ಆಲೂ ಬಿತ್ತನೆಗೆ ಬಾರದ ವರುಣ

ದೊಡ್ಡಕೂಂಡಗೊಳದಲ್ಲಿ ಆಲುಗಡ್ಡೆ ಬೆಳೆಗೆ ಭೂಮಿ ಸಿದ್ಧಗೊಳಿಸಿರುವುದು.
ದೊಡ್ಡಕೂಂಡಗೊಳದಲ್ಲಿ ಆಲುಗಡ್ಡೆ ಬೆಳೆಗೆ ಭೂಮಿ ಸಿದ್ಧಗೊಳಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಆಲೂ ಬಿತ್ತನೆಗೆ ಬಾರದ ವರುಣ
  • ಮಳೆಗಾಗಿ ಕಾದು ಕುಳಿತಿರುವ ಬೆಳೆಗಾರರು
  • ತೋಟಗಾರಿಕೆ ಇಲಾಖೆಯಿಂದ ಉತ್ತೇಜನಕ್ಕೆ ನಾನಾ ಕಾರ್ಯಕ್ರಮ
ಕೆ.ಆರ್.ಪ್ರಸಿನ್ ಹಾಸನ
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಆಲೂಗಡ್ಡೆ ಬಿತ್ತನೆಗೆ ರೈತರು ಸಿದ್ಧರಾಗಿದ್ದು, ವರುಣನ ಆಗಮನಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಬೆಳೆಗಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಿಲ್ಲಾಡಳಿತ ಬಿತ್ತನೆ ಆಲೂಗಡ್ಡೆ ಮಾರಾಟ ಪ್ರಾರಂಭಿಸಿದೆ. ಆದರೆ, ಹದ ಮಳೆಯಾಗದ ಕಾರಣ ರೈತರು ಬಿತ್ತನೆ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ. ಸ್ವಲ್ಪ ಮಳೆಯಾದರೂ ಭೂಮಿ ಸಿದ್ಧಪಡಿಸಿಕೊಳ್ಳಬಹುದು. ಹೀಗಾಗಿ ರೈತರು ಆಕಾಶದತ್ತ ಮುಖ ಮಾಡುವಂತಾಗಿದೆ.
ತಾಲೂಕಿನ ಚಿಕ್ಕಕೊಂಡಗೊಳ, ದೊಡ್ಡಕೊಂಡಗೊಳು, ನಿಟ್ಟೂರು, ಸಾಲಗಾಮೆ, ಹಳೇಬೀಡು, ಗೊರೂರು, ಹೊಳೆನರಸೀಪುರ, ಅರಕಲಗೂಡು ಭಾಗದಲ್ಲಿ ಆಲೂಗಡ್ಡೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ವಾರದಲ್ಲಿ ಮಳೆ ಸುರಿಯದೆ ಇದ್ದರೆ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗುವುದು ಮಾತ್ರವಲ್ಲದೆ ಫಸಲಿನ ಮೇಲೆ ಪರಿಣಾಮ ಬೀರಲಿದೆ. ನಂತರ ಜೋಳ ಬೆಳೆ ಕೈಗೊಳ್ಳಲು ಸಮಸ್ಯೆಯಾಗುವ ಆತಂಕ ರೈತರನ್ನು ಕಾಡುತ್ತಿದೆ.
15 ಸಾವಿರ ಹೆಕ್ಟೇರ್ ಗುರಿ
ಆಲೂಗಡ್ಡೆ ಬೆಳೆಗೂ ಹಾಸನ ಜಿಲ್ಲೆಗೂ ಅವಿನಾಭಾವ ನಂಟಿದೆ. ದಶಕಗಳ ಹಿಂದೆ 30 ಸಾವಿರ ಹೆಕ್ಟೇರ್‌ವರೆಗೆ ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಅಂಗಮಾರಿ ರೋಗ, ಹವಾಮಾನ ಬದಲಾವಣೆ, ಬೆಲೆ ಕುಸಿತ ಹೀಗೆ ನಾನಾ ಕಾರಣಗಳಿಂದ ಬಿತ್ತನೆ ಪ್ರದೇಶ ಇಳಿಕೆಯಾಗುತ್ತಲೇ ಬಂದಿದೆ. ಕಳೆದ ವರ್ಷ ಕೇವಲ 4 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಕೈಗೊಳ್ಳಲಾಗಿದೆ. ಶತಾಯಗತಾಯ ಈ ಬಾರಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಲೇಬೇಕೆಂದು ಪಣ ತೊಟ್ಟಿರುವ ತೋಟಗಾರಿಕೆ ಇಲಾಖೆ ಕಳೆದ ಆರು ತಿಂಗಳಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದೇ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಆಲೂಗಡ್ಡೆ ಮೇಳ, ರೈತರಿಗೆ ಅರಿವು ಕಾರ್ಯಾಗಾರ, ತೋಟಗಾರಿಕೆ ವಿಜ್ಞಾನಿಗಳಿಂದ ತರಬೇತಿ, ಬೀಜೋತ್ಪಾದನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಬಿತ್ತನೆ ಆಲೂಗಡ್ಡೆ ವಿತರಣೆಯಲ್ಲಿ ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ಕ್ರಮಗಳನ್ನು ಕೂಡ ಕೈಗೊಳ್ಳಲಾಗಿದೆ. ಪಂಜಾಬ್‌ನಿಂದ ತರಿಸಿಕೊಳ್ಳುವ ಆಲೂಗಡ್ಡೆಯನ್ನು ಸಂಸ್ಕರಿಸುವ ನಿಟ್ಟಿನಲ್ಲಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಲಾಗಿದೆ. ಬಿತ್ತನೆ ಕಾರ್ಯ ಸುಗಮವಾಗಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ನಡೆಸಲಾಗಿದೆಯಾದರೂ ವರುಣನ ಮುನಿಸು ಎಲ್ಲ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿದೆ.
ಇಷ್ಟೊತ್ತಿಗೆ ನಾಲ್ಕೈದು ಬಾರಿ ಮಳೆಯಾಗಿದ್ದರೆ ಆಲೂಗಡ್ಡೆ ಬೆಳೆಗೆ ಅನುಕೂಲವಾಗುತ್ತಿತ್ತು. ಬಿತ್ತನೆ ಆಲೂಗಡ್ಡೆ ಮೊಳಕೆಯೊಡೆಲು ಸಾಧ್ಯವಾಗುತ್ತಿಲ್ಲ. ಕೊಳವೆ ಬಾವಿ ಸೌಲಭ್ಯವಿರುವ ರೈತರು ಬಿತ್ತನೆ ಪ್ರಾರಂಭಿಸಿದ್ದಾರೆ. ಮಳೆಯಾದರೆ ಅನುಕೂಲವಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೇಶ್ ತಿಳಿಸಿದ್ದಾರೆ.
ಶೇ.90 ಕುಂಠಿತ
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಕೊರತೆಯಿಂದ ಶೇ.90 ರಷ್ಟು ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಮತ್ತೊಂದೆಡೆ ಮುಂಗಾರು ಹಂಗಾಮಿಗೆ 55,696 ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದು ಕೊರತೆಯಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಜನವರಿ 1ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 10.3 ಸೆಂ.ಮೀ. ಇದ್ದರೆ 7.6 ಸೆಂ.ಮೀ. ಸುರಿದಿದೆ. ಜಿಲ್ಲಾದ್ಯಂತ ಶೇ. 30ರಷ್ಟು ಮಳೆ ಕೊರತೆಯಾಗಿದೆ. ಸುಮಾರು 5,500 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಹೆಸರು, ಉದ್ದು, ಅಲಸಂದೆ ಸೇರಿದಂತೆ ಇತರ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಲಾಗುತ್ತದೆ. ಆದರೆ, ಮಳೆ ಕೊರತೆ ಕಾರಣ ಸುಮಾರು 4 ಸಾವಿರ ಹೆಕ್ಟೆರ್‌ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. ಬಿತ್ತನೆ ಪೂರ್ವ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.
ಆಲೂಗಡ್ಡೆ ಬಿತ್ತನೆಗೆ ರೈತರು ತಯಾರಾಗಿದ್ದಾರೆ. ಹಾಸನದ ಎಪಿಎಂಸಿಯಲ್ಲಿ ಬಿತ್ತನೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುತ್ತಿದ್ದು, ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಮ್ಮ ನಿರೀಕ್ಷೆಯಂತೆ ಇಷ್ಟೊತ್ತಿಗೆ ನಾಲ್ಕೈದು ಬಾರಿ ಮಳೆ ಬೀಳಬೇಕಿತ್ತು. ಈ ವಾರದಲ್ಲಿ ವರುಣ ಕೃಪೆ ತೋರುವ ಸಾಧ್ಯತೆಯಿದ್ದು ಕಾದು ನೋಡಬೇಕಿದೆ.
ಯೋಗೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ
ಆಲುಗಡ್ಡೆ ಬೆಳೆಯಲು ಸರಿಯಾಗಿ ಭೂಮಿ ಹದವಾಗಿಲ್ಲ. ತೋಟಗಾರಿಕೆ ಇಲಾಖೆಯಿಂದ ಆಲುಗಡ್ಡೆ ಬಿತ್ತನೆ ಬೀಜ ಮಾರಾಟ ಮಾಡುತ್ತಿದ್ದಾರೆ. ಆದರೆ, ಸರಿಯಾಗಿ ಹದ ಮಳೆ ಬಾರದೆ ಬಿತ್ತನೆಗೆ ಕಷ್ಟವಾಗಿದೆ. ಆಲುವಿನಿಂದ ನಷ್ಟ ಅನುಭವಿಸುವ ಸಾಧ್ಯತೆ ಇರುವುದರಿಂದ ಪರ್ಯಾಯವಾಗಿ ಜೋಳ ಬೆಳೆಯುತ್ತೇವೆ.
ಪ್ರಕಾಶ್, ದೊಡ್ಡಕೂಂಡಗೊಳ ರೈತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net