ಹಣಕೋಣ ಕೊಲೆ ಪ್ರಕರಣ ಮಹತ್ವದ ಸುಳಿವು ಪತ್ತೆ

Murder follow up
Published on

ಕಾರವಾರ: ಪುಣಾ ಮೂಲದ ಉದ್ಯಮಿಯನ್ನು ಹಣಕೋಣದಲ್ಲಿ ಭೀಕರವಾಗಿ ಹತ್ಯೆ ಮಾಡಿದವರ ಮಹತ್ವದ ಸುಳಿವುಗಳನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿದ್ದು, ಶೀಘ್ರದಲ್ಲಿ ಕೊಲೆಗಾರರನ್ನು ಬಂಧಿಸುವ ಸಾಧ್ಯತೆ ಇದೆ.
ಭಾನುವಾರ ಬೆಳಗಿನಜಾವ ಹಣಕೋಣ ಸಾತೇರಿ ದೇವಸ್ಥಾನ ಸಮೀಪ ವಿನಾಯಕ ನಾಯ್ಕ (56) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಅವರ ಪತ್ನಿ ವೃಶಾಲಿ ಅವರ ಮೇಲೆಯೂ ಹಲ್ಲೆ ಮಾಡಲಾಗಿತ್ತು. ಚಿತ್ತಾಕುಲಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಹಣಕೋಣ ಸಾತೇರಿ ದೇವಸ್ಥಾನ ಕಮಾನಿನ ಬಳಿ ಇರುವ ಬ್ಯಾಂಕ್‌ನ ಸಿಸಿ ಕ್ಯಾಮರಾದಲ್ಲಿ ಬಿಳಿಯ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಹಂತಕರು ಬಂದಿರುವುದು ದಾಖಲಾಗಿದೆ. ಅದನ್ನು ಆಧರಿಸಿ ಪೊಲೀಸರು ಕಾರಿನ ಮಾಲೀಕರ ಮೂಲಕ ಹಂತರ‍್ಯಾರು ಎಂಬುದನ್ನು ಅಂದಾಜಿಸಿದ್ದಾರೆ. ಈ ಸಂಬಂಧ ಒಬ್ಬನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಪುಣೆಯಲ್ಲಿ ಇಲೆಕ್ಟ್ರಾನಿಕ್ ಉದ್ಯಮ ಹೊಂದಿದ್ದ ವಿನಾಯಕ ನಾಯ್ಕ ಅವರ ವ್ಯವಹಾರದ ದ್ವೇಷ ಹೊಂದಿದ್ದರೇ, ಕೊಲೆಗೆ ಅಕ್ರಮ ಸಂಬಂಧಗಳ ಲಿಂಕ್ ಇದೆಯೇ ಎಂಬ ಹಲವು ದಿಕ್ಕಿನಲ್ಲಿ ಪೊಲೀಸರು ತನಿಖೆ ನಡೆದಿದ್ದು, ವಿನಾಯಕ ಅವರಿಗೆ ಆಪ್ತವಾಗಿರುವ ಕಾರವಾರದ ಮೂಲದ ವ್ಯಕ್ತಿಯೇ ಅನ್ಯ ರಾಜ್ಯಗಳ ಪಾತಕಿಗಳ ಜತೆ ಸೇರಿ ಕೊಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸೋಮವಾರ ಕೊಲೆ ನಡೆದ ಸ್ಥಳ ಪರಿಶೀಲಿಸಿದರು. ತನಿಖಾ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net