ಅನೈತಿಕ ಸಂಬಂಧದ ಜಗಳ ಕೊಲೆಯಲ್ಲಿ ಅಂತ್ಯ

ಆನಂದ್
ಆನಂದ್
Published on

ಪ್ರಮುಖ ಮುಖ್ಯಾಂಶಗಳು

  • ಅನೈತಿಕ ಸಂಬಂಧದ ಜಗಳ ಕೊಲೆಯಲ್ಲಿ ಅಂತ್ಯ
  • ಸ್ನೇಹಿತನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿ ಆರೋಪಿ ಪರಾರಿ
ಹಾಸನ: ಮಹಿಳೆಯೊಂದಿಗಿನ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಇಬ್ಬರು ಪುರುಷರ ನಡುವೆ ಶುರುವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.
ಕೆ.ಆರ್.ಪುರಂ ಬಡಾವಣೆಯಲ್ಲಿ ಗುರುವಾರ ಬೆಳಗ್ಗೆ ಪ್ರಕರಣ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಅಡುಗೆ ಗುತ್ತಿಗೆದಾರ ಹಾಗೂ ನಗರದ ಹೊರ ವಲಯದ ಪವನಪುತ್ರ ರೆಸಾರ್ಟ್‌ನಲ್ಲಿ ಮ್ಯಾನೇಜರ್ ಆಗಿದ್ದ ಆನಂದ್ (47) ಎಂದು ಗುರುತಿಸಲಾಗಿದೆ. ಧರಣೇಂದ್ರ ಪ್ರಕಾಶ್ ಕೊಲೆ ಆರೋಪಿಯಾಗಿದ್ದು, ಕೃತ್ಯ ನಂತರ ಪರಾರಿಯಾಗಿದ್ದಾನೆ.
ಕೊಲೆಯಾದ ಆನಂದ್ ಮತ್ತು ಧರಣೇಂದ್ರ ಪ್ರಕಾಶ್ ಪರಸ್ಪರ ಸ್ನೇಹಿತರಾಗಿದ್ದು, ಇಬ್ಬರೂ ಒಂದೇ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಆದರೆ ಇದು ಇಬ್ಬರಿಗೂ ತಿಳಿದಿರಲಿಲ್ಲ. ಅಷ್ಟೇ ಗೌಪ್ಯತೆ ಕಾಪಾಡಿಕೊಂಡಿದ್ದರು. ಈ ನಡುವೆ ಮದ್ಯ ಸೇವಿಸುವ ವೇಳೆ ಕರೆಯೊಂದು ಬಂದಾಗ ಅಕ್ರಮ ಸಂಬಂಧದ ಗುಟ್ಟು ರಟ್ಟಾಗಿದೆ.
ಎಣ್ಣೆ ಮತ್ತಿನಲ್ಲಿ ಇಬ್ಬರ ನಡುವೆ ತಡರಾತ್ರಿವರೆಗೂ ಜಗಳ ನಡೆದಿದೆ. ಗಲಾಟೆ ಬಳಿಕ ಇಬ್ಬರೂ ಮನೆಗೆ ತೆರಳಿದ್ದರು. ಮತ್ತಿನ ಅಮಲಿನಲ್ಲಿ ಜಗಳ ಮುಗೀತು ಅನ್ನುಕೊಳ್ಳುವಷ್ಟರಲ್ಲಿ ಮನೆಗೆ ತೆರಳಿದ ಕೆಲವೇ ಹೊತ್ತಿನಲ್ಲಿ ಆರೋಪಿ ಧರಣೇಂದ್ರಪ್ರಕಾಶ್, ಆನಂದ್‌ಗೆ ಕರೆ ಮಾಡಿ ಮಹಿಳೆ ಮನೆ ಬಳಿ ಬರುವಂತೆ ಹೇಳಿದ್ದಾನೆ. ಮಧ್ಯರಾತ್ರಿ 2.45 ರ ಸುಮಾರಿನಲ್ಲಿ ಆನಂದ್ ಬೈಕ್‌ನಲ್ಲಿ ಬರುತ್ತಿದ್ದಂತೆಯೇ ಧರಣೇಂದ್ರ ಪ್ರಕಾಶ್, ಮೂರ‌್ನಾಲ್ಕು ಬಾರಿ ಆನಂದ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಸುದ್ದಿ ತಿಳಿದ ಕೂಡಲೇ ಎಸ್ಪಿ ಶುಭಾನ್ವಿತಾ ಹಾಗೂ ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈ ನಡುವೆ ಇಡೀ ಪ್ರಕರಣಕ್ಕೆ ಕಾರಣಳಾದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಪೊಲೀಸರು, ಘಟನಾ ಸ್ಥಳಕ್ಕೂ ಆಕೆಯನ್ನು ಕರೆತಂದು ಪರಿಶೀಲನೆ ನಡೆಸಿದರು.
ಈ ಕುರಿತು ಮಾಹಿತಿ ನೀಡಿದ ಎಸ್ಪಿ ಶುಭನ್ವಿತಾ, ಹತ್ಯೆಯಾಗಿರುವ ಆನಂದ್ ಅವರ ದೇಹದ ಮೂರು ಕಡೆಗಳಲ್ಲಿ ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಅದಾದ ಬಳಿಕ ಎಸ್ಕೇಪ್ ಆಗಿದ್ದಾನೆ. ಕೊಲೆಗೆ ಬಳಸಿದ ಆಯುಧ ನಮಗೆ ಸಿಕ್ಕಿದೆ. ಸಿಸಿ ಟಿವಿ ದೃಶ್ಯಾವಳಿಯನ್ನೂ ಸಂಗ್ರಹಿಸಲಾಗಿದೆ. ಇದಕ್ಕೆ ಪೂರಕವಾಗಿ ಪ್ರತ್ಯಕ್ಷ ದರ್ಶಿಯೊಬ್ಬರು ಸಿಕ್ಕಿದ್ದು, ಅವರಿಂದ ಹೇಳಿಕೆ ಪಡೆಯಲಾಗುತ್ತಿದೆ. ಆರೋಪಿ ಪತ್ತೆಗೆ ತನಿಖಾ ತಂಡ ರಚನೆ ಮಾಡಲಾಗಿದೆ. ಕೊಲೆ ಆರೋಪಿಯ ಗುರುತು ಪತ್ತೆಯಾಗಿದ್ದು, ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net