ಅಭಿವೃದ್ಧಿ ನಡೆಸದಂತೆ ಕಾಂಗ್ರೆಸ್ ಕಿರುಕುಳ

Gururaj
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಬೈಂದೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯಬಾರದು ಮತ್ತು ಶಾಸಕರು ಅಧಿಕಾರಿಗಳ ಸಭೆ ನಡೆಸಬಾರದು ಎಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಕಾರ್ಯಕರ್ತರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಸಕ ಗುರುರಾಜ್ ಗಂಟೆಹೊಳೆ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಕೆಡಿಪಿ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ವರ್ತನೆ ಖಂಡಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಕೆಡಿಪಿ ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಿ ಮಾಹಿತಿ, ವರದಿ ಪಡೆಯಲಾಗುತ್ತದೆ. ಶಾಸಕರೇ ಇದರ ಅಧ್ಯಕ್ಷ ಆಗಿರುವುದರಿಂದ ಶಾಸಕರ ನೇತೃತ್ವದಲ್ಲೇ ಸಭೆ ನಡೆಯುತ್ತದೆ. ಅಭಿವೃದ್ಧಿಗೆ ಕೈಜೋಡಿಸುವಂತೆ ಕಾಂಗ್ರೆಸ್ ಸದಸ್ಯರಲ್ಲೂ ಮನವಿ ಮಾಡಲಾಗಿದ್ದು, ಆದರೆ ಕೈಜೋಡಿಸುವುದು ಬಿಟ್ಟು ಶಾಸಕರಿಗೆ ಕಿರುಕುಳ ನೀಡುವಲ್ಲಿ ಕಾಂಗ್ರೆಸಿಗರು ನಿರತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಲವು ಸದಸ್ಯರ ವಿರುದ್ಧ ಸಿಡಿಮಿಡಿಗೊಂಡ ಶಾಸಕ ಗುರುರಾಜ್ ಗಂಟಿಹೊಳೆ, ಕೆಡಿಪಿ ಸಭೆಯಲ್ಲಿ ಅಭಿವೃದ್ಧಿ ವಿಷಯಗಳ ಬಗ್ಗೆ ಮಾತ್ರ ಚರ್ಚೆ ನಡೆಯಬೇಕು. ರಾಜಕೀಯಕ್ಕಾಗಿ ಪ್ರತ್ಯೇಕ ಸಭೆಗಳನ್ನು ಆಯೋಜಿಸಬೇಕು. ಅಭಿವೃದ್ಧಿ ವಿಚಾರವಾಗಿ ಸಲಹೆಗಳಿದ್ದರೆ ನೀಡುವುದು ಬಿಟ್ಟು ಅನಾವಶ್ಯಕ ವ್ಯಂಗ್ಯ ಮಾಡಬಾರದು. ಎಲ್ಲರಿಗೂ ಇದು ಅನ್ವಯಿಸುತ್ತದೆ ಎಂದು ಹೇಳಿದರು.

ಶಾಸಕರಿಗೆ ಅಭಿವೃದ್ಧಿ ಕಾರ್ಯ ಮಾಡಲು ಬಿಡಲೇಬಾರದೆಂಬ ಹಠಕ್ಕೆ ಬೈಂದೂರು ಕಾಂಗ್ರೆಸ್ ಬಿದ್ದಿದೆ. ಬೈಂದೂರು ಕ್ಷೇತ್ರದ ಅಭಿವೃದ್ಧಿ ಕಾಂಗ್ರೆಸ್ ಸಹಿಸುತ್ತಿಲ್ಲ. ಜನಪರ ಕಾರ್ಯಗಳ ಕುರಿತು ಚರ್ಚೆ ಮಾಡಬಾರದೆ? ಶಾಸಕನಾಗಿ ಕ್ಷೇತ್ರದ ಏಳಿಗೆಗೆ ಸಂಬಂಧಿಸಿ ಪದೇಪದೆ ಪ್ರಗತಿ ಪರಿಶೀಲನೆ ಅಥವಾ ಅಧಿಕಾರಿಗಳ ಸಭೆ ಮಾಡಬಾರದೆ?-ಗುರುರಾಜ್ ಗಂಟಿಹೊಳೆ, ಬೈಂದೂರು ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net