

ಹುಣಸೂರು: ದೇವರಾಜ ಅರಸರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವತ್ತ ತಾಲೂಕಿನ ಶಾಸಕ ಜಿ.ಡಿ.ಹರೀಶ್‌ಗೌಡ ಮುಂದಡಿಯಿಡುತ್ತಿರುವುದು ತಾಲೂಕಿನ ಶೋಷಿತ ಮತ್ತು ಸಣ್ಣಪುಟ್ಟ ಸಮಾಜಗಳಲ್ಲಿ ಮಾನಸಿಕ ಸ್ಥೈರ್ಯ ತುಂಬಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಸಂತಸ ವ್ಯಕ್ತಪಡಿಸಿದರು.
ನಗರಸಭಾ ಸಭಾಂಗಣದಲ್ಲಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಶರವಣ ಅವರನ್ನು ಸನ್ಮಾನಿಸಿ ಮಾತನಾಡಿದರು.
ನಗರಸಭಾ ಅಧ್ಯಕ್ಷರಾಗಿ ಆಯ್ಕೆಯಾದ ಶರವಣ ಹಿಂದುಳಿದ ಗಾಣಿಗ ಸಮಾಜಕ್ಕೆ ಸೇರಿದ್ದು, ಶಾಸಕ ಜಿ.ಡಿ.ಹರೀಶ್‌ಗೌಡ ಗಾಣಿಗ ಸಮುದಾಯವನ್ನು ಗುರುತಿಸಿ ಅಧ್ಯಕ್ಷರನ್ನಾಗಿ ಮಾಡಿರುವುದು ತಳ ಸಮುದಾಯಗಳಿಗೆ ಸಿಕ್ಕ ಸಾಮಾಜಿಕ ನ್ಯಾಯವಾಗಿದೆ. ಇಂತಹ ಪರಿಕಲ್ಪನೆ ಸಾಮಾಜಿಕ ನ್ಯಾಯದ ಹರಿಕಾರರಾದ ಡಿ.ದೇವರಾಜ ಅರಸು ಅವರಲ್ಲಿತ್ತು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಹಾದಿಯಲ್ಲಿ ನಡೆಯುತ್ತಿರುವ ಜಿ.ಡಿ. ಹರೀಶ್‌ಗೌಡ ಸೂಕ್ಷ್ಮ ಸಮುದಾಯಗಳಿಗೆ ಅಧಿಕಾರವನ್ನು ಕೊಡುವ ಮೂಲಕ ಅರಸು ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ರಾಜಕೀಯ ಪಕ್ಷಗಳಲ್ಲಿ ಯಾವುದೇ ಅಧಿಕಾರಕ್ಕೆ ಬಂದರೂ ತಮ್ಮ ಕುಟುಂಬ ಸದಸ್ಯರುಗಳಿಗೆ ಕುಟುಂಬಸ್ಥರುಗಳಿಗೆ ಅಧಿಕಾರ ಕೊಡುತ್ತಿರುವ ಈ ಸಂದರ್ಭದಲ್ಲಿ ಶಾಸಕರ ಈ ನಡೆ ಸಮಾಜವೇ ಮೆಚ್ಚುವಂತಹದ್ದು, ಅವಕಾಶ ವಂಚಿತ ಸಮುದಾಯಗಳಲ್ಲಿ ಶಾಸಕರ ಈ ನಡೆ, ನಿರ್ಧಾರಗಳು ಭರವಸೆ ಮೂಡಿಸುವಂತಿದೆ. ಹುಣಸೂರು ನಗರಸಭೆಯಲ್ಲಿ ದೀನ ದಲಿತರು ಬಡವರ ಸಮಸ್ಯೆಗಳು ಜ್ವಲಂತವಾಗಿದ್ದು, ಈ ಸಮಸ್ಯೆಗಳನ್ನು ಪರಿಹರಿಸಲು ಅಧ್ಯಕ್ಷ ಶರವಣ ಅವರು ಆದ್ಯತೆ ನೀಡಬೇಕು ಡಾ.ಬಿ.ಆರ್. ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಂ ಭವನಗಳಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡಬೇಕು. ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಲು ನಗರದ ಪ್ರಮುಖ ಸ್ಥಳವನ್ನು ಕಾಯ್ದಿರಿಸಿ ಕ್ರಮ ವಹಿಸಬೇಕು. ಹುಣಸೂರು ನಗರದ ತಹಸೀಲ್ದಾರ್ ಕಚೇರಿ ಪಕ್ಕದಲ್ಲಿರುವ ಸ್ಮಶಾನವನ್ನು ಅಭಿವೃದ್ಧಿಪಡಿಸಿ ವಿದ್ಯುತ್ ಚಿತಾಗಾರವನ್ನು ಪ್ರಾರಂಭಿಸಬೇಕು. 20 ವರ್ಷಗಳಿಂದ ಹುಣಸೂರು ನಗರದಲ್ಲಿ ವಾಸ ಮಾಡುವ ಎಲ್ಲಾ ಜಾತಿಯ ಬಡ ಕುಟುಂಬಗಳಿಗೆ ನಿವೇಶನಗಳಿಲ್ಲದೆ ತುಂಬಾ ತೊಂದರೆ ಪಡುತ್ತಿದ್ದು, ಭೂಗಳ್ಳರು ಆಕ್ರಮಿಸಿಕೊಂಡಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಿ ಈ ಸರ್ಕಾರಿ ಜಾಗವನ್ನು ನಿವೇಶನವಿಲ್ಲದ ಬಡ ಕುಟುಂಬಗಳಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಶರವಣ, ಹುಣಸೂರು ನಗರಸಭೆಯ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಲು ಕ್ರಮವಹಿಸುತ್ತೇನೆ. ದೀನ ದಲಿತರು ಬಡವರ ಬಗ್ಗೆ ನನಗೆ ಅಪಾರ ಕಾಳಜಿಯಿದ್ದು, ಅವರ ಕೆಲಸ ಕಾರ್ಯಗಳನ್ನು ಆದ್ಯತೆ ಮೇರೆಗೆ ಮಾಡುತ್ತೇನೆ. ಶಾಸಕ ಜಿ.ಡಿ.ಹರೀಶ್ ಗೌಡ ಅವರು ನನ್ನ ಮೇಲೆ ನಂಬಿಕೆಯಿಟ್ಟು ಅತೀ ಸರಳ ಸಮಾಜದವನಾದ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಮತ್ತು ಅವರ ನಿರ್ದೇಶನದಂತೆ ಹುಣಸೂರು ನಗರದ ಅಭಿವೃದ್ಧಿಗೆ ಹಗಲು ಇರುಳು ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಹುಣಸೂರು ನಗರಸಭಾ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಟಿ.ಎ.ಪಿ.ಸಿಎಂ.ಎಸ್. ಅಧ್ಯಕ್ಷ ಬಸವಲಿಂಗಯ್ಯ, ಉಪಾಧ್ಯಕ್ಷ ರೇವಣ್ಣ, ನಿರ್ದೇಶಕ ನಾಗರಾಜು, ಆಸ್ವಾಳ್ ಕೆಂಪೇಗೌಡ, ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ಮಲ್ಲಿಕ್ ಇತರರು ಇದ್ದರು.