

ಹಾಸನ: ವರ್ಷಕ್ಕೆ 60 ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಹಾಸನ ರೆಡ್ ಕ್ರಾಸ್ ಸಂಸ್ಥೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ರೆಡ್ ಕ್ರಾಸ್ ಅಧ್ಯಕ್ಷೆ ಕೆ.ಎಸ್.ಲತಾಕುಮಾರಿ ಹೇಳಿದರು.
ನಗರದ ಸಾಲಗಾಮೆ ರಸ್ತೆಯಲ್ಲಿರುವ ಭಾರತೀಯ ರೆಡ್ ಕ್ರಾಸ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ಹಾಸನ ರೆಡ್ ಕ್ರಾಸ್ 2024ರ ಏಪ್ರಿಲ್‌ನಿಂದ 2025ರ ಮಾರ್ಚ್ ವರೆಗೆ 60 ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯ. ನಾನು ಸಾಕಷ್ಟು ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ರೆಡ್ ಕ್ರಾಸ್ ಘಟಕ ಇಷ್ಟೊಂದು ಕ್ರಿಯಾಶೀಲವಾಗಿರುವುದನ್ನು ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಡಳಿತದಿಂದ ಪ್ರತಿ ತಿಂಗಳು ಎರಡು ಬಾರಿ ರಸ್ತೆ ಸುರಕ್ಷತಾ ಕಾರ್ಯಕ್ರಮ ಮಾಡುತ್ತೇವೆ. ಈ ನಿಟ್ಟಿನಲ್ಲಿ ರೆಡ್ ಕ್ರಾಸ್ ಪದಾಧಿಕಾರಿಗಳು ನೀಡಿದ ಸಲಹೆಗಳು ನಮಗೆ ನೆರವಾಗಿವೆ. ಶಾಲಾ- ಕಾಲೇಜುಗಳಲ್ಲಿ ರಕ್ತದಾನದ ಅರಿವು ಮೂಡಿಸುವುದು. ಅಪಘಾತ ತಡೆಗಟ್ಟುವಿಕೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುಳಿತು ಉತ್ತಮ ಸಲಹೆ ನೀಡಿದ್ದಾರೆ. ರೆಡ್ ಕ್ರಾಸ್ ಇಷ್ಟೆಲ್ಲಾ ಕ್ರಿಯಾಶೀಲವಾಗಿರಲು ಇಲ್ಲಿನ ಪ್ರತಿ ಸದಸ್ಯರ ಕೊಡುಗೆ ಮಹತ್ವದ್ದಾಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಒಳ್ಳೆಯ ಕೆಲಸ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿದರು. ಅಂಗವಿಕಲರಿಗೆ 3 ಚಕ್ರದ ವಾಹನಗಳ ವಿತರಿಸಲಾಯಿತು. ರೆಡ್ ಕ್ರಾಸ್ ನಿರ್ದೇಶಕರು ಹಾಗು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು. ರೆಡ್ ಕ್ರಾಸ್ ಸಭಾಪತಿ ಎಚ್.ಪಿ. ಮೋಹನ್, ನಿರ್ದೇಶಕ ಎಸ್.ಎಸ್. ಪಾಷಾ, ಅಮ್ಜದ್ ಖಾನ್, ಬಿ.ಆರ್.ಉದಯಕುಮಾರ್, ಕೆ.ಟಿ.ಜಯಶ್ರೀ, ಡಾ.ಎ. ಸಾವಿತ್ರಿ, ಡಾ.ಭಾರತೀ ರಾಜಶೇಖರ್, ಡಾ.ರಂಗಲಕ್ಷ್ಮಿ, ಡಾ.ಅಬ್ದುಲ್ ಬಷೀರ್, ಕುಮಾರ್ ಇತರರಿದ್ದರು.