ಹಾಸನ: ನಗರದ ಹೃದಯ ಭಾಗದಲ್ಲಿರುವ ಕಟ್ಟಿನ ಕೆರೆ ಮಾರ್ಕೆಟ್ ಪ್ರದೇಶದಲ್ಲಿ ರಸ್ತೆ ಆಕ್ರಮಿಸಿಕೊಂಡು ನಿರ್ಮಾಣವಾಗಿದ್ದ ಅಕ್ರಮ ಗೂಡಂಗಡಿಗಳ ವಿರುದ್ಧ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ತೆರವುಗೊಳಿಸಲು 5 ದಿನಗಳ ಗಡುವು ನೀಡಿದರು.
ನಗರದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ಪಾದಚಾರಿಗಳಿಗೆ ಅಡಚಣೆ ಹಾಗೂ ಸ್ವಚ್ಛತೆ ಸಮಸ್ಯೆ ಹಿನ್ನೆಲೆಯಲ್ಲಿ ರಸ್ತೆ ಬದಿ ಅಕ್ರಮವಾಗಿ ನಿರ್ಮಿಸಿದ್ದ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಪರಿಸರ ಇಂಜಿನಿಯರ್ ಕೆ.ಆರ್.ಕವಿತಾ ಸೂಚನೆ ನೀಡಿದರು.
ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸಿ, ಈ ಮೊದಲೇ ಗಡುವು ನೀಡಲಾಗಿತ್ತು. ಇದೀಗ ಮತ್ತೆ 5 ದಿನ ವಿಸ್ತರಿಸಲಾಗಿದೆ. ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿ ತೆರವು ಗೊಳಿಸಬೇಕು ಎಂದು ತಿಳಿಸಿದರು. ಇಲ್ಲದಿದ್ದಲ್ಲಿ ಜೆಸಿಬಿ ಮೂಲಕ ಕಠಿಣ ಕಾರ್ಯಾಚರಣೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವ್ಯಾಪಾರಸ್ಥರು ಮನವಿ ಸಲ್ಲಿಸಿದ ಹಿನ್ನೆಲೆ ಈಗಾಗಲೇ ಮಾನವೀಯ ದೃಷ್ಟಿಯಿಂದ ಕಾಲಾವಕಾಶ ನೀಡಲಾಗಿದೆ ಎಂದರು.