

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಅರಸಿನಮಕ್ಕಿ ಹೊಸ್ತೋಟದ ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆಗೆ ಅರಸಿನಮಕ್ಕಿ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ಉನ್ನತ ಉದ್ಯೋಗದಲ್ಲಿರುವ ಮಿಥುನ್ ಕಾರಂತ್ ಅವರು ಸುಮಾರು 15 ಸಾವಿರ ರೂ. ವೆಚ್ಚದಲ್ಲಿ ಒದಗಿಸಿದ ಕ್ರೀಡಾ ಸಲಕರಣೆಗಳನ್ನು ಶನಿವಾರ ಹಸ್ತಾಂತರಿಸಲಾಯಿತು.
ಮಿಥುನ್ ಕಾರಂತ್ ಅವರ ಹೆತ್ತವರಾದ ತಾಪಂ ಮಾಜಿ ಸದಸ್ಯರಾದ ಮಂಜುಳಾ ಕಾರಂತ್, ರಾಜರಾಮ ಕಾರಂತ್ ದಂಪತಿ ಶಾಲೆ ಮುಖ್ಯ ಶಿಕ್ಷಕಿ ಮಾಲತಿ ಅವರಿಗೆ ಕ್ರೀಡಾ ಸಾಮಗ್ರಿ ಹಸ್ತಾಂತರಿಸಿದರು.
ಮಂಜುಳಾ ಕಾರಂತ್ ಕ್ರೀಡಾ ಸಲಕರಣೆಗಳನ್ನು ಹಸ್ತಾಂತರಿಸಿ ಮಾತನಾಡಿ, ಗ್ರಾಮೀಣ ಶಾಲೆಯಾದರೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಸರ್ವಾಂಗೀಣ ಬೆಳವಣಿಗೆಗೆ ಒತ್ತು ನೀಡಿರುವ ಹೊಸ್ತೋಟ ಶಾಲೆಗೆ ಕ್ರೀಡಾ ಸಾಮಗ್ರಿ ಒದಗಿಸಲು ಹರ್ಷವಾಗುತ್ತಿದೆ. ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮುರಳೀಧರ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆ ಬಗ್ಗೆ ಅಭಿಮಾನ ಹೊಂದಿ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಮಿಥುನ್ ಅವರು ಮಾದರಿಯಾಗಿದ್ದಾರೆ ಎಂದರು.
ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಶ್ರೀಕರ ಭಿಡೆ, ಹಳೇ ವಿದ್ಯಾರ್ಥಿ ಸಂಘ ಗಣೇಶ್ ಹೊಸ್ತೋಟ, ಎಸ್ಡಿಎಂಸಿ ಸದಸ್ಯರಾದ ಗಣೇಶ್ ಪಲಸ್ತಡ್ಕ, ನೀತಾ ರಾಧೇಶ್, ವೃಷಾಂಕ್ ಖಾಡಿಲ್ಕರ್, ಅಂಗನವಾಡಿ ಕಾರ್ಯಕರ್ತೆ ಭಾರತಿ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಮಾಲತಿ ಸ್ವಾಗತಿಸಿದರು. ಶಿಕ್ಷಕಿ ಜಯಂತಿ ವಂದಿಸಿದರು.