ಅದಾಲತ್‌ನಲ್ಲಿ 5,98,329 ಪ್ರಕರಣಗಳು ಇತ್ಯರ್ಥ

ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ರಾಜಿ ಸಂದಾನದ ಮೂಲಕ ಒಂದಾದ ಜೋಡಿ.
ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ರಾಜಿ ಸಂದಾನದ ಮೂಲಕ ಒಂದಾದ ಜೋಡಿ.
Published on

ಪ್ರಮುಖ ಮುಖ್ಯಾಂಶಗಳು

  • ಅದಾಲತ್‌ನಲ್ಲಿ 5,98,329 ಪ್ರಕರಣಗಳು ಇತ್ಯರ್ಥ
  • ಜಿಲ್ಲಾ ನ್ಯಾಯಾಧೀಶೆ ಹೇಮಾವತಿ ಮಾಹಿತಿ ಮತ್ತೆ ಒಂದಾದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ

ಹಾಸನ:

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಶನಿವಾರ ರಾಜ್ಯಾದ್ಯಂತ ನಡೆದ ರಾಷ್ಟ್ರೀಯ ಲೋಕ ಅದಾಲತ್‌ಗೆ ಹಾಸನ ಜಿಲ್ಲೆಯಾದ್ಯಂತ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಜಿಲ್ಲೆಯ ಎಲ್ಲ ತಾಲೂಕುಗಳನ್ನು ಒಳಗೊಂಡ 44 ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ಲೋಕ ಅದಾಲತ್ ಆಯೋಜನೆಯಾಗಿದ್ದು, ಕಕ್ಷಿದಾರರು, ವಕೀಲರು ಹಾಗೂ ನ್ಯಾಯಾಂಗದ ಸಹಕಾರದಿಂದ ಸಾವಿರಾರು ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ ಎಂದು ಜಿಲ್ಲಾ ನ್ಯಾಯಾಧೀಶೆ ಹೇಮಾವತಿ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಕಟ್ಟಡದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಲೋಕ ಅದಾಲತ್ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯ 44 ನ್ಯಾಯಾಲಯಗಳಲ್ಲಿ ಒಟ್ಟು 96,832 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ ರಾಷ್ಟ್ರೀಯ ಲೋಕ ಅದಾಲತ್‌ಗೆ 7,569 ನ್ಯಾಯಾಲಯದ ಪ್ರಕರಣಗಳು ಹಾಗೂ 6,01,256 ವ್ಯಾಜ್ಯಪೂರ್ವ ಪ್ರಕರಣಗಳನ್ನು ಗುರುತಿಸಲಾಗಿತ್ತು. ಲೋಕ ಅದಾಲತ್ ಪ್ರಕ್ರಿಯೆ ನಡೆಯುತ್ತಿರುವ ಹಂತದಲ್ಲೇ 1,884 ನ್ಯಾಯಾಲಯದ ಪ್ರಕರಣಗಳು ಮತ್ತು 5,96,445 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 5,98,329 ಪ್ರಕರಣಗಳು ಮಧ್ಯಾಹ್ನದ ವರೆಗೆ ಇತ್ಯರ್ಥಗೊಂಡಿವೆ. ಪ್ರಕ್ರಿಯೆ ಇನ್ನೂ ಮುಂದುವರಿದಿರುವುದರಿಂದ ಇತ್ಯರ್ಥವಾಗುವ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.
ನ್ಯಾಯಾಲಯದ ಪ್ರಕರಣಗಳ ಪೈಕಿ ಎನ್‌ಐ ಆಕ್ಟ್ ಪ್ರಕರಣಗಳಲ್ಲಿ 3.04 ಕೋಟಿ ರೂ.ಗೂ ಅಧಿಕ, ಬ್ಯಾಂಕ್ ವಸೂಲಾತಿ ಪ್ರಕರಣಗಳಲ್ಲಿ 3.35 ಕೋಟಿ ರೂ.ಗೂ ಅಧಿಕ, ಇತರೆ ಪ್ರಕರಣಗಳನ್ನು ಸೇರಿಸಿ ಒಟ್ಟು 16.63 ಕೋಟಿ ರೂ.ಗೂ ಅಧಿಕ ಮೊತ್ತದ ರಾಜಿ ಸಂಧಾನ ನಡೆದಿದೆ. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಬ್ಯಾಂಕ್ ವಸೂಲಾತಿ, ಸಂಚಾರ ನಿಯಮ ಉಲ್ಲಂಘನೆ, ಆದಾಯ ಹಾಗೂ ನೀರಿನ ಬಿಲ್ ಸಂಬಂಧಿತ ಪ್ರಕರಣಗಳಿಗೆ ಆದ್ಯತೆ ನೀಡಲಾಗಿದ್ದು, 6.01 ಲಕ್ಷ ಪ್ರಕರಣಗಳಲ್ಲಿ 5.96 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ. ಈ ವಿಭಾಗದಲ್ಲಿ 11.38 ಕೋಟಿ ರೂ.ಗೂ ಅಧಿಕ ಮೊತ್ತದ ರಾಜಿ ಸಂಧಾನವಾಗಿದ್ದು, ನ್ಯಾಯಾಲಯದ ಪ್ರಕರಣಗಳೊಂದಿಗೆ ಒಟ್ಟಾರೆ 28,01,84,939 ಮೊತ್ತದ ಪ್ರಕರಣಗಳು ರಾಜಿ ಮೂಲಕ ಅಂತ್ಯಗೊಂಡಿವೆ. ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿಗೆ ಪರಿಹಾರ ಸಿಕ್ಕಿದೆ ಎಂದು ಹೇಳಿದರು.
ಮೋಟಾರು ವಾಹನ ಅಪಘಾತ ಪರಿಹಾರ (ಎಂವಿಸಿ) ಪ್ರಕರಣಗಳಲ್ಲಿ ಗಮನಾರ್ಹ ಪ್ರಮಾಣದ ಪರಿಹಾರ ಮೊತ್ತ ನಿಗದಿಯಾಗಿದೆ. 2ನೇ ಸೀನಿಯರ್ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಒಂದು ಪ್ರಕರಣದಲ್ಲಿ 1.77 ಕೋಟಿ ರೂ. ಪರಿಹಾರ ಮಂಜೂರಾಗಿದ್ದು, 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 1.60 ಕೋಟಿ, 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 1.40 ಕೋಟಿ, 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 1.30 ಕೋಟಿ ಹಾಗೂ ಇತರ ಹಲವು ಪ್ರಕರಣಗಳಲ್ಲಿ 1.03 ಕೋಟಿ, 59 ಲಕ್ಷ ಮತ್ತು 46 ಲಕ್ಷ ಪರಿಹಾರ ಮೊತ್ತಕ್ಕೆ ರಾಜಿ ಸಂಧಾನ ನಡೆದಿದೆ. ಲೋಕ ಅದಾಲತ್‌ನಲ್ಲಿ ಕೇವಲ ಆರ್ಥಿಕ ವ್ಯಾಜ್ಯಗಳಷ್ಟೇ ಅಲ್ಲದೆ ಕುಟುಂಬ ಕಲಹಗಳಿಗೂ ಸುಖಾಂತ್ಯ ದೊರೆತಿರುವುದು ವಿಶೇಷವಾಗಿತ್ತು. ಹಲವು ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದ ಬಳಿಕ ವೈಮನಸ್ಸಿನಿಂದ ದೂರವಾಗಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಯನ್ನು ನ್ಯಾಯಾಧೀಶರು ಹಾಗೂ ರಾಜಿ ಸಂಧಾನಕಾರರು ಸಮಾಲೋಚನೆ ನಡೆಸಿ ಮತ್ತೆ ಒಂದಾಗುವಂತೆ ಮನವೊಲಿಸಿದರು. ಕೊನೆಗೆ ಇಬ್ಬರೂ ನ್ಯಾಯಾಧೀಶರ ಸಮ್ಮುಖದಲ್ಲಿ ಹೂವಿನ ಹಾರಗಳನ್ನು ಪರಸ್ಪರ ಬದಲಾಯಿಸಿಕೊಂಡು ಹೊಸ ಬದುಕಿಗೆ ಕಾಲಿಟ್ಟ ಹೃದಯಸ್ಪರ್ಶಿ ಘಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ವೇಳೆ ಅಪಘಾತದಲ್ಲಿ ಮೃತ ಪಟ್ಟ ಕುಟುಂಬದವರು ಮಾಧ್ಯಮದೊಂದಿಗೆ ನೋವನ್ನು ಹಂಚಿಕೊಂಡು ರಾಜಿ ಮೂಲಕ ಪರಿಹಾರ ಸಿಕ್ಕ ಬಗ್ಗೆ ಮಾಹಿತಿ ಹಂಚಿಕೊಂಡರು.
ಈ ವೇಳೆ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ ಹಾಗೂ ಇತರೆ ವಿಭಾಗದ ನ್ಯಾಯಾಧೀಶರು ಹಾಗೂ ವಕೀಲರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net