ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ನನ್ನ ಹೆಸರಿನಲ್ಲಿ ನನಗೆ ತಿಳಿಯದಂತೆ ಸಾಲ ಮಂಜೂರು ಮಾಡಿ ಮರುಪಾವತಿಸುವಂತೆ ನಿರಂತರ ಕಿರುಕುಳ ನೀಡುತ್ತಿರುವುದಾಗಿ ಮೂಡುಬಿದಿರೆಯ ಖಾಸಗಿ ಬ್ಯಾಂಕ್ ವಿರುದ್ಧ ಗ್ರಾಹಕರಾಗಿದ್ದ ರಾಜೇಶ್ ಗೌಡ ಆರೋಪಿಸಿದ್ದಾರೆ.
ಮೂಡುಬಿದಿರೆಯ ಗ್ಯಾಸ್ ಏಜೆನ್ಸಿವೊಂದರಲ್ಲಿ ವೃತ್ತಿ ನಿರತರಾಗಿದ್ದು, ಸಂಬಳಕ್ಕಾಗಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗಿತ್ತು. ನನಗೆ ತಿಳಿಯದಂತೆ 4.20 ಲಕ್ಷ ರೂ. ಮೊತ್ತವನ್ನು ಸಾಲವಾಗಿ ಮಂಜೂರುಗೊಳಿಸಿ ಮರುಪಾವತಿಗಾಗಿ ನನಗೆ ಮತ್ತು ಕುಟುಂಬದವರಿಗೆ ನಿರಂತರ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಸುದ್ದಿಗೋಷ್ಠಿಯಲ್ಲಿ ದೂರಿದ್ದಾರೆ.
2021ರ ಮಾ.19ರಂದು ಸಾಲ ಮಾಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಸಾಲದ ಹಣವನ್ನು ಪ್ರತಿ ತಿಂಗಳು 10,893 ರೂ. ಇಎಂಐ ಆಗಿ ಬ್ಯಾಂಕ್ ಪಡೆದುಕೊಳ್ಳುತ್ತಿದೆ. ಈ ಬಗ್ಗೆ ನನ್ನ ಗಮನಕ್ಕೆ ಬಂದ ಕೂಡಲೇ ನಾನು ಸಾಲಪಡೆದಿಲ್ಲ ಎಂಬುದಾಗಿ ಬ್ಯಾಂಕ್ ಗಮನಕ್ಕೆ ತಂದರೂ ಬ್ಯಾಂಕ್ ಸಿಬ್ಬಂದಿ ಗಂಭೀರವಾಗಿ ಪರಿಗಣಸದೆ ನಿರ್ಲಕ್ಷೃ ತೋರಿರುವುದಾಗಿ ದೂರಿದ್ದಾರೆ.
ಈ ಬಗ್ಗೆ ಬ್ಯಾಂಕ್ ಒಂಬುಡ್ಸ್‌ಮೆನ್ ಸಹಿತ ವಿವಿಧ ಇಲಾಖೆಗಳಿಗೆ, ಜನಪ್ರತಿನಿಧಿಗಳಿಗೆ ದೂರು ನೀಡಿದ್ದೇನೆ. ನಾನು ಮಾಡದ ಸಾಲ ವಸೂಲಾತಿಗಾಗಿ ಬ್ಯಾಂಕ್‌ನಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಬ್ಯಾಂಕ್ ಅಧಿಕಾರಿಗಳನ್ನು ಪೊಲೀಸರು ವಿಚಾರಣೆಗೆ ಕರೆದಾಗ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದ್ದ ಅಧಿಕಾರಿಗಳು, ಮತ್ತೆ ಅದೇ ಚಾಳಿ ಮುಂದುವರಿಸಿದ್ದಾರೆ ಎಂದು ದೂರಿದರು.
ಪ್ರಸ್ತುತ ಬ್ಯಾಂಕ್ ಅಧಿಕಾರಿಗಳು 1,39,760 ರೂ. ಬಾಕಿ ಇರುವುದಾಗಿ ತಿಳಿಸಿದ್ದಾರೆ. ಈ ಖಾತೆಗೆ ಜಮಾಗೊಂಡ ಬೆಳೆ ವಿಮೆ ಹಣವನ್ನು ಕೂಡ ಬ್ಯಾಂಕ್ ಸಾಲ ವಸೂಲಾತಿಗೆ ಬಳಸಿಕೊಂಡಿದೆ ಎಂದು ಆರೋಪಿಸಿರುವ ಗ್ರಾಹಕ ರಾಜೇಶ್ ಗೌಡ, ಸೂಕ್ತ ನ್ಯಾಯ ಒದಗಿಸಿಕೊಡುವಂತೆ ವಿನಂತಿಸಿದ್ದಾರೆ.