ಸಹಕಾರ ಸಂಘದ ಅಭಿವೃದ್ಧಿಗೆ ದೇಣಿಗೆ ಹಸ್ತಾಂತರ

25mlv2
Published on

ಮಳವಳ್ಳಿ: ರೈತರ ಹಿತಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಮಿಕ್ಕೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಭಿವೃದ್ಧಿಗಾಗಿ ನಾನು ನಿರ್ದೇಶಕನಾಗಿರುವ ಅವಧಿವರೆಗೂ ವಾರ್ಷಿಕ ಒಂದು ಲಕ್ಷ ರೂ.ದೇಣಿಗೆ ನೀಡುವುದಾಗಿ ನಿರ್ದೇಶಕ ಕೆ.ಮಹದೇವು ತಿಳಿಸಿದರು.


ತಾಲೂಕಿನ ಮಿಕ್ಕೆರೆ ಗ್ರಾಮದ ಸೊಸೈಟಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಸಂಘದ ಏಳಿಗೆಗಾಗಿ ಒಂದು ಲಕ್ಷ ರೂ. ದೇಣಿಗೆ ಚೆಕ್‌ನ್ನು ಅಧ್ಯಕ್ಷ ಪಿ.ಶಿವಕುಮಾರ್ ಅವರಿಗೆ ಹಸ್ತಾಂತರ ಮಾಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಬಹಳಷ್ಟು ಅನ್ನದಾತರ ಬದುಕಿಗೆ ಸ್ಥಳೀಯ ಸೊಸೈಟಿಗಳಲ್ಲಿ ಕೃಷಿ ಚಟುವಟಿಕೆಗೆ ಬೇಕಾಗುವ ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಸಾಲ ಸವಲತ್ತುಗಳನ್ನು ಸಕಾಲಕ್ಕೆ ಪೂರೈಸುವ ಮೂಲಕ ನೆರವಾಗುತ್ತಿವೆ. ಸಂಘದ ಆರ್ಥಿಕ ಸುಸ್ಥಿರತೆಯನ್ನು ರೈತರೇ ಕಾಯ್ದುಕೊಂಡು ಸದೃಢಗೊಳಿಸಬೇಕಾಗಿದ್ದು, ನಮ್ಮ ಸೊಸೈಟಿಯ ಅಭಿವೃದ್ಧಿಗಾಗಿ ನಾನು ನಿರ್ದೇಶಕನಾಗಿರುವವರೆಗೂ ಪ್ರತಿ ವರ್ಷ ದೇಣಿಗೆ ನೀಡಲಾಗುವುದು ಎಂದು ಘೋಷಿಸಿದರು.


ಸಂಘದ ಕಾರ್ಯನಿರ್ವಹಣಾಧಿಕಾರಿ ಜೆ.ಟಿ.ಪ್ರಸನ್ನಕುಮಾರ್ ಮಾತನಾಡಿ, ಪ್ರಸಕ್ತ ವರ್ಷ 5 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುವ ಮೂಲಕ 6,50,509 ರೂ. ಆದಾಯ ಗಳಿಸಿದೆ ಎಂದು ವಾರ್ಷಿಕ ವರದಿಯನ್ನು ಸಭೆಗೆ ಮಾಹಿತಿ ನೀಡಿದರು.


ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿರುವ ಸಂಘದ ಷೇರುದಾರ ಸದಸ್ಯರ ನಾಲ್ವರು ಮಕ್ಕಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.


ಸೊಸೈಟಿ ಉಪಾಧ್ಯಕ್ಷೆ ಗೌರಮ್ಮ, ನಿರ್ದೇಶಕರಾದ ಮಹೇಶ್‌ಗೌಡ, ಮಹದೇವು, ಪುಟ್ಟಸ್ವಾಮಿ, ವೀರಭದ್ರಸ್ವಾಮಿ, ಕುನ್ನೇಗೌಡ, ಚುಂಚೇಗೌಡ, ಶಿವಮ್ಮ, ಕೆಂಪಾಜಮ್ಮ, ರಾಜಣ್ಣ ಹಾಗೂ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net