‘ಕೆಸಿಜಿ’ಯಲ್ಲಿ ಆರೋಗ್ಯಾಧಿಕಾರಿಗಳ ಪರಿಶೀಲನೆ : ಹರ್ಷ ಗುಪ್ತ, ಡಿ. ರಂದೀಪ್ ಭೇಟಿ

KCG Hospital - 1
Published on

ಬೆಂಗಳೂರು: ನಗರದ ಕೆ.ಸಿ. ಜನರಲ್ ಆಸ್ಪತ್ರೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಂದೀಪ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯಲ್ಲಿರುವ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳು ನೀಡುತ್ತಿರುವ ಚಿಕಿತ್ಸೆ ಮತ್ತು ದೊರಕುತ್ತಿರುವ ಔಷಧಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಡಯಾಲಿಸಿಸ್ ವಿಭಾಗದಲ್ಲಿನ ವ್ಯವಸ್ಥೆ, ಸ್ವಚ್ಛತೆಯನ್ನು ಗಮನಿಸಿದರು. ಎಷ್ಟು ಜನರಿಗೆ ಡಯಾಲಿಸಿಸ್ ಸೌಲಭ್ಯ ದೊರೆಯುತ್ತಿದೆ, ಯಾವ ರೀತಿ ಕಾರ್ಯಚಾರಣೆ ಮಾಡಲಾಗುತ್ತಿದೆ ಎಂಬುದನ್ನು ವಿಚಾರಿಸಿದರು. ಬಳಿಕ ಹೆರಿಗೆ ವಿಭಾಗದಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ದೊರೆಯುತ್ತಿರುವ ಸೇವೆಗಳ ಕುರಿತು ವಿಚಾರಿಸಿದರು. ಈ ವೇಳೆ ಶಸಚಿಕಿತ್ಸಾ ಕೊಠಡಿ ಹಾಗೂ ಮಕ್ಕಳು ತುರ್ತು ನಿಗಾ ಘಟಕಗಳಿಗೂ ಭೇಟಿ ನೀಡಿದರು.

ಎಂಸಿಎಚ್ ಆಸ್ಪತ್ರೆ, ಮಾಡ್ಯೂಲರ್ ಅಡುಗೆ ಮನೆ, ಲಾಂಡ್ರಿ, ಬಯೋಮೆಡಿಕಲ್ ವೇಸ್ಟ್, ಡಿಎನ್‌ಬಿ/ ಜಿಎನ್‌ಎಂ ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ತರಬೇತಿ ಕಟ್ಟಡ ಹಾಗೂ ಈಗಾಗಲೇ ಮಂಜೂರಾಗಿರುವ ಕಾಮಗಾರಿಗಳ ಬಗ್ಗೆ ಮುಖ್ಯ ಅಭಿಯಂತರರಿಂದ ಮಾಹಿತಿ ಪಡೆದುಕೊಂಡು ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಇಂದಿರಾ ಕಬಾಡೆ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಆಸ್ಪತ್ರೆಯಲ್ಲಿ ಆಗಿರುವ ಪ್ರಗತಿ, ರೋಗಿಗಳಿಗೆ ದೊರಕುತ್ತಿರುವ ಚಿಕಿತ್ಸೆ ಹಾಗೂ ಸೇವೆಯ ವಿವರ, ಔಷಧ ಲಭ್ಯತೆ ಮತ್ತು ದಾಸ್ತಾನು, ಸಿಬ್ಬಂದಿ ಮಾಹಿತಿ, ಸ್ವಚ್ಛತೆಗೆ ಒತ್ತು ನೀಡಿರುವುದು ಸೇರಿ ಲಭ್ಯವಿರುವ ಸೇವಾ ಸೌಲಭ್ಯಗಳ ಕುರಿತು ವಿವರಿಸಿದರು.

ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಸೇವೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು, ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಸದ್ಯ ಲಭ್ಯವಿರುವ ಸೇವೆಗಳ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವಂತೆ ಸಲಹೆ ನೀಡಿದರು. ಆರೋಗ್ಯ ಇಲಾಖೆಯ ಇತರೆ ಅಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net