

ಹರಿಹರ: ಪಂಚಮಸಾಲಿ ಸಮುದಾಯದ ಆರ್ಥಿಕ ಸದೃಢತೆಗೆ ಸಮಾಜದ ಹೆಸರಿನಲ್ಲಿ ಒಂದು ಅರ್ಬನ್ ಬ್ಯಾಂಕ್ ಸ್ಥಾಪನೆ ಮಾಡಬೇಕು ಎಂದು ಸಹಕಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ನಗರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಿತ್ತೂರ ರಾಣಿ ಚನ್ನಮ್ಮಾಜಿ ದ್ವಿಶತಮಾನೋತ್ಸವ, ವಚನಾನಂದ ಶ್ರೀಗಳ 7 ನೇ ವಾರ್ಷಿಕ ಪೀಠಾರೋಹಣ, ಹರಜಾತ್ರೆ, ರಾಜ್ಯ ಮಹಿಳಾ ಹಾಗೂ ಯುವ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಎರಡೂ ಮಠಗಳು ಸೇರಿ ಬ್ಯಾಂಕ್ ಮಾಡಿದರೆ ಇನ್ನೂ ಒಳ್ಳೆಯದು. ಪ್ರಥಮವಾಗಿ ನಾನು 11 ಲಕ್ಷ ರೂ. ಷೇರು ಪಡೆಯುತ್ತೇನೆ. ಬ್ಯಾಂಕ್ನಲ್ಲಿ ರಾಜಕಾರಣಿಗಳಿಗೆ ಅವಕಾಶ ಇರಕೂಡದು. ಸಮಾಜದ ಬಗ್ಗೆ ಕಳಕಳಿ ಇರುವವರಿಗೆ ಜವಾಬ್ದಾರಿ ನೀಡಿದಾಗ ಬ್ಯಾಂಕ್ನೊಂದಿಗೆ ಪೀಠಗಳ ಆರ್ಥಿಕ ಸ್ಥಿತಿ ಉತ್ತಮಗೊಂಡು ಕಟ್ಟ ಕಡೆಯ ವ್ಯಕ್ತಿಗೆ ಸಹಕಾರ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಪ್ರವರ್ಗ 2 ಎ ನಲ್ಲಿ ಈಗಾಗಲೆ 108 ಜಾತಿಗಳಿವೆ, ಪಂಚಮಸಾಲಿ ಸಮಾಜ ಇದರಲ್ಲಿ ಸೇರಿದರೆ 109 ಜಾತಿಗಳಾಗುತ್ತವೆ ಎಂದು ಬಿಜೆಪಿ ಸರ್ಕಾರ 2ಎ ಬದಲಿಗೆ 2 ಡಿ ಸೃಷ್ಟಿಸಿ ಅದರಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಸದ್ಯಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇದ್ದು, 2ಡಿ ವರ್ಗದ ಮೀಸಲಾತಿ ತಮಗೆ ಸಿಗುವುದರಲ್ಲಿ ಯಾವುದೇ ಸಂದೇಹ ಬೇಡ ಎಂದರು.
ರಾಜ್ಯದಲ್ಲಿ ಪಂಚಮಸಾಲಿ ಸಮಾಜದ ಜನಸಂಖ್ಯೆ 1 ಕೋಟಿ ಮೀರಿದೆ. ಕೃಷಿ ಪ್ರಧಾನವಾಗಿರುವ ನಮ್ಮ ಸಮಾಜವನ್ನು ಅವಲಂಬಿಸಿರುವ ಇತರರ ಜನಸಂಖ್ಯೆ 1 ಕೋಟಿ ಇದೆ. ರಾಜ್ಯದಲ್ಲಿ ಒಟ್ಟು 2 ಕೋಟಿ ಜನಸಂಖ್ಯೆ ನಮ್ಮದಾಗಿದೆ. ಸಮಾಜದ ಬೇಡಿಕೆ ಕಡೆಗಣಿಸುವ ಸರ್ಕಾರಕ್ಕೆ ಪಾಠ ಕಲಿಸುವ ಶಕ್ತಿ ಸಮಾಜಕ್ಕಿದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಪೀಠದ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜ್ಕುಮಾರ್, ಹರಿಹರ ಪೀಠದಲ್ಲಿ ಈಗಾಗಲೇ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ, ಆಳುವ ಸರ್ಕಾರಗಳು ಮೀಸಲಾತಿ ವಿಚಾರದಲ್ಲಿ ಕೇವಲ ಭರವಸೆ ನೀಡುತ್ತಾ ಬಂದಿದೆ. ಕಾನೂನಾತ್ಮಕವಾಗಿ ಮೀಸಲಾತಿಯ ಸತ್ಯವನ್ನು ಸಮಾಜದ ಮುಂದೆ ಹೇಳುವಂತೆ ಒತ್ತಾಯಿಸಿದರು.
ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ರಾಜ್ಯ ಸಂಘದಲ್ಲಿ ಕೇವಲ 13 ಸಾವಿರ ಜನರು ಸದಸ್ಯತ್ವ ಪಡೆದಿದ್ದಾರೆ. ಮುಂದಿನ ಎರಡು ವರ್ಷದಲ್ಲಿ 1 ಲಕ್ಷ ಸದಸ್ಯತ್ವ ಮಾಡಿಸುವ ಗುರಿಯಿದೆ ಎಂದರು.
ವಚನಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಹರಿಹರ ಪೀಠ ಸಮಾಜದ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತಿದೆ. ಹರ ಜಾತ್ರೆ ಎನ್ನುವ ಹೊಸ ಸಂಪ್ರದಾಯಕ್ಕೆ ಚಾಲನೆ ನೀಡಿದ ಪರಿಣಾಮ ಸಮಾಜ ದಿನದಿನಕ್ಕೂ ಸದೃಢವಾಗಿ ಬೆಳೆಯುತ್ತಿದೆ. ಪೀಠದ ಬಗ್ಗೆ ತೆಗಳುವುದನ್ನೇ ಕೆಲವರು ಕಾಯಕ ಮಾಡಿಕೊಂಡಿದ್ದಾರೆ. ಅವರಿಗೆ ಉತ್ತರ ನೀಡದೆ ಉದಾಸೀನ ಮಾಡುವುದೇ ಲೇಸು ಎಂದು ತಿಳಿದು ನಮ್ಮ ಕಾಯಕ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ರುದ್ರಾಭಿಷೇಕ : ಹರ ಜಾತ್ರೆಯ ಅಂಗವಾಗಿ ಮಂಗಳವಾರ ಬೆಳಗ್ಗೆ ಲಿಂ.ಡಾ. ಮಹಾಂತ ಶ್ರೀಗಳ ಗದ್ದಿಗೆ ಹಾಗೂ ಹರ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು. ಕಿತ್ತೂರ ರಾಣಿ ಚನ್ನಮ್ಮಾಜಿ ದ್ವಿಶತಮಾನೋತ್ಸವವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯ ಮಹಿಳಾ ಹಾಗೂ ಯುವ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸಮಾಜದ ಮುಖಂಡ ಬಸವರಾಜ್ ದಿಂಡೂರ್ ಪ್ರಮಾಣ ವಚನ ಬೋಧಿಸಿದರು.
ಕಾರಿಗಾಗಿ ಗದ್ದಲ: ರಾಜ್ಯಾದ್ಯಂತ ಸಂಚರಿಸಿ ಸಮಾಜ ಸಂಘಟನೆ ಮಾಡಲು ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲರಿಗೆ ಮಾಜಿ ಸಚಿವ ನಿರಾಣಿ ಅವರು ಹೊಸ ಕಾರು ನೀಡಿದ ವಿಚಾರ ಗದ್ದಲಕ್ಕೆ ಕಾರಣವಾಯಿತು.
ಕೆಲವು ಭಕ್ತರ ಮಧ್ಯೆ ಮಾತಿನ ಸಮರ ಆರಂಭವಾಗಿ ಗಲಾಟೆ ಶುರುವಾಯಿತು. ವ್ಯಕ್ತಿಯೊಬ್ಬನ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಯಿತು. ಆತನ ತಲೆಗೆ ಬಟ್ಟೆ ಕಟ್ಟಿ ಆಸ್ಪತ್ರೆಗೆ ಕಳುಹಿಸಲಾಯಿತು.
ಶಾಸಕರಾದ ಬಿ.ಪಿ.ಹರೀಶ್, ಯು.ಬಿ.ಬಣಕಾರ್, ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಹರಜಾತ್ರೆ ಅಧ್ಯಕ್ಷ ಸೋಮಣ್ಣ ಬೇವಿನಮರದ, ಪೀಠದ ಧರ್ಮದರ್ಶಿಗಳಾದ ಬಿ.ಸಿ.ಉಮಾಪತಿ, ಪಿ.ಡಿ.ಶಿರೂರು, ಗುರಶಾಂತ್ ನಿಡೋಣಿ, ಶ್ರೀಮಂತ್ ಇಚಿಡಿ, ಮಾಜಿ ಶಾಸಕ ಅರುಣಕುಮಾರ್, ಪರಮೇಶ್ವರಪ್ಪ ಪಟ್ಟಣಶೆಟ್ಟಿ, ಚಂದ್ರಶೇಖರ್ ಪೂಜಾರ್, ವಸಂತಮ್ಮ ಹುಲ್ಲತ್ತಿ, ರಶ್ಮಿ ಕುಂಕೋದ್ ಇತರರಿದ್ದರು.