ಲೆಕ್ಕ ಬೇಕಾದರೆ ಹಾಸನದಿಂದ ಸ್ಪರ್ಧಿಸಿ; ಮಾಜಿ ಸಚಿವ ರೇವಣ್ಣಗೆ ಪಂಥಾಹ್ವಾನ ನೀಡಿದ ಎಂಎಲ್‌ಎ

revanna
Published on

ಹಾಸನ: ರೇವಣ್ಣ ಅವರು ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಹೊಳೆನರಸೀಪುರ ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ನನ್ನನ್ನು ಆಕಸ್ಮಿಕ ಶಾಸಕನೆಂದು ಜರಿದಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಮುಂದಿನ ಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಿದರೆ ಸರಿಯಾದ ಲೆಕ್ಕ ಸಿಗುತ್ತದೆ ಎಂದು ಪಂಥಾಹ್ವಾನ ನೀಡಿದರು.

ಹೊಳೆನರಸೀಪುರ ಶಾಸಕರಿಗೆ ನನ್ನ ಕ್ಷೇತ್ರದ ಬಗ್ಗೆ ಹೆಚ್ಚು ಕಾಳಜಿ ಬೇಡ. ಆ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದರೇ ಸಾಕು. ಉಳಿದ ಕೆಲಸ ಮಾಡಿಸಲು ಹಾಸನ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದಾರೆ. ಆಕಸ್ಮಿಕ ಶಾಸಕನಾಗುವುದಕ್ಕೆ ಲಾಟರಿ ಟಿಕೆಟ್ ಹೊಡೆದಿಲ್ಲ. ಕ್ಷೇತ್ರದ ಜನರು ಮತ ಹಾಕಿ ಗೆಲ್ಲಿಸಿರುವುದರಿಂದ ಶಾಸಕನಾಗಿದ್ದೇನೆ ಎಂದರು.

ಜೆಡಿಎಸ್‌ಗೆ 113 ಸ್ಥಾನ ಯಾವತ್ತೂ ಬಂದಿಲ್ಲವಾದರೂ ಸಚಿವರಾದ ನೀವು ಆಕಸ್ಮಿಕ ಮಂತ್ರಿ ಎಂಬ ಪದಕ್ಕೆ ಸೂಕ್ತ. ರೇವಣ್ಣನವರಿಗೆ ಲೆಕ್ಕಕ್ಕಿದ್ದ ಪ್ರಮುಖ ಕೆ.ಆರ್. ಪೇಟೆ ಮತ್ತು ಶಿರಾ ಎರಡನ್ನು ಲೆಕ್ಕದಿಂದ ಕಳುಹಿಸಿದ್ದೀನಿ. ನನ್ನನ್ನು ಲೆಕ್ಕಕ್ಕೆ ಇಡದಿದ್ದಕ್ಕೆ ಹಾಸನ ಕ್ಷೇತ್ರದಲ್ಲಿ ಜನತೆ ಆಶೀರ್ವಾದದಿಂದ ಗೆದ್ದಿರುವುದು ಎಂದು ತಿರುಗೇಟು ನೀಡಿದರು.

ಅವರಿಗೆ ಲೆಕ್ಕ ಬರುವುದಿಲ್ಲ. ಆದ್ದರಿಂದಲೇ ಮರೆತು ಹೋಗಿರಬಹುದು. ಮೊದಲ ಲೆಕ್ಕವಾಗಿ ಹಾಸನ ಕ್ಷೇತ್ರ ಗೆಲುವು ತೋರಿಸಿದೆ. ಎರಡನೆಯದಾಗಿ ಕೆ.ಆರ್. ಪೇಟೆ, ನಂತರ ಶಿರಾದಲ್ಲಿ ಲೆಕ್ಕ ನೀಡಿದ್ದೇನೆ. ನಾಲ್ಕನೇ ಲೆಕ್ಕ ಬೇಕಿದ್ದರೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಸವಾಲೆಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net