

ಮಂಜುನಾಥ ಅಯ್ಯಸ್ವಾಮಿ ಹಂಪಿ
ಹಂಪಿ ಉತ್ಸವದ ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನವಾದ ಶನಿವಾರ ಸಂಜೆ ಉತ್ತಮ ಸ್ಪಂದನೆ ಇತ್ತು.
ಇದನ್ನೂ ಓದಿ: ಹಂಪಿ ಉತ್ಸವಕ್ಕೆ ಮೊದಲ ದಿನ ಕಾಣದ ಜನಸ್ತೋಮ
ಉದ್ಘಾಟನಾ ಸಮಾರಂಭ ನಡೆದ ಹಂಪಿ ಗಾಯತ್ರಿ ಪೀಠದ ಮೈದಾನದ ಎಂ.ಪಿ.ಪ್ರಕಾಶ ಪ್ರಧಾನ ವೇದಿಕೆ ಸೇರಿದಂತೆ ಇತರೆ ಮೂರು ವೇದಿಕೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಶುಕ್ರವಾರ ಜನರೇ ಇರಲಿಲ್ಲ. ವೇದಿಕೆ ಎದುರು ಹಾಕಿದ್ದ ಬಹುತೇಕ ಕುರ್ಚಿಗಳು ಖಾಲಿ ಇದ್ದವು. ಕಲಾವಿದರು, ಪೊಲೀಸರ ಸಂಖ್ಯೆಯೇ ಹೆಚ್ಚಿತ್ತು. ಆದರೆ, ಎರಡನೇ ದಿನ ಜಿಲ್ಲಾಡಳಿತವು ಹೊಸಪೇಟೆ ನಗರದಿಂದ ಬಂದು ಹೋಗಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಹಂಪಿ ಪರಿಸರದೊಳಗೆ ಸಾರ್ವಜನಿಕರ ಎಲ್ಲಾ ರೀತಿಯ ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಿಕೊಟ್ಟಿತು. ಇನ್ನೊಂದೆಡೆ ಶನಿವಾರ ಇದ್ದದ್ದರಿಂದ ಹೆಚ್ಚಿನವರು ಮಧ್ಯಾಹ್ನದವರೆಗೆ ಕೆಲಸ ಮುಗಿಸಿಕೊಂಡು ಸಂಜೆ ಹಂಪಿ ಕಡೆ ಮುಖ ಮಾಡಿದರು.
ಬೆಳಿಗ್ಗೆಯಿಂದ ಸಂಜೆಯ ವರೆಗೆ ಬಿರು ಬಿಸಿಲು ಇದ್ದದ್ದರಿಂದ ಹೆಚ್ಚಾಗಿ ಜನ ಕಂಡು ಬರಲಿಲ್ಲ. ಸಂಜೆ ಆಗುತ್ತಿದ್ದಂತೆ ಜನರು ಗುಂಪುಗುಂಪಾಗಿ ಬಂದರು. ಸೂರ್ಯಾಸ್ತದ ನಂತರ ಎಲ್ಲ ವೇದಿಕೆಗಳಲ್ಲಿ ನಿಧಾನವಾಗಿ ಜನ ಬರಲು ಆರಂಭಿಸಿದರು. ರಾತ್ರಿಯಾಗುತ್ತಿದ್ದಂತೆ ಹೆಚ್ಚಾಗುತ್ತಲೇ ಹೋಯಿತು. ಎಲ್ಲಾ ವೇದಿಕೆಗಳೆದುರು ಜನ ಸೇರುತ್ತಿರುವುದನ್ನು ನೋಡಿ ಅಧಿಕಾರಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಹಂಪಿ ಉತ್ಸವಕ್ಕೆ ಜನಸಾಗರವೇ ಹರಿದುಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಂಪಿಯಲ್ಲಿ ಭಾರೀ ಬಿಗಿ ಭದ್ರತೆ ಕೈಗೊಂಡಿತು. ಉತ್ಸವದ ವೀಕ್ಷಣೆಗೆ ರಾಜ್ಯ ಸೇರಿದಂತೆ ದೇಶ- ವಿದೇಶಗಳಿಂದ ಆಗಮಿಸಿದ್ದ ಜನಸ್ತೋಮ ಹಂಪಿ ನೆಲದಲ್ಲಿ ಅರಳಿ ನಿಂತ ನಾಡಿನ ಕಲಾ ವೈಭವವನ್ನು ಕಂಡು ಖುಷಿಪಟ್ಟರು.
ಹಂಪಿಯ ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ ಸೇರಿದಂತೆ ಎಲ್ಲೆಡೆ ಜನರು ಸೇರಿದ್ದರು. ಹಂಪಿಯಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಪ್ರಧಾನ ವೇದಿಕೆಯಲ್ಲೂ ಜನಸಾಗರ ಹರಿದು ಬಂದ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲೆಡೆ ತೆರಳಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಎಸ್ಪಿ ಶ್ರೀಹರಿಬಾಬು ಸ್ವತಃ ಪ್ರಧಾನ ವೇದಿಕೆಗೆ ಆಗಮಿಸಿ ಭದ್ರತೆ ಪರಿಶೀಲಿಸಿದರು.
ಭದ್ರತೆ ಹೆಚ್ಚಳ
ಹಂಪಿಯಲ್ಲಿ ತಡರಾತ್ರಿ ವರೆಗೆ ನಡೆದ ಸಾಂಸ್ಕೃತಿಕ ಹಾಗೂ ರಸಮಂಜರಿ ಕಾರ್ಯಕ್ರಮಗಳನ್ನು ವೀಕ್ಷಿಸಿದ ಜನರು ಹಂಪಿ ಉತ್ಸವ ಜನೋತ್ಸವ ಎಂಬುದನ್ನು ಸಾಬೀತುಪಡಿಸಿದರು. ಹಂಪಿ ಉತ್ಸವದಲ್ಲಿ 10 ಲಕ್ಷ ಜನರು ಸೇರುವ ನಿರೀಕ್ಷೆ ಹೊಂದಿದ್ದ ಜಿಲ್ಲಾಡಳಿತಕ್ಕೆ ಎರಡು ದಿನಗಳಲ್ಲೇ ಉತ್ತಮ ಸ್ಪಂದನೆ ದೊರೆತಿದೆ. ಲಕ್ಷಾಂತರ ಜನರು ಹಂಪಿಯತ್ತ ಧಾವಿಸುತ್ತಿದ್ದಾರೆ. ಹಾಗಾಗಿ ಪೊಲೀಸ್ ಭದ್ರತೆಗೆ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಿಂದಲೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ.
ಉತ್ತಮ ಪಾರ್ಕಿಂಗ್
ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯ ಮೇಲೆ ಕಣ್ಣಾಡಿಸಿದ ಪ್ರೇಕ್ಷಕರು, ಹಂಪಿ ಉತ್ಸವದಲ್ಲಿ ಯಾವ ಕಲಾವಿದರು ಯಾವ ವೇದಿಕೆಯಲ್ಲಿ ಇರುತ್ತಾರೆ. ಅತ್ತ ಕಡೆ ಧಾವಿಸಿದರು. ಅದರಲ್ಲೂ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ ಆಲಿಸಲು ಕೂಡ ಪ್ರೇಕ್ಷಕರು ತಮಗೆ ಇಷ್ಟಾನು ಇಷ್ಟ ವೇದಿಕೆಗಳತ್ತ ಧಾವಿಸಿದ್ದು ಕಂಡುಬಂದಿತು.
ಅದರಲ್ಲೂ ಪ್ರಧಾನ ವೇದಿಕೆಯತ್ತಲೇ ಯುವಕರ ಗುಂಪು ತಂಡೋಪತಂಡವಾಗಿ ಆಗಮಿಸಿ ಉತ್ಸವ ಕಳೆಗಟ್ಟಿದ್ದರು. ಹಂಪಿಯಿಂದ ಕಮಲಾಪುರ ಮಾರ್ಗ ಹಾಗೂ ಹೊಸಪೇಟೆಯಿಂದ ಕಡ್ಡಿರಾಂಪುರ ಮಾರ್ಗ, ಹಂಪಿಯಿಂದ ಕಡ್ಡಿರಾಂಪುರ ಮಾರ್ಗದಲ್ಲೂ ಜಾಮ್ ಉಂಟಾಗಿತ್ತು. ಹಂಪಿ ಉತ್ಸವದಲ್ಲಿ ಹೆಜ್ಜೆ ಹೆಜ್ಜೆಗೂ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದ ಜಿಲ್ಲಾಡಳಿತಕ್ಕೆ ಜನರು ಪ್ರಶಂಸಿಸಿದ್ದಾರೆ. ಅದರಲ್ಲೂ 100 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತದ ಕಾರ್ಯಕ್ಕೆ ಜನರು ಶಹಬ್ಬಾಸ್ ಗಿರಿ ನೀಡಿದರು.