯದಲ್ಲಿ 17.796 ಟಿಎಂಸಿ ನೀರಿದ್ದರೂ, ಇದರಲ್ಲಿ 4.37 ಟಿಎಂಸಿ ಡೆಡ್ ಸ್ಟೋರೇಜ್ ಆಗಲಿದ್ದು, ಬಳಸಲು 13 ಟಿಎಂಸಿ ಮಾತ್ರ ಲಭ್ಯವಾಗಲಿದೆ. ಈ 13 ಟಿಎಂಸಿ ನೀರಿನಲ್ಲೇ ಮಳೆಗಾಲದವರೆಗೂ ಬಳಸಬೇಕಿದೆ. ಹಾಸನ ನಗರಕ್ಕೆ ನಿತ್ಯ 30ರಿಂದ 35 ಎಂಎಲ್‌ಡಿ (ಮಿಲಿಯನ್ ಲೀಟರ್ ಪರ್ ಡೇ) ನೀರಿನ ಅತ್ಯವಿದೆ. ಜಿಲ್ಲೆಯ ಸಕಲೇಶಪುರ, ಹೊಳೆನರಸೀಪುರಕ್ಕೆ ನದಿಯಿಂದಲೇ ನೇರವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಈಗಾಗಲೇ ನಗರದ ಸಾಕಷ್ಟು ಭಾಗಗಳಿಗೆ ಹೇಮಾವತಿ ಜಲಾಶಯದ ನೀರು ಪೂರೈಕೆಯಾಗುತ್ತಿಲ್ಲ. ಅಮೃತ್ ಯೋಜನೆ, ಜಲಜೀವನ್ ಮಿಷನ್ ಯೋಜನೆಗಳಿಗೆ ಜಲಾಶಯ ನೀರು ಬಳಕೆಯಾಗಬೇಕಿರುವುದರಿಂದ ಮುಂದಿನ ದಿನಗಳಲ್ಲಿ ಕುರಿಯುವ ನೀರಿಗೂ ಸಮಸ್ಯೆಯಾದರೂ ಆಶ್ಚರ್ಯವಿಲ್ಲ.
22 ದಿನಗಳಲ್ಲಿ 1 ಟಿಎಂಸಿ ಖಾಲಿ:
ಕಳೆದ 22 ದಿನಗಳಲ್ಲೇ ಸುಮಾರು 1 ಟಿಎಂಸಿ ನೀರು ಕಡಿಮೆಯಾಗಿದೆ. ಏಪ್ರಿಲ್ 1ರಂದು 18.680 ಟಿಎಂಸಿ ಇದ್ದ ನೀರಿನ ಮಟ್ಟ, ಏಪ್ರಿಲ್ 22ರ ವೇಳೆಗೆ 17.796 ಟಿಎಂಸಿಯಷ್ಟು ಗಣನೀಯವಾಗಿ ಇಳಿಕೆಯಾಗಿದೆ. ಇದು ಬಿಸಿಲಿನ ಪ್ರಖರತೆಯ ಪರಿಣಾಮ ಸ್ಪಷ್ಟವಾಗಿ ಗೋಚರಿಸುವಂತೆ ಮಾಡಿದೆ.
ಜಲಾಶಯದ ನೀರಿನ ಮಟ್ಟ:
ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922 ಅಡಿಗಳಾಗಿದ್ದು, ಬುಧವಾರ ನೀರಿನ ಮಟ್ಟ 2896.65 ಅಡಿಗಳಷ್ಟಿದೆ. ಜಲಾಶಯವು 37.103 ಟಿಎಂಸಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 17.796 ಟಿಎಂಸಿ ನೀರಿನ ಸಂಗ್ರಹವಾಗಿದೆ. 33 ಕ್ಯೂಸೆಕ್ ಒಳಹರಿವಿದೆ. ಜಲಾಶಯದಿಂದ ನದಿಗೆ 415 ಕ್ಯೂಸೆಕ್ ಹೊರಬಿಡಲಾಗುತ್ತಿದೆ.
2025ರಲ್ಲಿ ಇದೇ ದಿನ ನೀರಿನ ಮಟ್ಟ 2899.45 ಅಡಿಗಳು, 19.373 ಟಿಎಂಸಿ ನೀರಿನ ಸಂಗ್ರಹ ಹೊಂದಿತ್ತು. 60 ಕ್ಯೂಸೆಕ್ ಒಳಹರಿವು ಬರುತ್ತಿದ್ದು, 380 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿತ್ತು.
ಜಿಲ್ಲೆಯಲ್ಲಿ ನೀರಿನ ಅಭಾವ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡಲಾಗಿದೆ. ಹಿಂದೆ ಎಲ್ಲೆಲ್ಲಿ ಸಮಸ್ಯೆಗಳು ಉದ್ಭವಿಸುತ್ತಿತ್ತು ಆ ಪ್ರದೇಶಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡಲಾಗಿದೆ. ಹಾಗೂ ಅಗತ್ಯ ಬಿದ್ದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮ ವಹಿಸಲು ನಿರ್ದೇಶನ ನೀಡಲಾಗಿದೆ.
ಕೆ.ಎಸ್.ಲತಾ ಕುಮಾರಿ
ಜಿಲ್ಲಾಧಿಕಾರಿ ಹಾಸನ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net