ಸಾಮರಸ್ಯದಿಂದ ದಾಂಪತ್ಯ ಜೀವನ ನಡೆಸಿ

07 Sirwar 1
ನವಲಕಲ್ ಬೃಹನ್ಮಠದ ಲಿಂ.ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಜಾತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯರು, ಯರಡೋಣಿ ಸಿದ್ಧರಾಮೇಶ್ವರ ಗುರುಮಠದ ಮುರುೇಂದ್ರ ಶಿವಾಚಾರ್ಯರು, ಜಾಲಹಳ್ಳಿ ಜಯಶಾಂತಲಿಂಗ ಶಿವಾಚಾರ್ಯರು, 108 ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ಬಬಲಾದ ಹಾಗೂ ದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಇತರರಿದ್ದರು.
Published on

ಸಿರವಾರ: ನವದಂಪತಿಗಳು ಶಿವ ಪಾರ್ವತಿಯಂತೆ ಆದರ್ಶವಾಗಿ ದಾಂಪತ್ಯ ಜೀವನ ನಡೆಸಬೇಕು ಎಂದು ಯರಡೋಣಿ ಸಿದ್ಧರಾಮೇಶ್ವರ ಗುರುಮಠದ ಮುರುೇಂದ್ರ ಶಿವಾಚಾರ್ಯರು ಹೇಳಿದರು.

ತಾಲೂಕಿನ ನವಲಕಲ್ ಬೃಹನ್ಮಠದ ಲಿಂ.ಸೋಮಶೇಖರ ಶಿವಾಚಾರ್ಯರ 28ನೇ ಜಾತ್ರೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ನವಲಕಲ್ ಶ್ರೀಮಠಕ್ಕೆ ತನ್ನದೇ ಇತಿಹಾಸವಿದೆ. ಹಿರಿಯ ಶ್ರೀಗಳ ಆಶೀರ್ವಾದಿಂದ ಈಗಿನ ಪೀಠಾಧಿಪತಿ ಅಭಿನವ ಸೋಮನಾಥ ಶ್ರೀಗಳ ನೇತೃತ್ವದಲ್ಲಿ ಜಾತ್ರೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಸಾಮೂಹಿಕ ವಿವಾಹ, ವಿವಿಧ ಕ್ರೀಡೆಗಳು ಸೇರಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತ, ಜಿಲ್ಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಜನರು ಮದುವೆ ಮಾಡುವುದಕ್ಕೆ ಲಕ್ಷಾಂತರ ರೂಪಾಯಿ ಸಾಲ ಮಾಡುತ್ತಾರೆ. ಆ ಸಾಲವನ್ನು ಮುಟ್ಟಿಸುವುದಕ್ಕೆ ವರ್ಷಗಟ್ಟಲೆ ದುಡಿಯಬೇಕಾಗುತ್ತದೆ. ಭಕ್ತರು ಈ ಕಷ್ಟ ಅನುಭವಿಸಬಾರದು ಎಂದು ಶ್ರೀಮಠ ಸಾಮೂಹಿಕ ವಿವಾಹ ಆಯೋಜಿಸುತ್ತಿದೆ. ಇಲ್ಲಿ ಮದುವೆ ಮಾಡಿಕೊಳ್ಳುತ್ತಿರುವವರು ಪುಣ್ಯವಂತರು, ಮದುವೆಯಾಗಿ ಮನೆಗೆ ಬಂದ ಸೊಸೆಯನ್ನು ಮಗಳಂತೆ ಕಾಣಬೇಕು. ಸೊಸೆ ಅತ್ತೆ ಮಾವನವರನ್ನು ತಂದೆ, ತಾಯಿಯಂತೆ ಕಾಣಬೇಕು ಅಂದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.

ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯರು ಮಾತನಾಡಿ, ಲಿಂ.ಸೋಮಶೇಖರ ಶಿವಾಚಾರ್ಯರು, ಶಾಂಭವಿ ದೇವಿ ಆಶೀರ್ವಾದ ಹಾಗೂ ಭಕ್ತರೇ ಈ ಮಠದ ಶಕ್ತಿ. ಅವರ ಸಹಕಾರದಿಂದ ಎಲ್ಲವೂ ಸಾಧ್ಯವಾಗಿದೆ ಎಂದರು. 38 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು.

ಜಾಲಹಳ್ಳಿ ಜಯಶಾಂತಲಿಂಗ ಶಿವಾಚಾರ್ಯರು, ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ಬಬಲಾದ ಹಾಗೂ ದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು, ನಂದವಾಡಗಿ ಮಹಾಂತ ಶಿವಾಚಾರ್ಯರು, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯರು, ದೇವರಭೂಪುರ ಬೃಹನ್ಮಠದ ಅಭಿನವ ಗಜದಂಡ ಶಿವಾಚಾರ್ಯರು, ಸುಲ್ತಾನಪುರ ಪಂಚಾಕ್ಷರಿತೀರ್ಥ ಬೃಹನ್ಮಠದ ಶಂಭು ಸೋಮನಾಥ ಶಿವಾಚಾರ್ಯರು, ಅಭಿನವ ರೇಣುಕಾ ಶಾಂತಮಲ್ಲ ಶಿವಾಚಾರ್ಯರು,

ಕರೇಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯರು, ಮಸ್ಕಿ ಗಚ್ಚಿನ ಮಠದ ವರರುದ್ರಮುನಿ ಶಿವಾಚಾರ್ಯರು, ಸಿರವಾರ ಪ್ರಜಾಪಿತ ಈಶ್ವರೀಯ ವಿವಿ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಜ್ಯೋತಿ ಅಕ್ಕನವರು, ಜಾಗಟಗಲ್ ಬೆಟ್ಟಪ್ಪ ತಾತ, ಬಲ್ಲಟಗಿ ಗುರುಬಸವ ಸ್ವಾಮಿ, ಬಸಯ್ಯಸ್ವಾಮಿಗಳು, ಯರಮರಸ್ ಚರಬಸವ ಸ್ವಾಮಿ, ಹೀರಾ ಅಯ್ಯಪ್ಪ , ಮಾಜಿ ಶಾಸಕ ಗಂಗಾಧರ ನಾಯಕ, ಕರ್ನಾಟಕ ವೀರಶೈವ ಲಿಂಗಾಯತ ರಾಯಚೂರು ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಿರ್ಜಾಪುರ, ಪ್ರಮುಖರಾದ ಬಸನಗೌಡ ಬ್ಯಾಗವಾಟ್, ಚುಕ್ಕಿ ಸೂಗಪ್ಪ ಸಾಹುಕಾರ್, ದೇವರಾಜಗೌಡ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net