ಹಾಸನಾಂಬೆ ಜಾತ್ರೆಗೆ ಅದ್ದೂರಿ ತೆರೆ

ಹಾಸನಾಂಬೆ ಜಾತ್ರೆಗೆ ಅದ್ದೂರಿ ತೆರೆ
Published on

ಹಾಸನ: ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಗುರುವಾರ ಮಧ್ಯಾಹ್ನ 1.06 ಕ್ಕೆ ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಶಾಸಕರಾದ ಎಚ್.ಪಿ.ಸ್ವರೂಪ್‌ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್‌ಮಂಜು, ಸಂಸದ ಶ್ರೇಯಸ್‌ಪಟೇಲ್, ಡಿಸಿ ಕೆ.ಎಸ್.ಲತಾಕುಮಾರಿ, ಎಸ್ಪಿ ಮಹಮದ್ ಸುಜೇತಾ ಹಾಗೂ ದೇವಾಲಯದ ಆಡಳಿತಾಧಿಕಾರಿ ಮಾರುತಿ ಸಮ್ಮುಖದಲ್ಲಿ ದೇಗುಲದ ಗರ್ಭಗುಡಿ ಬಾಗಿಲನ್ನು ಮುಚ್ಚಲಾಯಿತು.

ಈ ಮೂಲಕ 15 ದಿನಗಳ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ತೆರೆ ಬಿದ್ದಿತು. ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ವಿಶ್ವರೂಪ ದರ್ಶನದ ಬಳಿಕ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಯಿತು. ಮುಂದಿನ ವರ್ಷ 2026ರ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಹಾಸನಾಂಬೆ ದರ್ಶನೋತ್ಸವ ನಿಗದಿಯಾಗಿದೆ.

ಕಳೆದ ಅಕ್ಟೋಬರ್ 9ರಿಂದ ಆರಂಭವಾಗಿ ದರ್ಶನ ಭಾಗ್ಯ ಕರುಣಿಸಿದ್ದರು ಹಾಸನಾಂಬೆ. ಗುರುವಾರ ಮಧ್ಯಾಹ್ನ 1.06ಕ್ಕೆ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲನ್ನು ಮುಚ್ಚಲಾಯಿತು. ಈ ವೇಳೆ ಪಂಜಿನ ಪೂಜೆ, ಮಂಗಳವಾದ್ಯ ಮೊಳಗಿತು. ಅರ್ಚಕರು ವಿಶೇಷ ಬೀಗ ಹಾಕುವ ಮೂಲಕ ಗರ್ಭಗುಡಿ ಬಾಗಿಲು ಬಂದ್ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರದ ಸಚಿವರು, ಶಾಸಕರು, ಚಲನಚಿತ್ರ ನಟ, ನಟಿಯರು ವಿವಿಧ ಕ್ಷೇತ್ರದ ಗಣ್ಯರು ದೇವಿಯ ದರ್ಶನ ಪಡೆದಿದ್ದಾರೆ. ಈ ಬಾರಿಯ 13 ದಿನಗಳ ಸಾರ್ವಜನಿಕ ದರ್ಶನದಲ್ಲಿ ವಿವಿಐಪಿ ಪಾಸ್‌ಗಳ ರದ್ದು ಮಾಡಿ ಗೋಲ್ಡ್ ಪಾಸ್, ಪ್ರೋಟೋಕಾಲ್‌ಗೆ ಸಮಯ ನಿಗದಿ ಮಾಡಿದ್ದರಿಂದ ಸಾರ್ವಜನಿಕರಿಗೆ ಹಾಸನಾಂಬ ದೇವಿ ಸುಗಮವಾಗಿ ದರ್ಶನ ಆಗಿದೆ. ಮಳೆ, ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ದರ್ಶನ ಸಮಯ ವಿಳಂಬ ಬಿಟ್ಟರೆ ಉಳಿದಂತೆ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಯಿತು.

ದಾಖಲೆ ಬರೆದ ದರ್ಶನೋತ್ಸವ: ಈ ಬಾರಿಯ ಹಾಸನಾಂಬೆ ದರ್ಶನೋತ್ಸವ ಇತಿಹಾಸ ನಿರ್ಮಿಸಿ ದಾಖಲೆ ಬರೆಯುವ ಜತೆಗೆ ಅತ್ಯಂತ ಯಶಸ್ವಿ ಮತ್ತು ಅಚ್ಚುಕಟ್ಟಾಗಿ ನಡೆಯಿತು. ಮುಂದಿನ ವರ್ಷದ ಹಾಸನಾಂಬೆ ಉತ್ಸವ ದಿನಾಂಕವನ್ನು ಪಂಚಾಂಗದ ಪ್ರಕಾರ ನಿಗದಿ ಮಾಡಲಾಗಿದ್ದು, ಅದರಂತೆ 2026 ಅಕ್ಟೋಬರ್ 29ರಿಂದ ನ.11 ರವರೆಗೆ ನಡೆಯಲಿದೆ. ಹಾಸನಾಂಬೆಯ ಈ ಬಾರಿಯ ಉತ್ಸವಕ್ಕೆ ವಿಧ್ಯುಕ್ತ ತೆರೆಬಿದ್ದಿದೆ. 13 ದಿನಗಳ ಕಾಲ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಹಾಸನಾಂಬೆ ದೇಗುಲ ಆವರಣ ಈಗ ಭಣಗುಡುತ್ತಿದೆ.

ಹಾಸನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೃಷ್ಣಬೈರೇಗೌಡ ಬಂದಾಗ ಜಾತ್ರಾ ಮಹೋತ್ಸವ ಎದುರಾಯಿತು. ಕಳೆದ ಬಾರಿ ಅವ್ಯವಸ್ಥೆ ಆಗಿತ್ತು. ಇದನ್ನು ಸರಿಪಡಿಸಿ ಶಾಂತಿಯುತವಾಗಿ ದರ್ಶನ ಆಗಲು ಜಿಲ್ಲಾಡಳಿತ, ಸಚಿವರ ಕಾರ್ಯವೈಖರಿಯಿಂದ ಎಲ್ಲವನ್ನೂ ಕಾಲಕಾಲಕ್ಕೆ ಸರಿಪಡಿಸಿ ಯಶಸ್ವಿಯಾದ ಜಾತ್ರೆ ಮಾಡಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಂದಾಗ ನಾವ್ಯಾರು ಇರಲಿಲ್ಲ. ಪ್ರೋಟೋಕಾಲ್ ಪ್ರಕಾರ ಅವರನ್ನು ನಡೆಸಿಕೊಳ್ಳಬೇಕಿತ್ತು. ಅದರಲ್ಲಿ ವ್ಯತ್ಯಾಸವಾಗಿದೆ ಅದಕ್ಕೆ ವಿಷಾದಿಸುತ್ತೇವೆ.

ಕೆ.ಎಂ.ಶಿವಲಿಂಗೇಗೌಡ ಶಾಸಕ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಂದಾಗ ವ್ಯತ್ಯಾಸವಾಗಿದೆ. ಅದು ನಮ್ಮ ಕಾರ್ಯಕರ್ತರಿಗೆ ಸ್ವಲ್ಪ ನೋವಾಗಿತ್ತು. ಅದನ್ನು ಬಿಟ್ಟರೆ ವೈಯಕ್ತಿಕವಾಗಿ ಬೇರೇನು ಇಲ್ಲ. ವ್ಯವಸ್ಥೆ ತುಂಬ ಅಚ್ಚುಕಟ್ಟಾಗಿ ಆಗಿದೆ. ಎಲ್ಲರಿಗೂ ಅಭಿನಂದನೆಗಳು.

ಎಚ್.ಪಿ.ಸ್ವರೂಪ್‌ಪ್ರಕಾಶ್ ಶಾಸಕ

ಈ ಬಾರಿ ಹಾಸನಾಂಬ ದೇವಿ ದರ್ಶನ ಎಲ್ಲರಿಗೂ ಅತೀವ ಸಂತೋಷ ತಂದುಕೊಟ್ಟಿದೆ. ಈ ಬಾರಿಯ ಉತ್ಸವದ ವೇಳೆ ಒಂದು ವಾರಗಳ ಕಾಲ ನಿತ್ಯ ಧಾರಾಕಾರವಾಗಿ ಮಳೆಯಾದರೂ ಮಳೆಯನ್ನು ಲೆಕ್ಕಿಸದೆ ದೇವಿ ದರ್ಶನ ಪಡೆದಿದ್ದಾರೆ. ನಿನ್ನೆ ಸಂಜೆಯವರೆಗೂ 26 ಲಕ್ಷದ 13 ಸಾವಿರಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಶೀಘ್ರ ದರ್ಶನದ ಟಿಕೆಟ್ ಮಾರಾಟದಿಂದ 21.82 ಕೋಟಿ ರೂ. ಸಂಗ್ರಹವಾಗಿದೆ. ಉಳಿದಂತೆ ಹುಂಡಿ ಎಣಿಕೆ ಕಾರ್ಯ ಬಾಕಿಯಿದ್ದು 25 ಕೋಟಿ ರೂ. ತಲುಪಲಿದೆ.

ಕೃಷ್ಣಬೈರೇಗೌಡ

ಜಿಲ್ಲಾ ಉಸ್ತುವಾರಿ ಸಚಿವ

ಮುಂದಿನ ವರ್ಷ ಅ.29ರಿಂದ ನ.11ರವರೆಗೆ ಅವಕಾಶ

ಮುಂದಿನ ವರ್ಷ 2026ರ ಹಾಸನಾಂಬ ಜಾತ್ರಾ ಮಹೋತ್ಸವ ಅ.29ರಿಂದ ನ.11ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.

ಈ ವರ್ಷ 15 ದಿನಗಳ ಕಾಲ ದರ್ಶನ ಭಾಗ್ಯ ಕಲ್ಪಿಸಿದ್ದ ಮೊದಲು ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ. ಆದ್ದರಿಂದ ತಾಯಿ ಹಾಸನಾಂಬೆ ಮುಂಬರುವ ವರ್ಷ 12 ದಿನಗಳ ಕಾಲ ದಿವ್ಯ ದರ್ಶನವನ್ನು ಲಕ್ಷಾಂತರ ಭಕ್ತರಿಗೆ ಕರುಣಿಸಲಿದ್ದಾಳೆ.

26.13 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

ಹಾಸನ: ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ವಾರ್ಷಿಕ ದರ್ಶನೋತ್ಸವ ಈ ವರ್ಷ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ಸುಮಾರು 26.13 ಲಕ್ಷಕ್ಕೂ ಹೆಚ್ಚು ಭಕ್ತರು ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರರಾಜ್ಯಗಳಿಂದ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ಹಾಕಿದ ನಂತರ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಹಾಸನಂಬ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಯಲು ಜಿಲ್ಲೆಯ ಜನಪ್ರತಿನಿಧಿಗಳು, ಆಡಳಿತ ವರ್ಗದವರು ಮತ್ತು ಸ್ಥಳೀಯ ಜನರು ಸೇರಿದಂತೆ ಭಕ್ತಾದಿಗಳು ಸಹಕಾರ ಕಾರಣ. ಅವರೆಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹಾಸನಾಂಬ ಜಾತ್ರಾ ಮಹೋತ್ಸವ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸಿದೆ. ಕಳೆದ ಬಾರಿ 17 ಲಕ್ಷ ಭಕ್ತರು ಆಗಮಿಸಿದ್ದರು. ಆದರೆ ಈ ಬಾರಿ 26 ಲಕ್ಷಕ್ಕೂ ಹೆಚ್ಚಿನ ಭಕ್ತರು ದೇವಿಯ ದರ್ಶನವನ್ನು ಪಡೆದಿದ್ದಾರೆ. ಅದೇ ರೀತಿ ಟಿಕೆಟ್ ಮತ್ತು ಲಾಡು ಮಾರಾಟದಿಂದ 21 ಕೋಟಿ ರೂ. ಹೆಚ್ಚು ಆದಾಯ ಬಂದಿದೆ ಎಂದು ಹೇಳಿದರು.

ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಸ್ವಯಂಸೇವಕರು ಶ್ರಮಪಟ್ಟು ಉತ್ತಮ ವ್ಯವಸ್ಥೆ ಕಲ್ಪಿಸಿದ್ದಾರೆ. ಸಾಮಾನ್ಯ ಭಕ್ತರಿಗೆ ಯಾವುದೇ ನೂಕುನುಗ್ಗಲು ಇಲ್ಲದೆ ಸರಳವಾಗಿ ದರ್ಶನವಾಗಿರುವುದು ಸಂತೋಷದ ಸಂಗತಿ. ಕೆಲ ಸಣ್ಣಪುಟ್ಟ ಘಟನೆಗಳು ನಡೆದಿದ್ದರೂ ಅವು ಸಾಮಾನ್ಯ. ರಾಜ್ಯದ ಮೂಲೆಮೂಲೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದು, ಹಾಸನದ ಕೀರ್ತಿ ಎಲ್ಲೆಡೆ ಹರಡಿದೆ ಎಂದರು.

ವಿಐಪಿಗಳೂ ಆಡಳಿತ ನೀಡಿದ ನಿಯಮಾವಳಿ ಪ್ರಕಾರವೇ ದರ್ಶನ ಮಾಡಿ ತೆರಳಿದ್ದಾರೆ. ಕೆಲ ಸಣ್ಣಪುಟ್ಟ ವ್ಯತ್ಯಾಸಗಳನ್ನು ಬಿಟ್ಟರೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಗರ್ಭಗುಡಿ ಮುಂಭಾಗ ದರ್ಶನಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇರುವುದರಿಂದ ಅಲ್ಲಿ ಮಾರ್ಪಾಡು ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇಂದು ಹುಂಡಿ ಹಣ ಎಣಿಕೆ ಕಾರ್ಯ

ಹಾಸನಾಂಬೆ ಮತ್ತು ಸಿದ್ದೇಶ್ವರಸ್ವಾಮಿ ದೇಗುಲದ ಹುಂಡಿ ಹಣ ಎಣಿಕೆ ಕಾರ್ಯ ಅ.24ರಂದು ಶ್ರೀ ಸಿದ್ದೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಪೊಲೀಸ್ ಬಂದೋಬಸ್ತ್ ಮತ್ತು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು, ಕಂದಾಯ ಇಲಾಖೆ, ಬ್ಯಾಂಕ್ ಸಿಬ್ಬಂದಿ ಭಾಗವಹಿಸಲಿದ್ದಾರೆ.

ದಾಖಲೆ ಆದಾಯ

ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇಗುಲಕ್ಕೆ ಈ ಬಾರಿ ದಾಖಲೆ ಮಟ್ಟದ ಆದಾಯ ಹರಿದು ಹರಿದು ಬಂದಿದೆ. ಹಿಂದಿನ ವರ್ಷಗಳಿಗಿಂತ ಈ ಬಾರಿ ದಾಖಲೆಯ ಆದಾಯ ಸಂಗ್ರಹವಾಗಿದ್ದು, ಕೇವಲ ಟಿಕೆಟ್ ಮತ್ತು ಲಾಡು ಮಾರಾಟದಿಂದ 21.83 ಕೋಟಿ ರೂ.ಆದಾಯ ಸಂಗ್ರಹವಾಗುವ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಇತಿಹಾಸ ಸೃಷ್ಟಿಸಿದೆ.

ಅತಿ ಕಡಿಮೆ ಅವಧಿಯಲ್ಲಿ ದರ್ಶನ ಭಾಗ್ಯ ಕಲ್ಪಿಸಿ ಇಷ್ಟೊಂದು ಆದಾಯ ಗಳಿಸಿದ ಏಕೈಕ ದೇವಸ್ಥಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ನಾಳೆ ಹುಂಡಿ ಎಣಿಕೆ ಕಾರ್ಯ ನಡೆಯಲಿದ್ದು ಅದರಲ್ಲಿ ಮೂರು ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗುವ ನಿರೀಕ್ಷೆ ಇದ್ದು ಅಂದಾಜು ಒಟ್ಟು 25 ಕೋಟಿ ರೂ.ಆದಾಯ ಸಂಗ್ರಹವಾಗಲಿದೆ ಎಂದು ತಿಳಿದುಬಂದಿದೆ.

ದರ್ಶನ ಪಡೆದ ಗಣ್ಯರು

15 ದಿನದ ಹಾಸನಾಂಬ ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರದ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯದ ಸಚಿವರಾದ ರಾಮಲಿಂಗಾರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್, ಪ್ರತಿಪಕ್ಷದ ನಾಯಕ ಆರ್ ಅಶೋಕ್, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ಮಾಜಿ ಸಚಿವ ಕೆ.ಗೋಪಾಲಯ್ಯ, ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಎಚ್.ಡಿ.ರೇವಣ್ಣ, ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಎ.ಮಂಜು, ಸಾಲುಮರದ ತಿಮ್ಮಕ್ಕ, ಚಲನಚಿತ್ರ ನಟರಾದ ಶಿವರಾಜಕುಮಾರ್, ಗೀತಾ ಶಿವರಾಜಕುಮಾರ್, ರಿಷಬ್ ಶೆಟ್ಟಿ, ಶ್ರುತಿ, ತಾರಾ ಸೇರಿದಂತೆ ಇನ್ನು ಹಲವು ಕಲಾವಿದರು ಆಗಮಿಸಿದ್ದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ವಿರಾಜಪೇಟೆ ಅರೇಮೇರಿ ಕಳಂಚೇರಿ ಮಠ ಶ್ರೀ ಶಾಂತಮಲ್ಲೀಕಾರ್ಜನ ಸ್ವಾಮೀಜಿ, ಕೊಡ್ಲಿಪೇಟೆ ಶ್ರೀಕ್ಷೇತ್ರ ಕಿರಿಕೋಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಹೊಳೆನರಸೀಪುರ ತೇಜೂರು ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಕಾಗಿನೆಲೆ ಕನಕಗುರು ಮಹಾಸಂಸ್ಥಾನ ಕೆ.ಆರ್.ನಗರ ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ದರ್ಶನ ಪಡೆದರು.

ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ದರ್ಶನ

ಹಾಸನಾಂಬ ದೇವಾಲಯದ ಬಾಗಿಲು ಹಾಕಿದ ಸಂದರ್ಭದಲ್ಲಿ ವಿಶ್ವ ಒಕ್ಕಲಿಗರ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಆಗಮಿಸಿ ದೇವಿ ದರ್ಶನ ಪಡೆದ ನಂತರ ಗರ್ಭಗುಡಿ ಬಾಗಿಲಿಗೆ ಬೀಗ ಹಾಕುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇವರು ಈ ಹಿಂದೆ ಜಿಲ್ಲೆಯಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಹಾಸನ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲೂ ದೇವಸ್ಥಾನದ ಆಡಳಿತ ಅಧಿಕಾರಿಯಾಗಿದ್ದರು. ಉತ್ತಮವಾದ ವ್ಯವಸ್ಥೆಯನ್ನು ಕಲ್ಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net