

ಹರಪನಹಳ್ಳಿ: ಚುನಾವಣಾ ಪ್ರಚಾರದ ವೇಳೆ ಹೂವಿನಹಡಗಲಿ ಮಾಜಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ 371ಜೆ ಸೌಲಭ್ಯ ತಾವು ಕಲ್ಪಿಸಿದ್ದಾಗಿ ಸುಳ್ಳು ಹೇಳಿದ್ದಕ್ಕೆ ತಾಯಿ ಉಚ್ಚಂಗೆಮ್ಮದೇವಿ ತಕ್ಕ ಪಾಠ ಕಲಿಸಿದ್ದಾಳೆ ಎಂದು ಶಿಕ್ಷಕ ಮೇಘರಾಜ ಹೇಳಿದರು.
ತಾಲೂಕಿನ ಇತಿಹಾಸ ಪ್ರಸಿದ್ಧ ಉಚ್ಚಂಗಿದುರ್ಗದ ಶ್ರೀ ಉಚ್ಚೆಂಗೆಮ್ಮ ದೇವಿಗೆ ದಿ.ಎಂ.ಪಿ.ರವೀಂದ್ರ ಅಭಿಮಾನಿಗಳ ಬಳಗ ನೂತನವಾಗಿ ಆಯ್ಕೆಯಾಗಿರುವ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಗೆಲುವಿಗೆ ಹಾಗೂ 371ಜೆ ಸೌಲಭ್ಯದ ಬೇಡಿಕೆ ಸಿದ್ಧಿಗಾಗಿ 371 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಬಳಿಕ ಮಾತನಾಡಿದರು.
ಇದನ್ನೂ ಓದಿ: ಬೇನಾಮಿಗಳ ಹೆಸರಿನಲ್ಲಿ ಪಿಟಿಪಿ ಆಸ್ತಿ ಸಂಪಾದನೆ
ಕಳೆದ ವಿಧಾನಪರಿಷತ್ ಚುನಾವಣೆ ವೇಳೆ ಮಾಜಿ ಸಚಿವ, ಹೂವಿನಹಡಗಲಿ ಶಾಸಕರಾಗಿದ್ದ ಪಿ.ಟಿ.ಪರಮೇಶ್ವರನಾಯ್ಕ ಅವರು ಉಚ್ಚಂಗಿದುರ್ಗ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಪರ ಮತಯಾಚನೆ ಸಂದರ್ಭದಲ್ಲಿ ಹರಪನಹಳ್ಳಿ ತಾಲೂಕಿಗೆ 371ಜೆ ಸೌಲಭ್ಯ ಒದಗಿಸಿದ್ದು ನಾನೇ ಎಂದು ಹೇಳಿದರು.
ಆಗ ಮಧ್ಯ ಪ್ರವೇಶಿಸಿ ಸೌಲಭ್ಯ ಕಲ್ಪಿಸಿದ್ದು ನೀವಲ್ಲ, ಎಂ.ಪಿ.ರವೀಂದ್ರ ಎಂದು ಹೇಳಿದ್ದಕ್ಕೆ ಅವರು ಒಪ್ಪಲಿಲ್ಲ. ನಾನು ಸಭೆ ಬಳಿಕ ಉಚ್ಚೆಂಗೆಮ್ಮದೇವಿಗೆ ನಮಸ್ಕರಿಸಿ, ತಾಯಿ ನೀನು ಇರುವುದೇ ಸತ್ಯವಾಗಿದ್ದರೆ 371ಜೆ ಸೌಲಭ್ಯ ಕಲ್ಪಿಸಿದವರಾರು ಎನ್ನುವುದಕ್ಕೆ ಚುನಾವಣೆಯಲ್ಲಿ ಉತ್ತರ ಕೊಡು ಎಂದು ಬೇಡಿಕೊಂಡಿದ್ದೆ. ಅದರಂತೆ ಪರಮೇಶ್ವರನಾಯ್ಕ ಚುನಾವಣೆಯಲ್ಲಿ ಸೋತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗುಡಿ ನಾಗಾರಾಜ್, ದ್ಯಾಮಜ್ಜಿ ಆನಂದ, ಗುಡೆಕೋಟಿ ಅಂಜಿನಪ್ಪ, ಶಿಕಾರಿ ಅಂಜಿನಪ್ಪ, ಮಟ್ಟೇರ ಮಂಜುನಾಥ, ಕಡಬಗೆರೆ ಕಾರ್ತಿಕ್, ಗ್ರಾಪಂ ಸದಸ್ಯರು ಇದ್ದರು.