ಸಂಸ್ಕಾರ, ಪ್ರಕೃತಿ ನಿಯಮ ಪಾಲನೆ : ಹರೇಕಳ ಸ್ವಚ್ಛತಾ ಅಭಿಯಾನದಲ್ಲಿ ರವೀಂದ್ರ ರೈ ಕಿವಿಮಾತು

Ull_Harekala
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಮಾನವ ಸಂಸ್ಕಾರ ಪಾಲನೆ ಮಾಡಬೇಕಾದರೆ ಪ್ರಕೃತಿ ನಿಯಮ ಪಾಲಿಸಬೇಕು. ಸಂಸ್ಕಾರ ಮತ್ತು ಪ್ರಕೃತಿ ನಿಯಮ ಪಾಲನೆಯಾಗದಿದ್ದರೆ ಯಾವುದೇ ಕೆಲಸ ಕಾರ್ಯ ಸರಿಯಾಗಿ ನಡೆಯದು ಎಂದು ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಹೇಳಿದರು.

ಹರೇಕಳ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಮಿಷನ್ ಉಳ್ಳಾಲ ತಾಲೂಕು, ಮಂಗಳೂರು ವಿಶ್ವವಿದ್ಯಾಲಯ ಮತ್ತು ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಿಭಾಗ, ರೋಶನಿ ನಿಲಯದ ಸಮಾಜ ಸೇವಾ ವಿಭಾಗ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಶ್ರೀ ರಾಮಕೃಷ್ಣ ಶಾಲೆಯ ಸಹಕಾರದಲ್ಲಿ ಹರೇಕಳ ಗ್ರಾಮಾದ್ಯಂತ ಹಮ್ಮಿಕೊಂಡ ಬೃಹತ್ ಸ್ವಚ್ಛತಾ ಅಭಿನಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೈಜ್ಞಾನಿಕವಾಗಿ ಮುಂದುವರಿದ ಪ್ರಪಂಚದಲ್ಲಿ ನಾವು ಬದುಕುತ್ತಿದ್ದರೂ ಸಂಸ್ಕಾರ ಪಾಲನೆ ವೇಗದಲ್ಲಿ ಹೋಗುತ್ತಿಲ್ಲ. ಪ್ರಕೃತಿಯಲ್ಲೇ ಹುಟ್ಟಿ, ಬದುಕಿ ಸಾಯುವ ನಾವು ಪ್ರಕೃತಿ ನಿಯಮ ಪಾಲಿಸುವಲ್ಲಿ ಹಿಂದೇಟು ಹಾಕುತ್ತಿದ್ದೇವೆ. ಪ್ರಕೃತಿ ಬಗ್ಗೆ ವಿಶ್ವಾಸ, ಪ್ರೀತಿ, ಗೌರವ ಇಲ್ಲದಿದ್ದರೆ ಎಲ್ಲ ಕಾರ್ಯ ವ್ಯರ್ಥ. ದೇಶ ಸೇವೆಗೆ ಜಮ್ಮು ಕಾಶ್ಮೀರಕ್ಕೆ ಹೋಗಬೇಕಿಲ್ಲ, ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರೂ ದೇಶ ಸೇವೆ ಮಾಡಿದಂತೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಉಪಾಧ್ಯಕ್ಷೆ ಕಲ್ಯಾಣಿ, ಮಾಜಿ ಅಧ್ಯಕ್ಷೆ ಅನಿತಾ ಡಿಸೋಜ, ಸದಸ್ಯರಾದ ಅಬ್ದುಲ್ ಸತ್ತಾರ್ ಬಾವಲಿಗುರಿ, ಅಶ್ರಫ್, ಎಸ್.ಎಂ.ಬಶೀರ್, ಮಾಜಿ ಸದಸ್ಯ ಬಶೀರ್ ಉಂಬುದ, ಪಿಡಿಒ ಮುತ್ತಪ್ಪ ಡಿ., ಕಾರ್ಯದರ್ಶಿ ತಾರಾಕ್ಷಿ, ಹರೇಕಳ ಶ್ರೀ ರಾಮಕೃಷ್ಣ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಆತಿಕಾ, ಉಪಾಧ್ಯಕ್ಷೆ ಮುಬೀನಾ, ಹಸಿರುದಳದ ಸೂಪರ್‌ವೈಸರ್ ರೇಖಾ, ಹರೇಕಳ ಗ್ರಾಮ ಡಿವೈಎಫ್‌ಐ ಅಧ್ಯಕ್ಷ ಕೆ.ಎಚ್.ಇಕ್ಬಾಲ್, ರೋಶನಿ ನಿಲಯ ಕಾಲೇಜಿನ ಓಬನಾಥ್, ಮುಡಿಪು ಕಾಲೇಜು ಎನ್ನೆಸ್ಸೆಸ್ ಸಂಯೋಜಕಿ ಶೋಭಾಮಣಿ ಮೊದಲಾದವರು ಉಪಸ್ಥಿತರಿದ್ದರು. ಹಸಿರುದಳದ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ಸ್ವಚ್ಛತೆ ಎಲ್ಲರಿಗೂ ಅಗತ್ಯ. ಸ್ವಚ್ಛತೆ ಇದ್ದರೆ ಆರೋಗ್ಯ ಇರುತ್ತದೆ. ಮುಂದಿನ ದಿನಗಳಲ್ಲಿ ಹರೇಕಳ ಗ್ರಾಮವನ್ನು ಸ್ವಚ್ಛತೆಯಲ್ಲಿ ಮಾದರಿಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯ.

ಹರೇಕಳ ಹಾಜಬ್ಬ, ಪದ್ಮಶ್ರೀ ಪುರಸ್ಕೃತರು

7 ಟನ್ ಕಸ ಸಂಗ್ರಹ!

ಹರೇಕಳ ಮಾತ್ರವಲ್ಲದೆ ನೆರೆಯ ಪಜೀರ್, ಪಾವೂರು, ಕೊಣಾಜೆ ಗ್ರಾಮದಲ್ಲೂ ಘನತ್ಯಾಜ್ಯ ನಿರ್ವಹಣಾ ಘಟಕವಿದ್ದು ಮನೆಗಳಿಂದ ಕಸ ಸಂಗ್ರಹ ಮಾಡಲಾಗುತ್ತಿದೆ. ಆದರೂ ಹರೇಕಳ ಗ್ರಾಮದಲ್ಲಿ ನಡೆದ ಏಕದಿನ ಸ್ವಚ್ಛತಾ ಅಭಿಯಾನದಲ್ಲಿ ಏಳು ಟನ್ ಕಸ ಸಂಗ್ರಹ ಮಾಡಲಾಗಿದೆ. ಗ್ರಾಮದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ರಸ್ತೆಬದಿ ಕಸ ಎಸೆಯುವುದು ಇನ್ನೂ ನಿಂತಿಲ್ಲ ಎನ್ನುವುದು ಸಾಬೀತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net