

ಸುಬ್ರಹ್ಮಣ್ಯ: ಪಂಜ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಬ್ರಹ್ಮಣ್ಯ ರೋಟರಿ ಕ್ಲಬ್, ಸುಬ್ರಹ್ಮಣ್ಯ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ವಸಂತಕುಮಾರ್ ಕೇದಿಲ ಕೊಡುಗೆಯಾಗಿ ನೀಡಿದ ಶಾಲೆಗೆ ಅಗತ್ಯವುಳ್ಳ ಧ್ವನಿವರ್ಧಕ ಪರಿಕರಗಳನ್ನು ಮಂಗಳವಾರ ನೀಡಲಾಯಿತು.
ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡ ಮುಖ್ಯಶಿಕ್ಷಕಿ ಲೀಲಾಕುಮಾರಿ ನಡುತೋಟ ಅವರಿಗೆ ಕೊಡುಗೆಯನ್ನು ಹಸ್ತಾಂತರಿಸಿ, ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳ ಅಗತ್ಯ ಮನಗಂಡು ಅವುಗಳನ್ನು ಪೂರೈಸಲು ಮನ ಮಾಡುವುದು ಶ್ರೇಷ್ಠವಾದುದು. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುಕೂಲವಾಗುವ ಪ್ರತಿಭಾ ಪ್ರದರ್ಶನ, ಪಠ್ಯೇತರ ಚಟುವಟಿಕೆ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಅತ್ಯವಶ್ಯಕವಾಗಿದೆ. ಅವುಗಳನ್ನು ನೀಡುವ ಮೂಲಕ ವಿದ್ಯಾ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದುದು ಮಾದರಿಯಾಗಿದೆ ಎಂದರು.
ಸುಬ್ರಹ್ಮಣ್ಯ ರೋಟರಿ ಅಧ್ಯಕ್ಷ ಚಂದ್ರಶೇಖರ ನಾಯರ್ ಅಧ್ಯಕ್ಷತೆ ವಹಿಸಿದ್ದರು. ದಾನಿ, ಪೂರ್ವಾಧ್ಯಕ್ಷ ವಸಂತ ಕುಮಾರ್ ಕೆದಿಲ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ರುತಿ ಮಂಜುನಾಥ್, ರೋಟರಿ ವಲಯ ಸೇನಾನಿ ವಿಶ್ವನಾಥ ನಡುತೋಟ, ಎಸ್‌ಡಿಎಂಸಿ ಅಧ್ಯಕ್ಷ ಸೋಮಶೇಖರ ನೇರಳ, ಹಿರಿಯ ರೋಟರಿ ಸದಸ್ಯ ಸುದರ್ಶನ ಶೆಟ್ಟಿ, ಮುಖ್ಯಶಿಕ್ಷಕಿ ಲೀಲಾ ಕುಮಾರಿ ಟಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ಎಸ್‌ಡಿಎಂಸಿ ಉಪಾಧ್ಯಕ್ಷರು, ಸದಸ್ಯರು, ಸಾರ್ವಜನಿಕರು, ಸಂಘ-ಸಂಸ್ಥೆ ಸದಸ್ಯರು, ರೋಟರಿ ಸದಸ್ಯರು ಹಾಜರಿದ್ದರು.