

ಹರಪನಹಳ್ಳಿ: 29 ತೊಲ ಬಂಗಾರ ಹಾಗೂ 4 ಕಿಲೋ 800 ಗ್ರಾಂ ಬೆಳ್ಳಿ ಆಭರಣ ಕಳುವಾದ ಘಟನೆ ಪಟ್ಟಣದ ಕೊಟ್ಟೂರು ರಸ್ತೆಯ ಕೆಎಚ್‌ಬಿ ಕಾಲನಿಯ ನಡೆದಿದೆ. ಆಭರಣವು ಎಸ್.ಭಾಗ್ಯಲಕ್ಷ್ಮೀ ಎಂಬುವರಿಗೆ ಸೇರಿದ್ದು, ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೌಕರರಾಗಿದ್ದಾರೆ.
ಮೊಹರಂ ರಜೆ ಪ್ರಯುಕ್ತ ಜು.28ರಂದು ಮನೆಗೆ ಬೀಗ ಹಾಕಿ ತವರೂರು ಸಂಡೂರು ತಾಲೂಕಿನ ಬಂಡ್ರಿ ಗ್ರಾಮಕ್ಕೆ ಹೋಗಿದ್ದರು. ಮರಳಿ ಜು.31ಕ್ಕೆ ಮನೆಗೆ ಬಂದು ನೋಡಿದಾಗ ಬಾಗಿಲು ತೆರೆದುಕೊಂಡಿದ್ದು, ಗಾಡ್ರೇಜ್ ಬೀಗ ಮುರಿದು ಅದರಲ್ಲಿದ್ದ 29 ತೊಲ 14.50 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ಹಾಗೂ 2.40 ಲಕ್ಷ ರೂ. ಮೊತ್ತದ 4ಕಿಲೋ 800 ಗ್ರಾಂ ಬೆಳ್ಳಿ ಒಡವೆ ಕದ್ದಿರುವುದು ಗೊತ್ತಾಗಿದೆ.
ತಕ್ಷಣ ಪಟ್ಟಣದ ಪೊಲೀಸ್‌ಠಾಣೆಗೆ ದೂರು ನೀಡಿರುವ ಮನೆಯ ಮಾಲಕಿ ಎಸ್.ಭಾಗ್ಯಲಕ್ಷ್ಮೀ, ಕಳೆದು ಹೋದ ಆಭರಣ ಹುಡುಕಿಕೊಡುವಂತೆ ಮನವಿ ಕೋರಿಕೊಂಡಿದ್ದಾರೆ. ಸಾರ್ವಜನಿಕರು ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗುವಾಗ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅಥವಾ ಭದ್ರತ್ರಾ ಕ್ರಮಗಳನ್ನು ಕೈಗೊಂಡು ಹೋಗಬೇಕೆಂದು ಪಿಎಸ್‌ಐ ಶಂಭುಲಿಂಗ ಸಿ. ಹಿರೇಮಠ್ ತಿಳಿಸಿದ್ದಾರೆ.