

ವಿರಾಜಪೇಟೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿರಾಜಪೇಟೆ ತಾಲೂಕು ವತಿಯಿಂದ 2023-24ನೇ ಸಾಲಿನಲ್ಲಿ ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಫಲಿತಾಂಶ ಬರಲು ಕಾರಣಕರ್ತರಾದ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು ಹಾಗೂ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಶನಿವಾರ ಕಾಲೇಜು ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಚಿಲ್ಲವಂಡ ಕಾವೇರಪ್ಪ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಕರ ಶ್ರಮ ಅಡಗಿದ್ದು, ಮುಂದೆಯೂ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡಬೇಕೆಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಎಚ್.ಎಲ್.ದಿವಾಕರ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಹಾಗೂ ಸಂಸ್ಥೆಯ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಶಿಕ್ಷಕರು ಸಂಸ್ಥೆಯ ಆಧಾರವಾಗಿದ್ದಾರೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತಷ್ಟು ಸಾಧನೆಯನ್ನು ಮಾಡಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಜ್ಯೋತಿ ಮಾತನಾಡಿ, ದಲಿತ ಸಂಘರ್ಷ ಸಮಿತಿ ಹಾಗೂ ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸಿದ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಎಚ್.ಆರ್.ಜಗದೀಶ್, ನಿವೃತ್ತ ಉಪನಿರ್ದೇಶಕ ದುರ್ಗಯ್ಯ ಚಿತ್ರದುರ್ಗ, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ಸಿದ್ದೇಶ್ವರ, ಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರನ್ನು ಒಳಗೊಂಡಂತೆ 15 ಉಪನ್ಯಾಸಕರು, 8 ಶಿಕ್ಷಕರು ಹಾಗೂ ಅತೀ ಹೆಚ್ಚು ಅಂಕಗಳನ್ನು ಪಡೆದ 15 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.