

ಬಾಗೂರು: ಆರೋಗ್ಯಕರ ಜೀವನ ನಡೆಸಲು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅವಶ್ಯಕ ಎಂದು ಶ್ರೀ ಚೇತನ್ ಗುರೂಜಿ ಹೇಳಿದರು.
ಹೋಬಳಿ ಕೇಂದ್ರದಲ್ಲಿರುವ ದೊಡ್ಡಮ್ಮ ದೇವಿ ಸಮುದಾಯ ಭವನದಲ್ಲಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು. ನಮ್ಮದೇ ತಪ್ಪಾದ ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ಅನಾರೋಗ್ಯಕರ ಅಭ್ಯಾಸಗಳಿಂದ ಆರೋಗ್ಯ ಮತ್ತು ಆಯಸ್ಸನ್ನು ನಾವೇ ಕಳೆದುಕೊಳ್ಳುತ್ತಿದ್ದೇವೆ. ಭೂಮಿಯೇ ಸ್ವರ್ಗವಾಗಿದ್ದು ರೋಗರಹಿತ ಹಾಗೂ ಸಮೃದ್ಧ ಜೀವನ ನಡೆಸಲು ಪ್ರಕೃತಿಯಲ್ಲಿ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವ ಮನೋಭಾವ ನಮ್ಮಲ್ಲಿ ಬೆಳೆಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ನಿಸರ್ಗ ನಮಗೆ ನೀಡಿರುವ ನೈಸರ್ಗಿಕ ಚಿಕಿತ್ಸಾ ವಿಧಾನಗಳು, ಆಹಾರ ಪದ್ಧತಿ ಹಾಗೂ ಆರೋಗ್ಯದಾಯಕ ಜೀವನ ಶೈಲಿಯನ್ನು ಅರಿಯಬೇಕು ಎಂದರು.
ಲಯನ್ಸ್ ಸೇವಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಿ.ಎಚ್.ಶಿವಣ್ಣ ಮಾತನಾಡಿ, ಶಿಬಿರದಲ್ಲಿ ಭಾಗವಹಿಸುವವರಿಗೆ ಅಗತ್ಯ ಸೌಕರ್ಯಗಳನ್ನು ಸಂಸ್ಥೆಯ ವತಿಯಿಂದ ಕಲ್ಪಿಸಿಕೊಡಲಾಗಿದೆ. ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಎನ್.ನಾಗರಾಜ್, ಕಾರ್ಯದರ್ಶಿ ಬಿ.ಕೆ.ಭುವನೇಂದ್ರ, ಖಜಾಂಚಿ ರೇವಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್.ಬಸವರಾಜ್, ನಾರಾಯಣಗೌಡ, ಶಿವಣ್ಣ, ಶ್ರೀನಿವಾಸ್ ಶೆಟ್ಟಿ, ಸ್ವಾಮಿ, ಸುರೇಶ್, ನಂಜೇಶ್, ರಮೇಶ್, ಸಿದ್ದಲಿಂಗಯ್ಯ, ಧರಣೇಶ್, ಅಶೋಕ್ ಇದ್ದರು.