

ಹರಪನಹಳ್ಳಿ: ತಾಲೂಕಿನ ಹಾರಕನಾಳು ದೊಡ್ಡ ತಾಂಡಾದಲ್ಲಿ ಶನಿವಾರ ಯೋಧನ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಆಹಾರ ಧಾನ್ಯ-ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಆಗಿಲ್ಲ.
ಗ್ರಾಮದ ಸೈನಿಕ ಕಿರಣ್‌ನಾಯ್ಕ ಪಿರ್ಯನಾಯ್ಕ ಮನೆ ಬೆಂಕಿಗೆ ಆಹುತಿಯಾಗಿದೆ. ಕುಟುಂಬ ಸಮೇತ ಸಹೋದರಿ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಅವಘಡ ಸಂಭವಿದೆ. ಬೆಳಗ್ಗೆ ಮನೆಯಲ್ಲಿದ್ದ ಫ್ರಿಜ್‌ಗೆ ಶಾಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ನೀರು ಹಾಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ, ಬೆಂಕಿಯ ಜ್ವಾಲೆ ಕಡಿಮೆಯಾಗಿರಲಿಲ್ಲ.
ಹರಪನಹಳ್ಳಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದರು. ಮೂಲ ದಾಖಲೆಗಳು, ಬಂಗಾರದ ಒಡವೆಗಳು, ಗೃಹೋಪಯೋಗಿ, ಕೃಷಿ ಉಪಕರಣ, ದವಸ, ಧಾನ್ಯಗಳು ಆಹುತಿಯಾಗಿವೆ.
ಅಗ್ನಿಶಾಮಕದ ದಳದ ಠಾಣಾಧಿಕಾರಿ ರಾಮಪ್ಪ, ಸಿಬ್ಬಂದಿ ನಾಗಪ್ಪ, ಸುರೇಶ, ಪಂಪಾಪತಿ, ಶಿವಪುತ್ರ, ರಫಿಕ್ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿದ್ದರು.
ತಹಸೀಲ್ದಾರ್ ಗಿರೀಶ್ ಬಾಬು ಹಾಗೂ ಕಂದಾಯ ಅಧಿಕಾರಿಗಳು, ಪಿಎಸ್‌ಐ ಎಚ್.ಸಿ.ಹಿರೇಮಠ, ಕೆಇಬಿ ಸೆಕ್ಷನ್ ಅಧಿಕಾರಿ ರವಿಕುಮಾರ್ ಭೇಟಿ ನೀಡಿ ಮಾಹಿತಿ ಪಡೆದರು.