ಎಐಸಿಸಿ ಅಧ್ಯಕ್ಷರ ತವರಲ್ಲಿ ಕಮಲ ಮುದುಡಿಸಲು ಕೈ ಫೈಟ್

gul
Published on

| ಜಯತೀರ್ಥ ಪಾಟೀಲ ಕಲಬುರಗಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಹಾಗೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕಲಬುರಗಿ ಮೀಸಲು ಕ್ಷೇತ್ರ ಕಳೆದ ಸಲ ಬಿಜೆಪಿ ಮಡಿಲಿಗೆ ಬಿದ್ದಿದೆ. ಆದರೆ ತನ್ನ ಅಸ್ತಿತ್ವ, ಎಐಸಿಸಿ ಅಧ್ಯಕ್ಷರ ಘನತೆಯೊಂದಿಗೆ ಕ್ಷೇತ್ರವನ್ನು ವಶಕ್ಕೆ ಪಡೆಯಲು ಕಾಂಗ್ರೆಸ್ ಮುಂದಾಗಿದ್ದರೆ, ನರೇಂದ್ರ ಮೋದಿ ಹೆಸರಲ್ಲಿ ಬಿಜೆಪಿ ರಣಕಹಳೆ ಮೊಳಗಿಸಿದೆ. ಬಿಜೆಪಿಯಿಂದ ಹಾಲಿ ಸಂಸದ ಡಾ.ಉಮೇಶ ಜಾಧವ್, ಕಾಂಗ್ರೆಸ್​ನಿಂದ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಅಖಾಡದಲ್ಲಿದ್ದಾರೆ.

ಹಾಲಿ ಸಂಸದರನ್ನೇ ಕಣಕ್ಕಿಳಿಸಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ ಬಿಜೆಪಿ. ಕಾಂಗ್ರೆಸ್​ನ ರಾಧಾಕೃಷ್ಣ ಹೊಸ ಮುಖವಾಗಿದ್ದರೂ ಖರ್ಗೆ ಅವರ ಹಿಂಬದಿ ರಾಜಕಾರಣದ ಸೂತ್ರಧಾರ ಎಂಬುದು ಬಹಿರಂಗ ಸತ್ಯ. ಮೋದಿ ಅಲೆಯಲ್ಲಿ ಗೆದ್ದಿರುವ ಡಾ.ಉಮೇಶ ಜಾಧವ್ ಅವರನ್ನು ಎದುರಿಸಲು ಕಾಂಗ್ರೆಸ್ ಅಳೆದೂ-ತೂಗಿ ಅಭ್ಯರ್ಥಿ ಆಯ್ಕೆ ಮಾಡಿದೆ. ಇಂದಿಗೂ ಖರ್ಗೆ ಮಾಡಿರುವ ಅಭಿವೃದ್ಧಿ ಯೋಜನೆಗಳನ್ನು ನೆಚ್ಚಿಕೊಂಡು ಡಾ.ಜಾಧವ್ ವಿರುದ್ಧ ಹೆಚ್ಚು ಮಾತನಾಡದೆ ಗ್ಯಾರಂಟಿ ಬಲದೊಂದಿಗೆ ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ ಇರಿಸಿದೆ. ಬಿಜೆಪಿ ಮೋದಿ ನಾಮಬಲ, ಕ್ಷೇತ್ರಕ್ಕೆ ನೀಡಿರುವ ಅಭಿವೃದ್ಧಿ ಕಾರ್ಯ ನೆಚ್ಚಿಕೊಂಡು, ಸಂಘಟನೆ ಶಕ್ತಿ ಆಧಾರದಲ್ಲಿ ಮುಂದಡಿ ಇರಿಸಿದೆ. ಮತ್ತೊಂದೆಡೆ ಡಾ.ಜಾಧವ್ ಅವರು ಖರ್ಗೆಗೆ ನೇರ ಸವಾಲು ಹಾಕುತ್ತ ಈ ಭಾಗ ಹಿಂದುಳಿದಿರುವಿಕೆಗೆ ಕಾರಣರ್ಯಾರು ಎಂಬ ಪ್ರಶ್ನೆಯೊಂದಿಗೆ ಪ್ರಚಾರ ಆರಂಭಿಸಿದ್ದಾರೆ. ಉಭಯ ಪಕ್ಷದ ನಾಯಕರು ಎಲ್ಲೂ ವೈಯಕ್ತಿಕ ಟೀಕೆ, ಟಿಪ್ಪಣಿಗಳಿಗೆ ಇಳಿಯದೆ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ.

ಪ್ರಬಲ ಲಿಂಗಾಯತ ಸಮುದಾಯದ ಕ್ಷೇತ್ರದಲ್ಲಿ ದಲಿತ ಬಲಗೈ, ಎಡಗೈ ಭಿನ್ನಾಭಿಪ್ರಾಯದ ಲಾಭ ಪಡೆಯಲು ಉಭಯ ಪಕ್ಷಗಳು ಹಪಹಪಿಸುತ್ತಿವೆ. ಲಂಬಾಣಿ ಸಮುದಾಯದ ಡಾ. ಜಾಧವ್, ದಲಿತ ಬಲಗೈ ಸಮುದಾಯದ ರಾಧಾಕೃಷ್ಣ ದೊಡ್ಡಮನಿ ತಮ್ಮ ಸಮುದಾಯದ ಮತಗಳೊಂದಿಗೆ ಇತರ ಪ್ರಬಲವಾದ ಲಿಂಗಾಯತ, ಕೋಲಿ, ಮುಸ್ಲಿಂ, ಬ್ರಾಹ್ಮಣ ಸಮಾಜದ ಮತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಡಾ.ಜಾಧವ್ ವಿರುದ್ಧ ಬಿಜೆಪಿಯಲ್ಲಿ ಕೆಲವೆಡೆ ಕಾರ್ಯಕರ್ತರ ಅಸಮಾಧಾನವಿದ್ದರೂ ವಿರೋಧ ವ್ಯಕ್ತವಾಗಿಲ್ಲ. ರಾಧಾಕೃಷ್ಣ ಅವರಿಗೆ ಬಹಿರಂಗವಾಗಿ ಎಲ್ಲಿಯೂ ವಿರೋಧ ವ್ಯಕ್ತವಾಗದಿದ್ದರೂ ಕಾಂಗ್ರೆಸ್ ಶಾಸಕರೇ ಇರುವ ಕ್ಷೇತ್ರದಲ್ಲಿ ಒಳಏಟಿನ ಭೀತಿ ಕಾಡುತ್ತಿದೆ.

ಕಾಂಗ್ರೆಸ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ : 1957ರಿಂದ ಈವರೆಗೆ 16 ಸಾರ್ವತ್ರಿಕ, ಎರಡು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ 15 ಬಾರಿ ಗೆಲುವು ಸಾಧಿಸಿದ್ದು, ಎರಡು ಸಲ ಬಿಜೆಪಿ, ಒಮ್ಮೆ ಜನತಾದಳ ಗೆಲುವಿನ ನಗೆ ಬೀರಿವೆ. 1996ರಲ್ಲಿ ಖಮರುಲ್ ಇಸ್ಲಾಂ, 1998ರಲ್ಲಿ ಬಿಜೆಪಿಯ ಬಸವರಾಜ ಪಾಟೀಲ್ ಸೇಡಂ ಗೆದ್ದಿದ್ದರು. ಮತ್ತೆ 2014ರವರೆಗೆ ಕಾಂಗ್ರೆಸ್ ನಿರಂತರ ಗೆಲ್ಲುತ್ತಲೇ ಇತ್ತು. 2019ರಲ್ಲಿ ಮೋದಿ ಅಲೆಯಲ್ಲಿ ಡಾ.ಉಮೇಶ ಜಾಧವ್ ಗೆಲುವಿನ ಪತಾಕೆ ಹಾರಿಸಿದರು. ಲೋಕಸಭೆ ಚುನಾವಣೆ ವ್ಯಾಪ್ತಿಯಲ್ಲಿ 8 ವಿಧಾನಸಭೆ ಕ್ಷೇತ್ರಗಳಿದ್ದು, ಒಂದರಲ್ಲಿ ದಳ, ಆರು ಕಡೆ ಕಾಂಗ್ರೆಸ್, ಒಂದು ಕಡೆ ಬಿಜೆಪಿ ಶಾಸಕರಿದ್ದಾರೆ.

ಜಾತಿವಾರು ಲೆಕ್ಕಾಚಾರ: ಕ್ಷೇತ್ರದಲ್ಲಿ 20,35,806 ಮತದಾರರ ಪೈಕಿ 10,34,370 ಪುರುಷ, 10,31,157 ಮಹಿಳೆಯರಿದ್ದಾರೆ. ಲಿಂಗಾಯತರು, ಪರಿಶಿಷ್ಟ ಜಾತಿ ಪ್ರಾಬಲ್ಯವಿದೆ. ಲಿಂಗಾಯತರು ಸುಮಾರು 4.80 ಲಕ್ಷ , ಎಸ್ಸಿ 4 ಲಕ್ಷ, ಕಬ್ಬಲಿಗ 3 ಲಕ್ಷ, ಮುಸ್ಲಿಂ 3 ಲಕ್ಷ ಮತದಾರರಿದ್ದಾರೆ. ಉಳಿದಂತೆ ಸಣ್ಣ ಸಮುದಾಯಗಳಿದ್ದು, ತೀವ್ರ ಪೈಪೋಟಿ ನಡೆದರೆ ಅವರೇ ನಿರ್ಣಾಯಕರಾಗುವ ಸಾಧ್ಯತೆ ಇದೆ. ಲಿಂಗಾಯತರು, ಕಬ್ಬಲಿಗರು ಯಾರ ಕಡೆ ವಾಲುತ್ತಾರೋ ಎಂಬ ಕುತೂಹಲವಿದೆ. ಅಹಿಂದ ಮತಗಳು ನಿರ್ಣಾಯಕ.

ಡಾ.ಉಮೇಶ ಜಾಧವ್ ಪ್ಲಸ್-ಮೈನಸ್

1. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ

2. ಪ್ರಬಲ ಲಂಬಾಣಿ ಸಮುದಾಯದ ಸಾಥ್

3. ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು

4. ಗ್ರಾಮೀಣ ಭಾಗಕ್ಕೆ ಭೇಟಿ ಕೊಟ್ಟಿಲ್ಲ

5. ನಿರೀಕ್ಷಿತ ಪ್ರಮಾಣದಲ್ಲಿ ಕೇಂದ್ರದ ಯೋಜನೆಗಳು ಕ್ಷೇತ್ರಕ್ಕೆ ಬಂದಿಲ್ಲ

ರಾಧಾಕೃಷ್ಣ ದೊಡ್ಡಮನಿ ಪ್ಲಸ್-ಮೈನಸ್

1. ಎಐಸಿಸಿ ಅಧ್ಯಕ್ಷ ಡಾ.ಖರ್ಗೆ ಚರಿಷ್ಮಾ

2. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು

3. ಸಚಿವರಿಬ್ಬರ ಸಾಥ್, ಪ್ರಬುದ್ಧ ನಿಲುವು

4. ನೇರ ಚುನಾವಣೆ ಎದುರಿಸಿದ ಅನುಭವ ಇಲ್ಲ

5. ಸುಲಭವಾಗಿ ಜನರ ಕೈಗೆ ಸಿಗಲ್ಲ ಎಂಬ ಅಪವಾದ?

ಜನಪರ ಕೆಲಸಗಳ ಮೂಲಕ ಪ್ರಧಾನಿ ಮೋದಿ ದೇಶದ ಜನರ ಗಮನಸೆಳೆದಿದ್ದಾರೆ. ಹೀಗಾಗಿ ಜನ ಈ ಬಾರಿಯೂ ಬಿಜೆಪಿ ಕೈಹಿಡಿಯಲಿದ್ದಾರೆ. ಕಲಬುರಗಿ ಕ್ಷೇತ್ರದಲ್ಲೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕಮಲ ಬೆಂಬಲಿಸಲು ಜನ ನಿರ್ಧರಿಸಿಯಾಗಿದೆ. ಮತ್ತೊಮ್ಮೆ ಬಿಜೆಪಿ ಗೆಲ್ಲುವುದರಲ್ಲಿ ಅನುಮಾನವಿಲ್ಲ.| ಡಾ.ಉಮೇಶ ಜಾಧವ್,  ಬಿಜೆಪಿ ಅಭ್ಯರ್ಥಿಸ್ವಾಮಿ ರಮಾನಂದ ತೀರ್ಥರು, ಮಹಾದೇವಪ್ಪ ರಾಂಪುರೆ, ಎನ್. ಧರ್ಮಸಿಂಗ್, ಬಿ.ಜಿ.ಜವಳಿ, ಖಮರುಲ್ ಇಸ್ಲಾಂ, ಡಾ.ಮಲ್ಲಿಕಾರ್ಜುನ ಖರ್ಗೆ ಅವರಂತಹ ಧೀಮಂತ ನಾಯಕರು ಸಂಸದರಾಗಿದ್ದ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಮಾಡಿದ್ದು ನನ್ನ ಪುಣ್ಯ. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮತಯಾಚನೆ ಮಾಡುತ್ತಿದ್ದೇವೆ.| ರಾಧಾಕೃಷ್ಣ ದೊಡ್ಡಮನಿ,  ಕಾಂಗ್ರೆಸ್ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net