ಪ್ರಸ್ತುತ 6 ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಲ್ಲರೂ ಸುಲಲಿತವಾಗಿ ಕನ್ನಡ ಮಾತನಾಡುತ್ತಾರೆ. ವಚನಗಳ ಓದುವಿಕೆ, ಕಥೆ, ಕವನ ಹೇಳುವುದು. ಪ್ರಾರ್ಥನಾ ಗೀತೆಗೆ ಬಿಹಾರದ ಮಕ್ಕಳೇ ಮೊದಲ ಸಾಲಿನಲ್ಲಿರುತ್ತಾರೆ. ನಮ್ಮ ಅಪ್ಪ-ಅಮ್ಮ ಚಿಂದಿ ಆಯುತ್ತಾರೆ, ನಾವು ಸೈನಿಕರಾಗುತ್ತೇವೆ, ವೈದ್ಯ, ಶಿಕ್ಷಕ ಹೀಗೆ ತಮ್ಮದೇ ಕನಸುಗಳನ್ನು ಬಿಚ್ಚಿಡುತ್ತಾರೆ. ಆರ್ಥಿಕವಾಗಿ ತೀರಾ ದುರ್ಬಲರಾಗಿರುವ ವಿದ್ಯಾರ್ಥಿಗಳಿಗೆ ಗ್ರಾಮಸ್ಥರೇ ಯೂನಿಫಾರ್ಮ್, ನೋಟ್‌ಬುಕ್ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸುತ್ತಿದ್ದಾರೆ. ತಿಂಗಳಿಗೆ 8 ಸಾವಿರ ರೂ. ಆಟೋ ಬಾಡಿಗೆಯನ್ನು ಶಿಕ್ಷಕಿ ಪ್ರಮೀಳಾ ಭರಿಸುತ್ತಿದ್ದಾರೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಇಂತಹ ಸಕಾರಾತ್ಮಕ ಬದಲಾವಣೆಗಳು ಸಾಧ್ಯ ಎಂಬುದಕ್ಕೆ ಶಿಕ್ಷಕಿ ಪ್ರಮೀಳಾ ಅವರು ಸಾಕ್ಷಿಯಾಗಿದ್ದಾರೆ.