ಜಿಲ್ಲೆಯ 1057 ಶಾಲೆಗಳಿಗಿಲ್ಲ ಖಾತೆ

 ಸರ್ಕಾರಿ ಶಾಲೆ
ಸರ್ಕಾರಿ ಶಾಲೆ
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ 1057 ಶಾಲೆಗಳಿಗಿಲ್ಲ ಖಾತೆ
  • ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಸೂಚಿಸಿದ್ದರೂ ವಿಳಂಬ
ಕೆ.ಆರ್.ಪ್ರಸಿನ್ ಹಾಸನ
ಸರ್ಕಾರಿ ಶಾಲೆಯ ಹೆಸರಿಗೆ ಜಮೀನು ಖಾತೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆ ಸೂಚನೆ ಹೊರಡಿಸಿದ್ದರೂ ಜಿಲ್ಲೆಯ 1057 ಶಾಲೆಗಳಿಗೆ ಇನ್ನೂ ಖಾತೆ ಹೊಂದಲು ಸಾಧ್ಯವಾಗಿಲ್ಲ.
ಸರ್ಕಾರಿ ಶಾಲೆಗಳ ಸ್ಥಿರಾಸ್ತಿಗಳನ್ನು ಆಯಾ ಶಾಲೆಗಳ ಹೆಸರಿಗೆ ಖಾತೆ ಮಾಡಿಸಿ ಆರ್‌ಟಿಸಿಯಲ್ಲಿ ನಮೂದಿಸಿ ಕೊಡುವಂತೆ ರಾಜ್ಯ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ 2018ರ ಏ.28ರಂದು ಆದೇಶಿಸಿದೆ. ಈ ಕುರಿತು ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆಯಾದರೂ 6 ವರ್ಷದಲ್ಲಿ 1385 ಶಾಲೆಗಳಿಗೆ ಮಾತ್ರ ಖಾತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2442 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ.
ತಾಲೂಕುವಾರು ವಿವರ:
ಆಲೂರು ತಾಲೂಕಿನಲ್ಲಿ 167 ಶಾಲೆಗಳಿದ್ದು 83 ಖಾತೆ ಆಗಿದೆ. 84 ಶಾಲೆಗಳಿಗೆ ಇನ್ನೂ ಖಾತೆ ಆಗಬೇಕಿದ್ದು ಗ್ರಾಪಂ ವ್ಯಾಪ್ತಿಯಲ್ಲಿ 12, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಹಾಗೂ ತಹಸೀಲ್ದಾರ್ ಖಾತೆ ಮಾಡಬೇಕಾದ ಶಾಲೆಗಳ ಸಂಖ್ಯೆ 70 ಇದೆ. ಅರಕಲಗೂಡು ತಾಲೂಕಿನ 355 ಶಾಲೆಗಳ ಪೈಕಿ 238 ಶಾಲೆಗೆ ಖಾತೆಯಾಗಿದ್ದು, 117 ಶಾಲೆಗಳ ಭವಿಷ್ಯ ಇನ್ನು ಅತಂತ್ರವಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ 7, ಪಟ್ಟಣ ಪಂಚಾಯಿತಿ 11 ಹಾಗೂ ತಹಸೀಲ್ದಾರ್ ಕಚೇರಿಯಲ್ಲಿ 99 ಶಾಲೆಗಳ ಕಡತಗಳಿವೆ. ಅರಸೀಕೆರೆ ತಾಲೂಕಿನಾದ್ಯಂತ 404 ಶಾಲೆಗಳಿದ್ದು 237 ಖಾತೆ ಹೊಂದಿವೆ. 167 ಶಾಲೆಗಳಿಗೆ ಖಾತೆ ಆಗಬೇಕಿದ್ದು ಗ್ರಾಪಂಗೆ 45, ನಗರಸಭೆ 7 ಹಾಗೂ 115 ಶಾಲಾ ದಾಖಲಾತಿ ತಹಸೀಲ್ದಾರ್ ಕಚೇರಿಯಲ್ಲಿವೆ.
ಬೇಲೂರಿನ 280 ಶಾಲೆ ಪೈಕಿ 101 ಶಾಲೆಗೆ ಖಾತೆ ಆಗಿದ್ದು ಇನ್ನೂ 179 ಬಾಕಿ ಇವೆ. ಗ್ರಾಪಂ 60, ಪುರಸಭೆ 2 ಹಾಗೂ ತಹಸೀಲ್ದಾರ್ 117 ಕಡತಗಳ ವಿಲೇವಾರಿ ಮಾಡಬೇಕಿದೆ. ಮೂರು ಶಾಲೆಗಳ ಜಾಗದ ವಿಚಾರ ನ್ಯಾಯಾಲಯ ಮೆಟ್ಟಿಲೇರಿದೆ.
ಚನ್ನರಾಯಪಟ್ಟಣದ 379 ಶಾಲೆಗಳ ಪೈಕಿ 169 ಶಾಲೆಗಳು ಖಾತೆ ಹೊಂದಿದ್ದು, 210 ಶಾಲೆಗಳಿಗೆ ಖಾತೆ ಆಗಿಲ್ಲ. ಹಾಸನ ತಾಲೂಕಿನ 386 ಶಾಲೆಗಳ ಪೈಕಿ 250 ಶಾಲೆಗಳು ಖಾತೆ ಹೊಂದಿವೆ. 136 ಶಾಲೆಗಳು ಇನ್ನು ಪ್ರಗತಿ ಹಂತದಲ್ಲಿದ್ದು ಗ್ರಾಪಂಗೆ 16, ಮಹಾನಗರ ಪಾಲಿಕೆ ವ್ಯಾಪ್ತಿಗೆ 22 ಹಾಗೂ ತಹಸೀಲ್ದಾರ್ ವ್ಯಾಪ್ತಿಗೆ 98 ಶಾಲೆಗಳು ಸೇರಿವೆ. ಹೊಳೆನರಸೀಪುರದ 303 ಶಾಲೆಗಳ ಪೈಕಿ 267 ಶಾಲೆಗೆ ಖಾತೆ ಮಾಡಿಕೊಡಲಾಗಿದೆ. ಬಾಕಿ ಇರುವ 36 ಶಾಲೆಗಳಲ್ಲಿ 21 ಗ್ರಾಪಂ, 8 ಪುರಸಭೆ ಹಾಗೂ 7 ಶಾಲೆಗಳು ತಹಸೀಲ್ದಾರ್ ಕಡೆಯಿಂದ ಖಾತೆ ಆಗಬೇಕಿದೆ. ಸಕಲೇಶಪುರ ತಾಲೂಕಿನ 168 ಶಾಲೆಗಳ ಪೈಕಿ 40 ಶಾಲೆಗಳು ಖಾತೆ ಹೊಂದಿದ್ದರೆ 128 ಶಾಲೆಗಳ ಖಾತೆಯಾಗಬೇಕಿದೆ. ಅದರಲ್ಲಿ ಗ್ರಾಪಂಗೆ 5, ಪುರಸಭೆಯಲ್ಲಿ 6 ಹಾಗೂ 117 ಶಾಲೆಗಳು ತಹಸೀಲ್ದಾರ್ ಕಡೆಯಿಂದ ಸುಖಾಂತ್ಯ ಕಾಣಬೇಕಿದೆ.
ಶಿಕ್ಷಣದ ಮೇಲೆ ಪರಿಣಾಮ:
ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಭೂಮಿ, ಕಟ್ಟಡ, ಕ್ರೀಡಾಂಗಣ, ಕುಡಿಯುವ ನೀರು, ಶೌಚಗೃಹ ಮುಂತಾದ ಆಸ್ತಿಗಳ ಸ್ಪಷ್ಟ ದಾಖಲೆಗಳು ಲಭ್ಯವಿಲ್ಲ. ಕೆಲವು ಕಡೆ ಶಾಲಾ ಜಾಗದ ಮೇಲೆಯೇ ವಿವಾದಗಳು ಹುಟ್ಟಿಕೊಂಡಿರುವುದೂ ಕಂಡುಬರುತ್ತಿದೆ. ಅದರ ಪರಿಣಾಮವಾಗಿ ಶಿಕ್ಷಕರ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಪಾಠ ಬೋಧನೆ ಮಾಡಬೇಕಾದ ಶಿಕ್ಷಕರು ಈಗ ದಾಖಲೆಗಳನ್ನು ಸಂಗ್ರಹಿಸುವುದು, ಅಕಾರಿಗಳ ಮುಂದೆ ವಿವರ ನೀಡುವುದು, ದಾಖಲೆ ಪರಿಶೀಲನೆಗೆ ಹಾಜರಾಗುವುದು ಇತ್ಯಾದಿ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಾಗಿದೆ. ಹೀಗಾಗಿ ಮಕ್ಕಳ ವ್ಯಾಸಂಗದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ.
ಶಾಲೆಯ ಮುಖ್ಯ ಗುರಿಯಾದ ಮಕ್ಕಳ ಕಲಿಕೆ ಮತ್ತು ಅಭಿವೃದ್ಧಿ ಹಿಂದುಳಿಯುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಸರ್ಕಾರಿ ಶಾಲೆಗಳ ಖಾತೆ ಹೊಂದುವುದು ಕಡ್ಡಾಯವೆಂದು ಸರ್ಕಾರ ಆದೇಶಿಸಿದ್ದರೂ ಈ ನಿಟ್ಟಿನಲ್ಲಿ ವೇಗದ ಕೆಲಸ ನಡೆಯುತ್ತಿಲ್ಲ. ಅಕಾರಿಗಳು ಸೂಚಿಸಿದಾಗ, ನ್ಯಾಯಾಲಯ ವಿಚಾರಣೆ ಇದ್ದಾಗ ಮಾತ್ರ ಶಿಕ್ಷಕರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆಯೇ ಹೊರತು ಬೇರೆ ಸಮಯದಲ್ಲಿ ಆ ಕಡೆಗೆ ಯೋಚಿಸುತ್ತಿಲ್ಲವೆಂಬ ಆರೋಪಗಳು ಕೇಳಿಬಂದಿವೆ.
ಜಿಲ್ಲಾ ಉಸ್ತುವಾರಿ ಸಚಿವರು ತ್ವರಿತವಾಗಿ ಖಾತೆ ಮಾಡಲು ನಿರ್ದೇಶಿಸಿದ್ದಾರೆ. ಡಿಸಿ ಅವರು ಪಾಲಿಕೆಯಿಂದ ಹಾಗೂ ತಹಸೀಲ್ದಾರ್ ಅವರು ತಿಂಗಳ ಒಳಗೆ ಪ್ರಕ್ರಿಯೆ ಮುಗಿಸಲು ತಿಳಿಸಿದ್ದಾರೆ. ತಮ್ಮ ಕಡೆಯಿಂದ ಒಂದಷ್ಟು ದಾಖಲಾತಿ ಒದಗಿಸಲು ತಿಳಿಸಿದ್ದಾರೆ. ತ್ವರಿತವಾಗಿ ಖಾತೆ ಮಾಡಿಸಲು ಪ್ರಯತ್ನಿಸಲಾಗುವುದು.
ಚಂದ್ರಶೇಖರ್, ಶಿಕ್ಷಣಾಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net