

ವಿವಿಧ ಬಣ್ಣದ ಡಚ್ ರೋಜ್ ಬೇಸಾಯ ಕೀಟಬಾಧೆ ನಿರ್ವಹಣೆಗೆ ಪಾಲಿಹೌಸ್ ನಿರ್ಮಾಣ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಕೃಷಿ ಎಂದರೆ ಮೂಗುಮುರಿಯುವ ಯುವಪೀಳಿಗೆಯ ಮಧ್ಯೆಯೇ ರಾಮನಗರದ ಅರ್ಚಕರಹಳ್ಳಿಯ ಯುವಕ ಹರ್ಷವರ್ಧನ ಗುಲಾಬಿ ಹೂವು, ತೆಂಗು, ಅಡಕೆ ಬೆಳೆದು ಲಾಭಗಳಿಸುವ ಮೂಲಕ ಕೃಷಿಯಲ್ಲೇ ಹರ್ಷ ಕಂಡುಕೊಂಡಿದ್ದಾರೆ. ನಗರಕ್ಕೆ ಹೊಂದಿಕೊಂಡಿರುವ ಅರ್ಚಕರಹಳ್ಳಿ ಬಳಿ ಹರ್ಷವರ್ಧನ ಸುಮಾರು 6 ಎಕರೆ ಜಮೀನಿನಲ್ಲಿ ಅಡಕೆ, ತೆಂಗು ತೋಟ, ಉಳಿದ ಜಾಗದಲ್ಲಿ ಅಡಕೆ, ತೆಂಗು ನರ್ಸರಿ ಇದ್ದು, ವಿಶೇಷವಾಗಿ ವೈಜ್ಞಾನಿಕ ವಿಧಾನದ ಗುಲಾಬಿ ಹೂವು ಬೇಸಾಯದಿಂದ ಲಾಭ ಕಾಣುತ್ತಿದ್ದಾರೆ.
ಹರ್ಷವರ್ಧನ ತೋಟದಲ್ಲಿ ಐದು ಕೊಳವೆಬಾವಿ, ಒಂದು ನೆಲಬಾವಿ, ಒಂದು ದೊಡ್ಡ ನೀರಿನ ತೊಟ್ಟಿ ಇದ್ದು, ನರ್ಸರಿ ಹಾಗೂ ಗುಲಾಬಿ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ನೀರಿನ ಕೊರತೆ ನೀಗಿಸಿಕೊಂಡಿದ್ದಾರೆ.
ತೋಟದಲ್ಲೇ ಬೆಳೆದ ಗುಣಮಟ್ಟದ ಅಡಕೆ, ತೆಂಗು ಗಿಡಗಳಲ್ಲಿ ಉತ್ತಮ ಕಾಯಿ ಆಯ್ದುಕೊಂಡು ನರ್ಸರಿ ಮೂಲಕ ಅಡಕೆ, ತೆಂಗು ಸಸಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಬೆಳೆಸಿರುವ ಹರ್ಷವರ್ಧನ್ ಪ್ರತಿವರ್ಷ 5 ಲಕ್ಷ ಸಸಿಗಳನ್ನು ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ.
ಮಾರುಕಟ್ಟೆ: ಹರ್ಷವರ್ಧನ್ ಅವರ ತೋಟದಲ್ಲಿ ಬೆಳೆದ ಗುಲಾಬಿ ಹೂವುಗಳನ್ನು ಬೆಂಗಳೂರಿನ ಹೆಬ್ಬಾಳ ಹೂವು ಮಾರುಕಟ್ಟೆಯಲ್ಲಿ ಇವರದೇ ಲೇಬಲ್ ಪ್ಯಾಕ್‌ನಲ್ಲಿ ಮಾರಾಟ ಮಾಡುತ್ತಾರೆ. ಹಾಗಾಗಿ ಹೆಚ್ಚಿನ ಬೇಡಿಕೆ ಜತೆಗೆ ಲಾಭವೂ ಉತ್ತಮವಾಗಿದೆ ಎಂಬುದು ಹರ್ಷವರ್ಧನ ಮಾತು.
ಗುಲಾಬಿ ಹೂವು ಬೆಳೆ ಮತ್ತು ನರ್ಸರಿಗೆ ವಿಶೇಷವಾಗಿ ಕೀಟಬಾಧೆ, ನೀರಿನ ಕೊರತೆ ಉಂಟಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಪಾಲಿಹೌಸ್ ನಿರ್ಮಾಣ ಮಾಡಿ ವೈಜ್ಞಾನಿಕ ರೀತಿಯಲ್ಲೇ ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಬಿಳಿ, ಕೆಂಪು, ಹಳದಿ, ಮುಂತಾದ ಬಣ್ಣದ ಗುಲಾಬಿ ಹೂವು ಸೇರಿ ಪ್ರತಿ ಬಾರಿ ಸುಮಾರು 10 ಸಾವಿರ ಅಡಕೆ, ತೆಂಗು ಗಿಡಗಳನ್ನು ಬೆಳೆಸಲಾಗುತ್ತದೆ ಎನ್ನುತ್ತಾರೆ ಹರ್ಷವರ್ಧನ.