

* 500ಕ್ಕೂ ಹೆಚ್ಚು ವರ್ಷಗಳ ಇತಿಹಾಸ
* ಬೃಹತ್ ಕೈಗಾರಿಕಾ ಪ್ರದೇಶ ಸ್ಥಾಪನೆ
ಚೌಕಸಂದ್ರ ಜಯರಾಮ ನಾಯಕ್
ಹಾರೋಹಳ್ಳಿ
ಆರುವರಹಳ್ಳಿ, ಹಾರುವ ಹಳ್ಳಿ, ಆರುವರಳ್ಳಿ ಹೀಗೆ ಹಲವು ಹೆಸರು ಕರೆಯುತ್ತಿದ್ದ ಜತೆಗೆ ಬ್ರಾಹ್ಮಣರು ನೆಲೆ ನಿಂತು ಸ್ಥಾಪಿಸಿದ ಹಳ್ಳಿಯೇ ಹಾರೋಹಳ್ಳಿ.
ಐತಿಹಾಸಿಕ ಹಿನ್ನೆಲೆಯುಳ್ಳ ಹಾರೋಹಳ್ಳಿಗೆ 500ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಮೊದಲು ಬ್ರಾಹ್ಮಣರ ಬೀದಿ, ಮೇಗಳ ಬೀದಿ, ಅಡೆ ಬೀದಿ ಅಥವಾ ಅಂಗಡಿ ಬೀದಿ ಎನ್ನುವ ಮೂರು ಬೀದಿಗಳು ಮಾತ್ರವಿದ್ದು, ಇಂದು ಬೃಹದಾಕಾರವಾಗಿ ಬೆಳೆದಿದೆ.
ಆರುವರಹಳ್ಳಿ ಅಥವಾ ಹಾರೋಹಳ್ಳಿ ವ್ಯಾಪಾರ ವಾಣಿಜ್ಯ ಕೇಂದ್ರವಾಗಿತ್ತು. ಸುತ್ತಮುತ್ತಲಿನ ಗ್ರಾಮಗಳ ಜನರು ಇಲ್ಲಿಯೇ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದರು. ಮೈಸೂರು ಮಹಾರಾಜರ ಆಳ್ವಿಕೆಯಡಿ ಈ ಗ್ರಾಮವಿತ್ತು.
ತಮಿಳುನಾಡಿನ ತಿರುವಣ್ಣಾಮಲೈ ಮೂಲದಿಂದ ವಲಸೆ ಬಂದ ಬ್ರಾಹ್ಮಣರನ್ನು ಮೈಸೂರು ಮಹಾರಾಜರು ಹಾರೋಹಳ್ಳಿಯಲ್ಲಿ ಕಂದಾಯ ವಸೂಲಿ ಮಾಡುವಂತೆ ನೇಮಕ ಮಾಡಿದ್ದರು.
ತಿರುವಣ್ಣಾಮಲೈಯಿಂದ ಬಂದ ಬ್ರಾಹ್ಮಣರು ಅಲ್ಲಿರುವ ಅರುಣಾಚಲೇಶ್ವರ ದೇವಸ್ಥಾನದ ಮಾದರಿಯಲ್ಲಿ ಇಲ್ಲಿಯೂ ಸುಮಾರು 400 ವರ್ಷಗಳ ಹಿಂದೆ ಅರುಣಾಚಲೇಶ್ವರ ದೇವಸ್ಥಾನ ನಿರ್ಮಾಣ ಮಾಡಿದರು. ಇದಕ್ಕೆ ಕಾರಣ ಪದೇಪದೆ ತಿರುವಣ್ಣಾಮಲೈಗೆ ಹೋಗಿ ಅರುಣಾಚಲೇಶ್ವರ ದರ್ಶನ ಪಡೆಯಲು ಸಾಧ್ಯವಿಲ್ಲವೆಂದು ಅದೇ ಮಾದರಿಯಲ್ಲಿ ಇಲ್ಲಿಯೇ ದೇವಸ್ಥಾನವನ್ನು ಕಟ್ಟಿಸಿದರು. ಇದಕ್ಕೆ ವೆಂಕಟಯ್ಯ ಎನ್ನುವವರು ಹಾರೋಹಳ್ಳಿಯಲ್ಲಿ ಸಂಗ್ರಹವಾಗುತ್ತಿದ್ದ ಕಂದಾಯವನ್ನು ಬಳಸಿಕೊಂಡಿದ್ದರು. ಜತೆಗೆ ವೆಂಗಳಯ್ಯನಕೆರೆ ನಿರ್ಮಿಸಿದರು ಎನ್ನುವ ಇತಿಹಾಸವಿದೆ.
ಕಂದಾಯವನ್ನು ದುರ್ಬಳಕೆ ಮಾಡಿಕೊಂಡು ದೇವಸ್ಥಾನ ನಿರ್ಮಾಣ ಮಾಡಿದ್ದಾರೆಂದು ಆರೋಪಿಸಿ ಟಿಪ್ಪು ಸುಲ್ತಾನ್ ವೆಂಕಟಯ್ಯ ಅವರನ್ನು ಆನೆಯಿಂದ ತುಳಿದು ಸಾಯಿಸಿದರು ಎನ್ನುವ ಮಾತಿದೆ. ಕಾಲ ನಂತರ ದೇವಸ್ಥಾನ ಶಿಥಿಲಗೊಂಡು ಈಗ ಜೀರ್ಣೋದ್ಧಾರಗೊಂಡಿದೆ.
20 ವರ್ಷಗಳ ಹಿಂದೆ ಒಂದು ಸಣ್ಣ ಗ್ರಾಮದಂತೆ ಇದ್ದ ಹಾರೋಹಳ್ಳಿ ಇಂದು ಬೃಹದಾಕಾರವಾಗಿ ಬೆಳೆಯುದಿದೆ. ಸುಮಾರು 60 ವರ್ಷಗಳ ಹಿಂದೆ ಮೂರು ಬೀದಿಗಳಿಂದ ಕೂಡಿದ್ದ ಹಳ್ಳಿ ನಂತರದ ದಿನಗಳಲ್ಲಿ ಸರ್ಕಾರ ನಿವೇಶನ ಹಂಚಿಕೆ ಮಾಡಿ ದೊಡ್ಡದಾಗಿ ಬೆಳೆಯುವಂತೆ ಮಾಡಿದೆ. ಇಂದು ಏಷ್ಯಾದಲ್ಲಿ ದೊಡ್ಡದಾದ ಬೃಹತ್ ಕೈಗಾರಿಕಾ ಪ್ರದೇಶ ಹಾರೋಹಳ್ಳಿಯಲ್ಲಿ ಸ್ಥಾಪನೆಯಾಗಿದ್ದು, ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ. ಆರುವರಹಳ್ಳಿ ಎಂದು ಸ್ಥಾಪನೆಯಾದ ಹಾರೋಹಳ್ಳಿ ಬೃಹದಾಕಾರವಾಗಿ ಬೆಳೆದು ತನ್ನ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.
ಮೈಸೂರು ಮಹಾರಾಜರು ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಕುಲದೇವತೆ ಚಾಮುಂಡೇಶ್ವರಿ ದೇವಿಯನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದರು ಎನ್ನುವ ಐತಿಹ್ಯವಿದೆ. ಜತೆಗೆ ಪಟ್ಟಣದಲ್ಲಿ ವಿನಾಯಕ ದೇವಸ್ಥಾನ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಭೀಮೇಶ್ವರ, ಬಸವನಂದ, ಗೋಪಾಲಕೃಷ್ಣ ಸೇರಿ ಪುರಾತನ ದೇವಾಲಯಗಳು ಇಲ್ಲಿವೆ. ಹಾರೋಹಳ್ಳಿ ಅಕ್ಕಪಕ್ಕದಲ್ಲಿ ಚಿಕ್ಕಕೆರೆ ಮತ್ತು ದೊಡ್ಡ ಕೆರೆ ಎನ್ನುವ ಬೃಹತ್ ಕೆರೆಗಳಿದೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಹಾರೋಹಳ್ಳಿಯವರಾಗಿದ್ದು, ಚಿಕ್ಕವರಿದ್ದಾಗಲೇ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ಹೋರಾಡಿದ ನಾಯಕ. ಅದೇ ರೀತಿಯಲ್ಲಿ ಬೆಂಗಳೂರಿನ ಪ್ರಥಮ ಮೇಯರ್ ಎಂದೇ ಕರೆಯಲ್ಪಡುವ ಸೀತಾರಾಮ್ ಅವರೂ ಹಾರೋಹಳ್ಳಿಯವರು. ಬೋನ್ಸಾಯಿ ಗಿಡದ ಪದ್ಧತಿಯನ್ನು ಪರಿಚಯಿಸಿದ ಬೋನ್ಸಾಯ್ ಶ್ರೀನಿವಾಸ್, ಮಲ್ಲೇಶ್ವರಂ ಎಜುಕೇಷನ್ ಸಂಸ್ಥೆ ಸ್ಥಾಪಕ ಕೃಷ್ಣಸ್ವಾಮಿ ಹಾಗೂ ಬಿಬಿಎಂಪಿ ಆಯುಕ್ತರಾಗಿದ್ದ ಸಿದ್ದಯ್ಯ ಅವರು ಇದೇ ಗ್ರಾಮದವರಾಗಿದ್ದರು. ಇನ್ನೂ ಅನೇಕ ಮಹನೀಯರು ಇಲ್ಲಿ ಹುಟ್ಟಿ ಹೆಸರು ಮಾಡಿದವರಾಗಿದ್ದಾರೆ.
ಮೈಸೂರು ಮಹಾರಾಜರ ಆಳ್ವಿಕೆಗೆ ಒಳಪಟ್ಟಿದ್ದ ಆರುವರಹಳ್ಳಿ ಜನರ ಬಾಯಿಂದ ಬಾಯಿಗೆ ಬಂದು ಹಾರೋಹಳ್ಳಿಯಾಗಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಬೆಂಗಳೂರಿನ ಮೇಯರ್ ಸೀತಾರಾಮ್, ಬೋನ್‌ಸಾಯಿ ಶ್ರೀನಿವಾಸ್ ಇಲ್ಲಿನವರು ಎನ್ನುವ ಹೆಮ್ಮೆ ಇದೆ.
ಡಾ. ಎಚ್. ಎಸ್. ವೆಂಕಟೇಶ್
ವೈದ್ಯ, ಹಾರೋಹಳ್ಳಿ