

ಹಾವೇರಿ: ಮಕ್ಕಳ ಬಾಲ್ಯ ಹಾಗೂ ಹಕ್ಕುಗಳನ್ನು ರಕ್ಷಿಸುವ ಜತೆಗೆ ಬಾಲಕಾರ್ವಿುಕ ಪದ್ಧತಿ ನಿಮೂಲನೆಗೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ, ಮಕ್ಕಳನ್ನು ದುಡಿಮೆಗೆ ತೊಡಗಿಸಿಕೊಂಡವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬಾಲಕಾರ್ವಿುಕ ಮತ್ತು ಕಿಶೋರ ಕಾರ್ವಿುಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ನೇಮಕಗೊಂಡ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ, ಬಾಲ ಕಾರ್ವಿುಕ ನಿಷೇಧದ ಕುರಿತು ಜಾಗೃತಿ ಮೂಡಿಸುವ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬಾಲಕಾರ್ವಿುಕ ಹಾಗೂ ಕಿಶೋರ ಕಾರ್ವಿುಕ ಪದ್ಧತಿ ತಡೆಗಟ್ಟಲು ಕೇವಲ ಅಧಿಕಾರಿಗಳಷ್ಟೇ ಕ್ರಮ ಕೈಗೊಂಡರೆ ಸಾಧ್ಯವಿಲ್ಲ. ಬದಲಾಗಿ ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕು. ಬಾಲಕಾರ್ವಿುಕ ಮಕ್ಕಳು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕು ಎಂದರು.
ವಿಶ್ವದಲ್ಲಿ 30 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗುಳಿದು ಬಾಲಕಾರ್ವಿುಕರಾಗಿ ಕೆಲಸ ಮಾಡುತ್ತಿದ್ದಾರೆ. ಹಣದಾಸೆಗೆ ಮಕ್ಕಳನ್ನು ಅಪಾಯಕಾರಿ ಕೆಲಸಕ್ಕೆ ಬಳಸಿಕೊಳ್ಳುವುದು ಕಾನೂನಿನಡಿ ಅಪರಾಧವಾಗಿದೆ. ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಬಾಲಕಾರ್ವಿುಕ ಮತ್ತು ಕಿಶೋರ ಕಾರ್ವಿುಕರ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯಡಿ, ನಿರೀಕ್ಷಕರಾಗಿ ಅಧಿಸೂಚಿಸಲ್ಪಟ್ಟ 13 ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ನಿರಂತರವಾದ ಯೋಜಿತ ಹಾಗೂ ಅನಿರೀಕ್ಷಿತ ದಾಳಿ ನಡೆಸಬೇಕು. ಬಾಲಕಾರ್ವಿುಕರನ್ನು ಪತ್ತೆಹಚ್ಚಿ ಕೆಲಸದಿಂದ ಬಿಡುಗಡೆಗೊಳಿಸಬೇಕು. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಮಾತನಾಡಿ, ಪ್ರತಿ ಮಗು ದೇಶದ ಆಸ್ತಿ, ಅವರಿಗೆ ಸಂವಿಧಾನದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲು ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಬಾಲಕಾರ್ವಿುಕ ಪದ್ಧತಿ ನಿಮೂಲನೆಗೆ 1986ರಲ್ಲಿ ಬಾಲ್ಯಾವ್ಯವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ವಿುಕ ಕಾಯ್ದೆ ಜಾರಿಗೆ ತಂದಿದೆ. ಕೇವಲ ಕಾನೂನನ್ನು ತಿಳಿದುಕೊಂಡರೆ ಸಾಲದು, ಕಾರ್ಯರೂಪಕ್ಕೆ ತರಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಎಸ್ಪಿ ಹನುಮಂತ ರಾಯ ಮಾತನಾಡಿ, ರಾಣೆಬೆನ್ನೂರ ತಾಲೂಕು ದೇವರಗುಡ್ಡದಲ್ಲಿ ಮಕ್ಕಳನ್ನು ಭಿಕ್ಷಾಟನೆ ಕಾರ್ಯದಲ್ಲಿ ತೊಡಗಿಸಿಕೊಂಡವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಪ್ರಕರಣದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.