ಮದುವೆ ನಿಶ್ಚಯವಾಗಿದ್ದ ಮಧುಮಗಳಿಗೆ ತಾಳಿಕಟ್ಟಿ ಬಿಗ್ ​ಶಾಕ್​ ಕೊಟ್ಟ ಯುವಕನ ವಿರುದ್ಧ ದೂರು ದಾಖಲು!

Marriage
Published on

ಹಾಸನ: ಸೋಮವಾರ ವಿವಾಹ ನಿಗದಿಯಾಗಿದ್ದ ಮಧುಮಗಳಿಗೆ ಯುವಕನೊಬ್ಬ ಬಲವಂತವಾಗಿ ತಾಳಿಕಟ್ಟಿದ ಆರೋಪ ಕೇಳಿಬಂದಿದೆ.

ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆಂದು ಹೇಳಿ ಮನೆಗೆ ಬಂದು ಬೆದರಿಸಿ ತಾಳಿಕಟ್ಟಿ ಕರೆದೊಯ್ದಿದ್ದಾನೆಂದು ಅರೆಕೆರೆ ಗ್ರಾಮದ ಸತೀಶ್ ಎಂಬ ಯುವಕನ ವಿರುದ್ಧ ಯುವತಿಯ ಪೋಷಕರು ದೂರಿದ್ದಾರೆ.

ಜನವರಿ 25ಕ್ಕೆ ಸುಜಿತ್ ಕೃಷ್ಣ ಎಂಬುವವರ ಜತೆ ಯುವತಿಗೆ ಮದುವೆ ನಿಶ್ಚಯವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವಕನ ಜತೆ ಮದುವೆ ನಿಶ್ಚಯಿಸಿ, ಕುಟುಂಬ ಎಲ್ಲ ತಯಾರಿ ಮಾಡಿಕೊಂಡಿದ್ದರು. ಆದರೆ, ಮದುವೆ ನಿಶ್ಚಯವಾಗಿರುವ ಹುಡುಗಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಆರೋಪಿ ಸತೀಶ್​ ಸ್ನೇಹಿತರ ಬಳಿ ಹೇಳಿಕೊಂಡಿದ್ದ.

ಇತ್ತ ಸತೀಶ್​ ಆತ್ಮಹತ್ಯೆ ಯತ್ನವೂ ನಡೆಸಿದ್ದನಂತೆ. ಹೀಗಾಗಿ ಆತನ ಸ್ನೇಹಿತರು ಸತೀಶ್​ನನ್ನು ಯುವತಿಯ ಮನೆಗೆ ಕರೆದೊಯ್ದು ಅರಿಶಿಣಕೊಂಬು ಕಟ್ಟಿಸಿ ಅಲ್ಲೇ ಮದುವೆ ಮಾಡಿಸಿರುವ ಆರೋಪ ಮಾಡಲಾಗಿದೆ.

ಈ ಸಂಬಂಧ ಯುವತಿಯ ತಾಯಿ ಸಕಲೇಶಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗಳಿಗೆ ಇಷ್ಟವಿಲ್ಲದಿದ್ದರೂ ಬೆದರಿಸಿ ಬಲವಂತವಾಗಿ ಮದುವೆಯಾಗಿದ್ದಾರೆಂದು ದೂರಿದ್ದಾರೆ. ಗೆಳೆಯರ ಜತೆ ಬಂದು ಹೆದರಿಸಿ ತಾಳಿಕಟ್ಟಿ ಕರೆದೊಯ್ದಿದ್ದಾರೆ. ತಮ್ಮ ಮಗಳ ಪ್ರಾಣಕ್ಕೆ ಬೆದರಿಕೆ ಇದ್ದು, ಆಕೆಯನ್ನು ರಕ್ಷಿಸಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ಜನವರಿ 21 ರಂದು ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net