More

    ಕರ್ನಾಟಕದಲ್ಲಿ ಆಡಳಿತ ಸುಧಾರಣೆಗೆ ಮುನ್ನುಡಿ; ಆಯೋಗ-2ರ ಮೊದಲ ವರದಿ ಸಲ್ಲಿಕೆ..

    ಕಾಲಕ್ಕೆ ತಕ್ಕಂತೆ ಮತ್ತು ಭವಿಷ್ಯದ ದೃಷ್ಟಿಯಿಂದ ಆಡಳಿತ ಹಾಗೂ ಆಡಳಿತ ವ್ಯವಸ್ಥೆಗಳನ್ನು ಮತ್ತೊಮ್ಮೆ ಸಮಗ್ರವಾಗಿ ಮೌಲ್ಯಮಾಪನ ಮಾಡುವ ಅವಶ್ಯಕತೆ ಕಂಡುಕೊಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ನ್ನು ರಚಿಸಿದ್ದರು. ಸರ್ಕಾರದ ನಿಕಟಪೂರ್ವ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ನೇತೃತ್ವದ ಆಯೋಗವು 2021ರ ಜನವರಿ 7ರಂದು ಅಧಿಕೃತವಾಗಿ ಚಟುವಟಿಕೆ ಆರಂಭಿಸಿತ್ತು. ಇದೀಗ ಮೊದಲ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯ ಮುಖ್ಯಾಂಶಗಳ ವಿವರ ಇಲ್ಲಿದೆ.

    ನಾಗರಿಕ ಆಧಾರಿತ ಸೇವೆಗಳು ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಹಾಗೂ ನಾಗರಿಕ ಸೇವೆಗಳ ಇ-ಸೇವಾ ವಿತರಣೆಯನ್ನು ಮತ್ತು ಕೆಲಸದ ಪ್ರಕ್ರಿಯೆಗಳನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ಪರಿಶೀಲಿಸಲು ಆಯೋಗವು ಆರಂಭದಲ್ಲಿ ನಿರ್ಧರಿಸಿತ್ತು. ಆ ಪ್ರಕಾರ, ಅತಿ ಹೆಚ್ಚು ಸಾರ್ವಜನಿಕ ಸಂಪರ್ಕ ಹೊಂದಿದ ಮತ್ತು ನಾಗರಿಕ ಆಧಾರಿತ ಸೇವೆಗಳಿಗಾಗಿ ಬಂದ ಎಲ್ಲಾ ಅರ್ಜಿಗಳಲ್ಲಿ ಸುಮಾರು ಶೇ.80ರಷ್ಟು ಅರ್ಜಿಗಳನ್ನು ಪಡೆದ ಕಂದಾಯ, ಸಾರಿಗೆ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯನ್ನು ಗುರುತಿಸಿತು. ಬಳಿಕ ಸಾರ್ವಜನಿಕ ನೀತಿ ವಿಷಯಗಳಲ್ಲಿ ಪರಿಣತಿ ಹೊಂದಿರುವ ಐಐಎಂಬಿ, ಐಐಎಸ್ಸಿ, ಎನ್​ಎಲ್​ಎಸ್​ಐಯು, ಪಿಎಸಿ, ಐಐಪಿಎನಂತಹ ಪ್ರಸಿದ್ಧ ಸಂಸ್ಥೆಗಳೊಂದಿಗೆ ಸಮಾಲೋಚನಾ ಸಭೆಗಳನ್ನು ನಡೆಸಿತು.

    ವರದಿ ತಯಾರಿ ಹೇಗಾಯಿತು?

    ಆಯೋಗವು ಹೋಬಳಿ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕೆಲಸ ಮಾಡುವ ಹಾಗೂ ಜನರ ಮಧ್ಯೆ ಕಾರ್ಯನಿರ್ವಹಿಸುವ ಸಿಬ್ಬಂದಿಯೊಂದಿಗೆ ಹಲವಾರು ಗುಂಪುಚರ್ಚೆ ನಡೆಸಿತು. 57 ಐಎಎಸ್, ಕೆಎಎಸ್, ಪ್ರೊಬೆಷನರಿ ಅಧಿಕಾರಿಗಳ ಗುಂಪು ಕ್ಷೇತ್ರ ಸಮೀಕ್ಷೆ ನಡೆಸಿತು. ಕಾಲ್ ಸೆಂಟರ್​ನಿಂದ ದೂರವಾಣಿ ಮೂಲಕ ಸೇವಾ ಬಳಕೆದಾರರಿಗೆ ಕರೆ ಮಾಡಿ ಅವರಿಂದ ಪ್ರತಿಕ್ರಿಯೆ ಪಡೆದಿದೆ. ಅಷ್ಟೇ ಅಲ್ಲದೇ ಮುಖ್ಯಮಂತ್ರಿ, ಸಚಿವ ಸಂಪುಟ ಸದಸ್ಯರು, ತಜ್ಞರು, ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಅವರ ಮಾರ್ಗದರ್ಶನ, ಸಲಹೆ ಪಡೆಯಿತು. ಒಟ್ಟಾರೆ ಅಭಿಪ್ರಾಯ, ಪ್ರತಿಕ್ರಿಯೆ, ಚರ್ಚೆ, ಅಧ್ಯಯನದ ಆಧಾರದ ಮೇಲೆ ಆಯೋಗವು ಮೊದಲ ವರದಿ ಸಲ್ಲಿಸಿದೆ.

    ಮೌಲ್ಯಮಾಪನ

    ಸೆಂಟರ್ ಫಾರ್ ಓಪನ್ ಡಾಟಾ ರಿಸರ್ಚ್ (ಸಿಒಡಿಆರ್) ಮತ್ತು ಮೆ.ಕೆಪಿಎಂಜಿ ಸಂಸ್ಥೆಗಳು ಪ್ರತಿ ಆನ್​ಲೈನ್ ಸೇವೆಯನ್ನು ಡಮ್ಮಿ ಲಾಗಿನ್ ಮಾಡುವ ಮೂಲಕ ಪರೀಕ್ಷಿಸಿ ಎನ್​ಇಎಸ್​ಡಿಎ ಚೌಕಟ್ಟಿನ ಎಲ್ಲಾ 77 ಮಾರ್ಗಸೂಚಿಗಳನ್ನು ಸೇವಾ ಪೋರ್ಟಲ್ ಅನುಸರಿಸಿದೆಯೇ ಎಂದು ಮೌಲ್ಯಮಾಪನ ಮಾಡಲಾಯಿತು.

    ಸಾರಿಗೆ ಇಲಾಖೆಗೆ ಪ್ರಮುಖ ಶಿಫಾರಸುಗಳು

    1. ಪ್ರಸ್ತುತ ಆರ್​ಟಿಒ ಸೇವೆಗಳಿಗೆ ನಾಗರಿಕರು ಕಾಗದದ ಅರ್ಜಿ, ಆನ್​ಲೈನ್ ಅರ್ಜಿ ಎರಡರಲ್ಲೂ ನೀಡುತ್ತಿದ್ದಾರೆ. ಎಲ್ಲ ಸೇವೆಗಳನ್ನು ಕಾಗದರಹಿತವಾಗಿಸಬೇಕು.

    2. ನಗದು ಪಾವತಿಗಾಗಿ ಆರ್​ಟಿಒ ಕಚೇರಿಗಳಲ್ಲಿ ತೆಗೆದುಕೊಳ್ಳುವ ಸಮಯ ಮತ್ತು ನಗದು ವ್ಯವಹಾರ ಕಡಿಮೆ ಮಾಡಲು, ಕ್ಯೂಆರ್ ಕೋಡ್ ಆಧಾರಿತ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಪಾವತಿ ಯಂತ್ರಗಳನ್ನು ಸ್ಥಾಪಿಸಬಹುದು.

    3. ಐಟಿ ನಿರ್ದೇಶಕರ 2 ಹುದ್ದೆಗಳಿವೆ (ಒಂದು ಕೆಎಸ್​ಆರ್​ಟಿಸಿಯಲ್ಲಿ ಮತ್ತೊಂದು ಬಿಎಂಟಿಸಿಯಲ್ಲಿ). ಒಂದು ಹುದ್ದೆ ರದ್ದುಪಡಿಸಿ ಎರಡೂ ಐಟಿ ವ್ಯವಸ್ಥೆಗಳ ಉಸ್ತುವಾರಿಗೆ ಒಬ್ಬರನ್ನೇ ನಿರ್ದೇಶಕರನ್ನಾಗಿ ಮಾಡುವುದು ಅಪೇಕ್ಷಣೀಯ.

    ಆಹಾರ, ನಾಗರಿಕ ಸರಬರಾಜು ಇಲಾಖೆ

    1. ಪಡಿತರ ಕಾರ್ಡ್ ಹೊಂದಿರುವವರು ಇಚ್ಛಿಸಿದಲ್ಲಿ ಮನೆ ಬಾಗಿಲಿಗೆ ಪಡಿತರ ಪಡೆದುಕೊಳ್ಳಲು, ಪಡಿತರ ಕಾರ್ಡದಾರರು ಮತ್ತು ನ್ಯಾಯಬೆಲೆ ಅಂಗಡಿಯವರು ಪರಸ್ಪರ ಒಪ್ಪಿದ ಶುಲ್ಕವನ್ನು ಪಾವತಿಸಿ ಪಡಿತರ ಪಡೆದುಕೊಳ್ಳಲು ಅನುಮತಿಸಬಹುದು.

    2. ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಪಡಿತರ ಚೀಟಿ ಡೇಟಾಬೇಸ್​ನೊಂದಿಗೆ ಸಂಯೋಜಿಸಬೇಕು, ಜನನ ಅಥವಾ ಮರಣದ ನೋಂದಣಿಯ ನಂತರ ಪಡಿತರ ಚೀಟಿ ಕುಟುಂಬ ಸದಸ್ಯರ ಪಟ್ಟಿ ಸ್ವಯಂಚಾಲಿತವಾಗಿ ನವೀಕರಣವಾಗುವಂತಾಗಬೇಕು.

    ಕಂದಾಯ ಇಲಾಖೆ ಸುಧಾರಣೆಗೆ ಸಲಹೆ

    1. ಎಲ್ಲಾ ಇಲಾಖೆಗಳು ನಾಗರಿಕರಿಗೆ ಒದಗಿಸುವ 800 ಆನ್​ಲೈನ್ ಸೇವೆಗಳಿಗೆ ಅಟಲ್​ಜೀ ಜನಸ್ನೇಹಿ ಕೇಂದ್ರಗಳು (ಎಜೆಎಸ್​ಕೆ) ಏಕಗವಾಕ್ಷಿ ಏಜೆನ್ಸಿಯಾಗಬೇಕು. ಈ ಎಲ್ಲಾ 800 ಸೇವೆಗಳು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಪಂಚಾಯಿತಿ ಬಾಪೂಜಿ ಸೇವಾ ಕೇಂದ್ರಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಲಭ್ಯವಾಗಬೇಕು.

    2. ಎಲ್ಲಾ ಸಕಾಲ ಅರ್ಜಿಗಳಲ್ಲಿ ಶೇ.81ರಷ್ಟು ಅರ್ಜಿಗಳು ಆನ್​ಲೈನ್ ಮೂಲಕ ಸಲ್ಲಿಕೆಯಾಗುತ್ತಿವೆ. ಎಲ್ಲಾ ಇಲಾಖೆಗಳ ಸಕಾಲ ಮತ್ತು ಸಕಾಲ ವ್ಯಾಪ್ತಿಗೆ ಬರದ ಸುಮಾರು 800 ಇ-ಸೇವೆಗಳಿಗೆ ಸೇವಾ ಸಿಂಧು ಏಕಮಾತ್ರ ವೇದಿಕೆಯಲ್ಲಿ ದೊರೆಯುವಂತಾಗಬೇಕು.

    3. ರಾಜ್ಯ ಸರ್ಕಾರ ಎಲ್ಲಾ ಇ-ಸೇವೆಗಳನ್ನು ಮೊಬೈಲ್ ಮೂಲಕ ಒದಗಿಸಲು, ಕರ್ನಾಟಕ ಮೊಬೈಲ್ ಒನ್ ಆಪ್ ಅನ್ನು ಇತ್ತೀಚಿನ ತಂತ್ರಜ್ಞಾನ ಬಳಸಿಕೊಂಡು ಪುನರಾಭಿವೃದ್ಧಿ ಮಾಡಬೇಕು. ಹೆಚ್ಚಿನ ಶುಲ್ಕದಲ್ಲಿ ತ್ವರಿತವಾಗಿ ಎಲ್ಲಾ ಸೇವೆಗಳನ್ನು ಒದಗಿಸಲು ತತ್ಕಾಲ್ ಸೇವಾ ಸೌಲಭ್ಯ ಲಭ್ಯವಾಗಬೇಕು.

    4. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಮಹಾನಗರ ಪಾಲಿಕೆ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಗಳು ಭೂಮಿ, ಆದಾಯ ಮತ್ತು ಜಾತಿ ಇವುಗಳಿಗೆ ಸಂಬಂಧಿಸಿದ ವಂಶವೃಕ್ಷ, ವಾಸಸ್ಥಳ ಮುಂತಾದ ಕಂದಾಯ ಸೇವೆಗಳ ಪ್ರಮಾಣಪತ್ರ ಒದಗಿಸಲು ಅಧಿಕೃತಗೊಳಿಸಬಹುದು.

    5. ಆದಾಯ ಪ್ರಮಾಣಪತ್ರ ನೀಡಲು ಕುಟುಂಬದ ಆದಾಯ ಆಕರಣೆ ಮಾಡಲು, ಅರ್ಜಿ ದಾರರ ಎಲ್ಲಾ ಆದಾಯದ ಮೂಲಗಳು, ಎಲ್ಲಾ ಆದಾಯ ತೋರಿಸುವ ಸ್ವಯಂ ಘೊಷಣೆಯನ್ನು ಅರ್ಜಿದಾರರಿಂದ ಪಡೆಯಬೇಕು, ಆಯೋಗ ಈ ನಮೂನೆ ಸಿದ್ಧಪಡಿಸಿದೆ.

    6. ಎಜೆಎಸ್​ಕೆ, ಭೂಮಿ, ಎಸ್​ಎಸ್​ಪಿ, ಐಜಿಎಸ್​ಆರ್ ಮತ್ತು ಎಸ್​ಎಸ್​ಎಲ್​ಆರ್ ಸೇವಾ ಪೋರ್ಟಲ್​ಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆೆಟ್ ಬ್ಯಾಂಕಿಂಗ್ ಮತ್ತು ಆನ್​ಲೈನ್ ವ್ಯಾಲೆಟ್ ವ್ಯವಸ್ಥೆ ಬಳಸಿಕೊಂಡು ಅರ್ಜಿ ಶುಲ್ಕವನ್ನು ಸಂಗ್ರಹಿಸಲು ಯುಪಿಐ/ಕ್ಯೂಆರ್ ಕೋಡ್ ಪಾವತಿ ವಿಧಾನ ಹೊಂದಿರಬೇಕು.

    7. ಕಂದಾಯ ಇಲಾಖೆಯಿಂದ ನೀಡಲಾಗುವ ಜನಸಂಖ್ಯಾ ಪ್ರಮಾಣಪತ್ರ, ವಾಸ ಸ್ಥಳ ಪ್ರಮಾಣಪತ್ರ, ಬೆಳೆ ಪ್ರಮಾಣಪತ್ರ, ಕೃಷಿಕ ಪ್ರಮಾಣಪತ್ರ ಮುಂತಾದವು ಅನುಪಯುಕ್ತ ವಾಗಿವೆ. ಈ ಪ್ರಮಾಣಪತ್ರಗಳನ್ನು ತೆಗೆದುಹಾಕಿ ಪರ್ಯಾಯಗಳನ್ನು ಸೂಚಿಸಬೇಕು.

    8. ಅಡಮಾನವನ್ನು ನೋಂದಾಯಿಸಲು, ಭೂಮಿ ಅಥವಾ ನಿವೇಶನಗಳ ಅಡಮಾನ ಬಿಡುಗಡೆಗೊಳಿಸಲು ಮತ್ತು ಎನ್​ಕಂಬ್ರೆನ್ಸ್ ನೀಡುವ ವಿಧಾನವನ್ನು ಸರಳೀಕರಿಸಬೇಕು ಮತ್ತು ಸಂಪೂರ್ಣವಾಗಿ ಆನ್​ಲೈನ್​ನಲ್ಲಿ ಮಾಡಬೇಕು, ಇದರಿಂದ ಎರಡೂ ಪಕ್ಷದವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವ ಅಗತ್ಯವಿರುವುದಿಲ್ಲ.

    9. ಕಾವೇರಿ-2 ಮತ್ತು ಆನ್​ಲೈನ್ ಸೇವೆಯನ್ನು (ಕೆಒಎಸ್-2) ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಬೇಕು. ಇದು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವ ಮೊದಲು ಯಾವುದೇ ಸಮಸ್ಯೆಯಿಲ್ಲದೇ ನೋಂದಣಿ ಪೂರ್ವ ದತ್ತಾಂಶವನ್ನು ನಮೂದು ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ.

    10. ಗ್ರಾಮ ಲೆಕ್ಕಾಧಿಕಾರಿಗಳನ್ನು ಗ್ರಾಮ ಅಧಿಕಾರಿಗಳಾಗಿ ಮರು ಪದನಾಮಕರಣ ಮಾಡಬಹುದು. ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯವ್ಯಾಪ್ತಿ ಗ್ರಾಮ ಪಂಚಾಯತ್ ಕಾರ್ಯವ್ಯಾಪ್ತಿಯೊಂದಿಗೆ ಸಮನ್ವಯಗೊಳ್ಳಬೇಕು.

    11. ಎಲ್ಲಾ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಪಡಿಸಬಹುದು ಮತ್ತು ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಬಹುದು.

    4 ಮಧ್ಯಂತರ ವರದಿ

    ವಿಜಯವಾಣಿಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಡಾ.ವಿಜಯಭಾಸ್ಕರ್ ಮಾಹಿತಿ

    • ಮೊದಲ ವರದಿ ಕೊಟ್ಟಿದ್ದೀರಿ, ಸರ್ಕಾರದಿಂದ ಅನುಷ್ಠಾನ ಯಾವ ರೀತಿಯಲ್ಲಿ ನಡೆಯಲಿದೆ?

    – ಈ ಶಿಫಾರಸಿನ ಬಗ್ಗೆ ಪರಿಶೀಲನೆ ನಡೆಸಿ ಅನುಷ್ಠಾನಮಾಡಲು ಮುಖ್ಯಕಾರ್ಯದರ್ಶಿಯವರಿಗೆ ಸಿಎಂ ಸೂಚನೆ ನೀಡಿದ್ದಾರೆ. ಮುಖ್ಯಕಾರ್ಯದರ್ಶಿಯವರು ಇಲಾಖಾ ಕಾರ್ಯದರ್ಶಿಗಳ ಸಭೆಯನ್ನು ನಿರಂತರವಾಗಿ ನಡೆಸಿ ಫಾಲೋಅಪ್ ಮಾಡಲಿದ್ದಾರೆ.

    • ಇನ್ನೆಷ್ಟು ವರದಿ ಕೊಡುವವರಿದ್ದೀರಿ?

    – ಮೊದಲ ಹಂತದಲ್ಲಿ ಸಾರಿಗೆ, ಆಹಾರ, ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ವರದಿ ನೀಡಿದ್ದೇವೆ. ಇನ್ನು 3-4 ತಿಂಗಳಲ್ಲಿ ಮತ್ತೊಂದು ವರದಿ ನೀಡುತ್ತೇವೆ. ಅದರಲ್ಲಿ ಏಳು ಇಲಾಖೆಗೆ ಸಂಬಂಧಪಟ್ಟ ಶಿಫಾರಸು ಇರಲಿವೆ. ಇನ್ನೂ ಮೂರ್ನಾಲ್ಕು ಮಧ್ಯಂತರ ವರದಿ ನೀಡಲಿದ್ದೇವೆ.

    • ಎರಡು ವರ್ಷದ ಅವಧಿಯ ಆಯೋಗ ಅಂತಿಮ ವರದಿ ಯಾವಾಗ ಸಲ್ಲಿಸಲಿದೆ? ಏನು ನಿರೀಕ್ಷಿಸಬಹುದು?

    – ನಿಗದಿತ ಅವಧಿಯಲ್ಲಿ ಅಂತಿಮ ವರದಿ ನೀಡುತ್ತೇವೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಆಡಳಿತ ಮತ್ತು ಆಡಳಿತ ವ್ಯವಸ್ಥೆ ಸಮಗ್ರ ಅಧ್ಯಯನ, ಮೌಲ್ಯಮಾಪನಮಾಡಿ 21ನೇ ಶತಮಾನದ ಮುಂಬರುವ ದಶಕದ ಆಕಾಂಕ್ಷೆ, ಅಗತ್ಯತೆ ಪೂರೈಕೆಗೆ ಸೂಕ್ತವಾದ ಆಡಳಿತ ವ್ಯವಸ್ಥೆ, ರಚನಾತ್ಮಕ ಸುಧಾರಣೆಗೆ ಶಿಫಾರಸು ಮಾಡಲು ತಿಳಿಸಲಾಗಿದೆ.

    • ಮೊದಲ ವರದಿಯಲ್ಲಿ ಯಾವ ವಿಷಯಕ್ಕೆ ಹೆಚ್ಚು ಒತ್ತುಕೊಡಲಾಗಿದೆ? ಹುದ್ದೆ ಕಡಿತದ ಬಗ್ಗೆ ನಿಮ್ಮ ನಿಲುವೇನು?

    – ನಿರ್ದಿಷ್ಟವಾಗಿ ಪರಿಗಣಿಸಿಲ್ಲ, ಸಮಗ್ರವಾಗಿ ನೋಡಲಾಗಿದೆ. ಹುದ್ದೆ ಕಡಿತದ ವಿಚಾರವೂ ಇದೆ.

    ಈ ಹಿಂದೆ ಆಡಳಿತ ಸುಧಾರಣಾ ಆಯೋಗವನ್ನು 2000ರಲ್ಲಿ ಹಾರನಹಳ್ಳಿ ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಈ ಆಯೋಗವು ಅಂತಿಮ ವರದಿಯನ್ನು 2007ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ಸಲ್ಲಿಸಿ ಒಟ್ಟು 256 ಶಿಫಾರಸುಗಳನ್ನು ಮಾಡಿತ್ತು.

    ಕೋವಿಡ್​ನಿಂದ ಸತ್ತ 75 ದಿನಗಳ ಬಳಿಕ ನಡೆಯಿತು ಶವಸಂಸ್ಕಾರ; ಹಣಕ್ಕಾಗಿ ಹೆಣ ಇಟ್ಕೊಂಡ್ರಾ?

    ಒಬ್ಬನ ಹುಟ್ಟುಹಬ್ಬ, ಮತ್ತೊಬ್ಬನಿಗೆ ಸಾವು, ಇನ್ನೊಬ್ಬನಿಗೆ ಗಾಯ: ಅಷ್ಟಕ್ಕೂ ದೇಹ ಛಿದ್ರವಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts