ನೀವು ಹೀಗೆ ಟಾರ್ಚರ್ ಮಾಡಿದ್ರೆ ನಾವು ಬರೆದಿಟ್ಟು ಸಾಯ್ತೆವೆ! ಅರಸೀಕೆರೆ ನಗರಸಭೆ ಸದಸ್ಯೆಯ ಅಳಲು

Hassan Nagarasabha
Published on

ಹಾಸನ: ನೀವು ಇದೇ ರೀತಿ ಕಿರುಕುಳ ನೀಡಿದರೆ ನಾವು ಡೆತ್​ನೋಟ್​ ಬರೆದಿಟ್ಟು ಸಾಯುತ್ತೇವೆ ಎಂದು ಅರಸೀಕೆರೆ ನಗರಸಭೆ ಸದಸ್ಯೆ ಕಲೈಅರಸೀ, ತಮಿಳುನಾಡಿನಿಂದ ವಿಡಿಯೋ ಹರಿಬಿಟ್ಟಿದ್ದಾರೆ.

ಕಲೈ ಅರಸೀ ಅವರು ಅರಸೀಕೆರೆಯ 2ನೇ ವಾರ್ಡ್ ಸದಸ್ಯೆ. ಹಾಸನ ಅರಸೀಕೆರೆ ನಗರಸಭೆ ಜೆಡಿಎಸ್ ಬಂಡಾಯ ಅಭ್ಯರ್ಥಿ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಬಂಡಾಯವೆದ್ದ 7 ಜನ ಸದಸ್ಯರಲ್ಲಿ 2ನೇ ವಾರ್ಡ್​ನ ಕಲೈ ಅರಸೀ ಮನಸ್ಸು ಬದಲಿಸಿ ಮತ್ತೆ ಜೆಡಿಎಸ್​ಗೆ ಸೇರಿದ್ದಾರೆ.

500 ರೂ. ಮುಖ ಬೆಲೆಯ ನೋಟಿನ ಕಂತೆ ಇಟ್ಟು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ವಿರುದ್ಧ ಕಲೈ ಅರಸೀ ಆರೋಪ ಮಾಡಿದ್ದರು. ಸಂತೋಷ್ ಬೆಂಬಲಿಗರು 25 ಲಕ್ಷ ಆಫರ್ ಮಾಡಿದ್ರು. ಮುಂಗಡ 10 ಲಕ್ಷ ರೂ. ಕೊಟ್ಟು ಹೋದರು ಎಂದು ಕಲೈ ಅರಸೀ ಪ್ರೆಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಪ್ರಕರಣ ಸಂಬಧ ಅರಸೀಕೆರೆ ಸದಸ್ಯ ಹರ್ಷವರ್ಧನ್ ಹಾಗೂ ಇನ್ನೊರ್ವ ಸದಸ್ಯೆ ಆಯೇಷ ಪತಿ ಸಿಖಂದರ್ ಎಂಬುವರ ವಿರುದ್ಧ ಕಲೈ ಅರಸೀ ಜಾತಿ ನಿಂದನೆ ಕೇಸ್ ದಾಖಲಿಸಿದ್ದರು.

ಇದೀಗ ವಿಡಿಯೋ ಹರಿಬಿಡುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ. ನಾವು ಹೊಸೂರಿಗೆ ಹೋದರೆ, ಅಲ್ಲಿಯೂ ನಮ್ಮನ್ನು ಬಿಡುತ್ತಿಲ್ಲ. ನಮಗೆ ಯಾವುದೇ ಹಣ ಬೇಡ. ನಮಗೆ ಹೀಗೆ ಹಿಂಸೆ ನೀಡಬೇಡಿ. ಸಿಖಂದರ್, ಹರ್ಷ, ನೀವೆಲ್ಲಾ ದಯವಿಟ್ಟು ಒತ್ತಾಯ ಮಾಡಬೇಡಿ ಎಂದು ಕಲೈ ಅರಸೀ ಹಾಗೂ ಆಕೆಯ ಪತಿ ವಿಡಿಯೋ ಹರಿಬಿಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net