

*ಸುತ್ತಮುತ್ತಲಿನ ಕೆರೆಗಳಿಗೆ ವಿಷಪೂರಿತ ರಸಾಯನಿಕ ಹರಿವು
*ಎಚ್ಚೆತ್ತುಕೊಳ್ಳದ ಅಧಿಕಾರಿ ವರ್ಗ ಜೀವಸಂಕುಲಕ್ಕೆ ಕುತ್ತು
ಚೌಕಸಂದ್ರ ಜಯರಾಮ ನಾಯಕ್ ಹಾರೋಹಳ್ಳಿ
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಕೈಗಾರಿಕೆಗಳಿದ್ದು, ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎರಡನೇ ಹಂತದ ಕೈಗಾರಿಕಾ ಪ್ರದೇಶದ ಖಾಲಿ ಜಾಗ ಹಾಗೂ ಜಮೀನುಗಳಲ್ಲಿ ಸುರಿಯುತ್ತಿರುವ ಜತೆಗೆ ಕಸಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ಹತ್ತಾರು ಸಮಸ್ಯೆಗಳು ಉದ್ಭವವಾಗಿವೆ.
ಕೈಗಾರಿಕಾ ಪ್ರದೇಶ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಒಂದಿಲ್ಲೊಂದು ಸಮಸ್ಯೆ ಕೇಳಿ ಬರುತ್ತಿದ್ದು, ಕೆಲವು ಕಾರ್ಖಾನೆಗಳು ಅಕ್ರಮವಾಗಿ ತ್ಯಾಜ್ಯ ಸುರಿಯುವುದನ್ನು ರೂಢಿ ಮಾಡಿಕೊಂಡಿವೆ. ಇದೆಲ್ಲದರ ಬಗ್ಗೆ ತಿಳಿದಿದ್ದರೂ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಕಾರ್ಖಾನೆಯ ವಿಷದಿಂದ ಪರಿಸರ ಕಲುಷಿತಗೊಂಡು ಹಲವು ರೋಗರುಜಿನಗಳಿಗೆ ಕಾರಣವಾಗುತ್ತಿದೆ.
ಕಾರ್ಖಾನೆಗಳಿಗೆ ಪರವಾನಗಿ ನೀಡುವ ಸಮಯದಲ್ಲಿ ಸಂಬಂಧಪಟ್ಟ ಇಲಾಖೆಗಳು ಸರ್ಕಾರದ ನೀತಿ ನಿಯಮ ಪಾಲಿಸುವಂತೆ ಷರತ್ತು ಹಾಕಿ ಅನುಮತಿ ನೀಡುತ್ತಾರೆ. ಆದರೆ ಕೈಗಾರಿಕಾ ಪ್ರದೇಶದ ಬಹುತೇಕ ಕಾರ್ಖಾನೆಗಳು ಇಟಿಪಿ ಪ್ಲಾಂಟ್ ಮಾಡಿಕೊಂಡಿಲ್ಲ. ಈ ಪರಿಣಾಮ ತ್ಯಾಜ್ಯದ ನೀರನ್ನು ಸಂಸ್ಕರಿಸದೆ ನೆರವಾಗಿ ಚರಂಡಿ ಮೂಲಕ ಕೆರೆಗಳಿಗೆ ಹರಿಬಿಡಲಾಗುತ್ತಿದೆ. ವಿಷಯುಕ್ತ ರಾಸಾಯನಿಕ ತ್ಯಾಜ್ಯ ಜಲಮೂಲಕ್ಕೆ ಸೇರಿ ಜಲಚರಗಳು ನಾಶವಾಗುತ್ತಿವೆ. ಆದರೂ ಈ ಬಗ್ಗೆ ಪರಿಸರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.
ಇಂತಹ ಅಕ್ರಮ ತಡೆಗಾಗಿಯೇ ನಿಗಾವಹಿಸಲು ಸರ್ಕಾರ ಇಲಾಖೆಗಳನ್ನು ರೂಪಿಸಿದೆ. ಆದರೆ ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕರು ಮಾಹಿತಿ ನೀಡಿದರೂ ಕೇವಲ ನೋಟಿಸ್‌ಗಷ್ಟೇ ಸೀಮಿತವಾಗಿದೆ. ಕ್ರಮಕ್ಕೆ ಮುಂದಾದರೂ ಉಳ್ಳವರು ರಾಜಕೀಯ ಮುಖಂಡರಿಂದ ಒತ್ತಡ ಹಾಕಿಸಿ, ಅಧಿಕಾರಿಗಳ ಕೈ ಕಟ್ಟಿಹಾಕಿದ್ದಾರೆ.
ಪರಿಸರ ನಾಶವಾಗದಂತೆ ತಡೆದು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ ಎಂಬುದನ್ನು ಪರಿಸರ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಬೇಕಾಗಿದೆ. ಪರಿಸರ ಉಳಿಸಲು ಬಧ್ಧತೆ ಮೆರೆಯಬೇಕಿದೆ. ಯಾರ ಮುಲಾಜಿಗೂ ಒಳಗಾಗದೇ ಕ್ರಮ ಕೈಗೊಳ್ಳುವ ಮೂಲಕ ದಿಟ್ಟತನ ಪ್ರದರ್ಶಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
*****
ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಸಾಮಾನ್ಯವಾಗಿದೆ. ನಿರ್ಜನ ಪ್ರದೇಶದಲ್ಲಿ ಕೆಲವು ಕಾರ್ಖಾನೆಗಳು ಉತ್ಪತ್ತಿಯಾದ ತ್ಯಾಜ್ಯಗಳನ್ನು ಖಾಲಿ ಜಾಗದಲ್ಲಿ ಹಾಕಿ ಸುಟ್ಟು ಹಾಕುತ್ತಿದ್ದಾರೆ. ಚರಂಡಿಗಳಿಗೆ, ನೀರಿನ ಮೂಲಗಳಿಗೆ ರಾಸಾಯನಿಕ ತ್ಯಾಜ್ಯ ಬಿಡುವುದು ಮಾಮೂಲಿಯಾಗಿದೆ. ಪರಿಸರ ಮತ್ತು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಎಚ್ಚೆತ್ತು ಅಕ್ರಮ ತಡೆಗೆ ಮುಂದಾಗಬೇಕಿದೆ.
ನಾಗರಾಜು, ಸಾಮಾಜಿಕ ಕಾರ್ಯಕರ್ತ
*****
ಕೆಲವು ಕಾರ್ಖಾನೆಗಳು ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದು ಮಾಮೂಲಿಯಾಗಿದೆ. ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿ ವಿಲೇ ಮಾಡುವ ಕಸದಲ್ಲಿ ಸಾಕಷ್ಟು ಕಂಪನಿಗಳ ಹೆಸರಿನ ಹಲವು ಲೇಬಲ್‌ಗಳೂ ನಮಗೆ ದೊರೆತಿವೆ. ಇಡೀ ಪ್ರದೇಶವೇ ವಿಷವಾಗಿದೆ. 2 ನಿಮಿಷ ಕೂಡ ನಿಂತುಕೊಳ್ಳಲು ಆಗದ ರೀತಿಯಲ್ಲಿ ಪರಿಸರ ಹಾಳಾಗಿದೆ. ಈ ಕೂಡಲೇ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು.
ಕಿರಣ್, ಕೆಆರ್‌ಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ
****
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಕಾರ್ಖಾನೆಗಳು ತ್ಯಾಜ್ಯವನ್ನು ಅಕ್ರಮವಾಗಿ ಸುಟ್ಟು ಹಾಕುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಕಾರ್ಖಾನೆಗಳ ವಿರುದ್ಧ ನೋಟಿಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಮಂಜುನಾಥ್
ಜಿಲ್ಲಾ ಪರಿಸರ ಅಧಿಕಾರಿ