ಕೆರೆಯಂತಾದ ಹಾರೋಡಿ ಹೆದ್ದಾರಿ, ಕುಮಟಾ-ಸಿದ್ದಾಪುರ ಸಂಚಾರಕ್ಕೆ ಅಡ್ಡಿ

26KMT3a_Harodi RAIN
Published on

ಕುಮಟಾ: ತಾಲೂಕಿನಾದ್ಯಂತ ಮಳೆ ಬಿರುಸು ಪಡೆದುಕೊಂಡಿದೆ. ಬುಧವಾರ ಹಲವೆಡೆ ಮಳೆಯ ನೀರು ರಸ್ತೆಯ ಮೇಲೆ ತುಂಬಿಕೊಂಡು ಸಂಚಾರಕ್ಕೆ ತೊಂದರೆ ಉಂಟಾಯಿತು.


ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿಯ ಹಾರೋಡಿ ಬಳಿ ಮಳೆ ನೀರು ರಸ್ತೆಯ ಮೇಲೆ ತುಂಬಿಕೊಂಡು ವಾಹನ ಸವಾರರು ಸಂಕಷ್ಟ ಎದುರಿಸುವಂತಾಯಿತು. ತಾಸುಗಟ್ಟಲೆ ನೀರು ರಸ್ತೆಯ ಮೇಲೆ ನಿಂತಿದ್ದರಿಂದ ದೊಡ್ಡ ವಾಹನಗಳು ಹೇಗೋ ದಾಟಿದರೂ, ದ್ವಿಚಕ್ರ ವಾಹನ ಸವಾರರು ಮಳೆ ಕಡಿಮೆಯಾಗುವುದನ್ನು ಕಾಯುತ್ತಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಸಮರ್ಪಕ ಕಾಲುವೆ ವ್ಯವಸ್ಥೆ ಮಾಡದಿರುವುದು ಹಾಗೂ ಮಳೆ ನೀರು ಹರಿಯುವುದಕ್ಕೆ ಇದ್ದ ಹಳೆಯ ಅಡ್ಡ ತೋಡುಗಳನ್ನು ಮುಚ್ಚಿದ್ದರ ಪರಿಣಾಮ ಮಳೆ ನೀರು ರಸ್ತೆಯ ಮೇಲೆಯೇ ತುಂಬಿಕೊಂಡು ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ.
ಈ ಬಗ್ಗೆ ವಿಜಯವಾಣಿಗೆ ಪ್ರತಿಕ್ರಿಯಿಸಿದ ಭಾಸ್ಕರ ಪಟಗಾರ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಳೆಗಾಲದಲ್ಲಿ ಇಂಥ ದುರವಸ್ಥೆ ಉದ್ಭವಿಸಿದೆ. ತಕ್ಷಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಪಟ್ಟಣದ ಮಾಸ್ತಿಕಟ್ಟೆ, ಬಸ್ತಿಪೇಟೆ ಇನ್ನಿತರ ಕಡೆಗಳಲ್ಲೂ ಮಳೆ ನೀರು ರಸ್ತೆಯ ಮೇಲೆ ನಿಂತು ಜನ,ವಾಹನ ಸಂಚಾರಕ್ಕೆ ಅನನುಕೂಲವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net