ಹಂಪಿ ಉತ್ಸವಕ್ಕೆ ಮೊದಲ ದಿನ ಕಾಣದ ಜನಸ್ತೋಮ

Hampi Utsav first day unseen crowd
ಎಂಪಿ ಪ್ರಕಾಶ ವೇದಿಕೆಯಲ್ಲಿ ಮೊದಲ ದಿನ ಖಾಲಿ ಕುರ್ಚಿಗಳು ಕಂಡುಬಂದವು.
Published on

ಮಂಜುನಾಥ ಅಯ್ಯಸ್ವಾಮಿ ಹಂಪಿ

ಪ್ರತಿ ಬಾರಿ ಮೂರು ದಿನಗಳ ಕಾಲ ನಡೆಯುವ ಹಂಪಿ ಉತ್ಸವದಲ್ಲಿ ಈ ಬಾರಿ ಮೊದಲ ದಿನ ಜನರು ಅಷ್ಟೊಂದಾಗಿ ಕಾಣಿಸಲಿಲ್ಲ.

ಹಂಪಿ ವಿಶ್ವ ಪಾರಂಪರಿಕ ತಾಣವಾಗಿದ್ದು, ಅಂತಾರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹಂಪಿ ಉತ್ಸವದ ಮೂಲಕ ಅದರ ಹಿರಿಮೆಯನ್ನು ಇನ್ನಷ್ಟು ಪ್ರಚಾರಗೊಳಿಸುವುದು ಇದರ ಮುಖ್ಯ ಉದ್ದೇಶ. ಹಂಪಿಯ ಎಂ.ಪಿ.ಪ್ರಕಾಶ್ ಪ್ರಧಾನ ವೇದಿಕೆಯಲ್ಲಿ ಮಾತ್ರವಲ್ಲದೇ ಉಳಿದ ಮೂರು ವೇದಿಕೆಗಳಲ್ಲಿ ಕಾರ್ಯಕ್ರಮ ಆರಂಭವಾದರೂ ಕಳೆದ ಬಾರು ಉತ್ಸವಕ್ಕಿಂತ ಕಡಿಮೆ ಜನರಿದ್ದರು. ಎಲ್ಲ ವೇದಿಕೆಗಳ ಬಳಿ ಜನರಿಗಿಂತ ಕಲಾವಿದರು, ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಫಲಪುಷ್ಪ ಪ್ರದರ್ಶನ, ಜಲಕ್ರೀಡೆ ಸೇರಿದಂತೆ ಇತರೆಡೆಯೂ ಪ್ರೇಕ್ಷಕರ ಕೊರತೆ ಕಂಡುಬಂತು. ಎಲ್ಲ ಕಾರ್ಯಕ್ರಮ, ಸ್ಪರ್ಧೆಗಳು ಕಲಾವಿದರು, ಕ್ರೀಡಾಳುಗಳಿಗೆ ಸೀಮಿತವಾಗಿತ್ತು.

ಬೆಳಗ್ಗೆಯಿಂದಲೂ ಹಂಪಿಯಲ್ಲಿ ಸಂಭ್ರಮ ಸ್ವಲ್ಪ ಮಂಕಾಗಿತ್ತು. ಹೊಸಪೇಟೆಯಿಂದ ಹಂಪಿಗೆ ಸಂಪರ್ಕಿಸುವ ರಸ್ತೆ, ಕಡ್ಡಿರಾಂಪುರ ಕ್ರಾಸ್‌ನಿಂದ ಹಂಪಿಯೊಳಗೆ ಬರುವ ರಸ್ತೆಗಳೆಲ್ಲ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಮಾರ್ಗದುದ್ದಕ್ಕೂ ಪೊಲೀಸರು, ಅಧಿಕಾರಿಗಳು ಹಾಗೂ ಕಲಾವಿದರ ವಾಹನಗಳು ಹೆಚ್ಚು ಕಂಡುಬಂದವು. ಕಡ್ಡಿರಾಂಪುರ ಕ್ರಾಸ್‌ನಿಂದ ಹಂಪಿಯೊಳಗೆ ಬರಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ಹಿಂದೆ ಕಡ್ಡಿರಾಂಪುರ ಕಮಾನಿನಿಂದ ಒಳಭಾಗದಿಂದ ಬಸ್ ವ್ಯವಸ್ಥೆ ಇರುತ್ತಿರಲಿಲ್ಲ. ಈ ಬಾರಿ ಹಂಪಿಯೊಳಗೆ 100 ಎಕರೆಗೂ ಅಧಿಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆದರೂ ಇತ್ತ ಹೇಳಿಕೊಳ್ಳುವಷ್ಟು ಜನರು ಸುಳಿಯಲಿಲ್ಲ.

ಈ ಹಿಂದೆ ಹಂಪಿ ಉತ್ಸವಕ್ಕೆ ತಿಂಗಳಿಗಿಂತ ಮುಂಚೆಯೇ ಸಿದ್ಧತೆ ನಡೆಸಲಾಗುತ್ತಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಹಂಪಿಯಲ್ಲೇ ನಾಲ್ಕೈದು ಸಭೆಗಳನ್ನು ನಡೆಸುತ್ತಿದ್ದರು. ಅದರೊಟ್ಟಿಗೆ ಸಿದ್ಧತೆ, ಪ್ರಚಾರ ಕಾರ್ಯವೂ ಆರಂಭಿಸಲಾಗುತ್ತಿತ್ತು. ಪ್ರತಿ ತಾಲೂಕುಗಳಿಗೆ ಸಚಿವರು ಭೇಟಿ ಕೊಟ್ಟು ಜನರನ್ನು ಆಹ್ವಾನಿಸುತ್ತಿದ್ದರು. ಆದರೆ, ಈ ಸಲ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಿಲ್ಲೆಯತ್ತ ಸುಳಿಯಲೇ ಇಲ್ಲ. ಉತ್ಸವಕ್ಕೆ ಎರಡು ದಿನಗಳಿರುವಾಗ ಬಂದರು.

ಹಂಪಿ, ಹೊಸಪೇಟೆ ಬಿಟ್ಟರೆ ಬೇರೆಲ್ಲೂ ಹೋಗಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಜಿಲ್ಲಾಡಳಿತದಿಂದ ವ್ಯಾಪಕ ಪ್ರಚಾರ ನಡೆದರೂ ಪ್ರಯೋಜನ ಆಗಲಿಲ್ಲ. ಈ ಜಿಲ್ಲೆಯ ಶಾಸಕರು ಹೆಚ್ಚಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿಲ್ಲ. ಇನ್ನೂ ಹೇಳಬೇಕು ಎಂದರೆ ಮಾ.3ರಿಂದ ಪಿಯುಸಿ ಪರೀಕ್ಷೆ, ಮಾ.21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ ಆಗುತ್ತಿದೆ. ಇದರಿಂದಾಗಿ ಪಾಲಕರು ಮತ್ತು ವಿದ್ಯಾರ್ಥಿಗಳು ಇತ್ತ ಸುಳಿಯಲಿಲ್ಲ. ಇನ್ನೂ ಕಳೆದ ಬಾರಿಗಿಂತ ಈ ಸಲ ಒಂದು ತಿಂಗಳು ತಡವಾಗಿ ಉತ್ಸವ ನಿಗದಿ ಮಾಡಿದರು. ಈ ಭಾಗದಲ್ಲಿ ಹಗಲೊತ್ತಿನಲ್ಲಿ ಬಿಸಲಿನ ತಾಪ ಹೆಚ್ಚು.

ಬರಲಿಲ್ಲ ಸರ್ಕಾರದ ಮುಖ್ಯಸ್ಥರು

ಹಂಪಿಯ ಎಂ.ಪಿ.ಪ್ರಕಾಶ್ ಪ್ರಧಾನ ವೇದಿಕೆಯಲ್ಲಿ ಉತ್ಸವಕ್ಕೆ ಚಾಲನೆ ನೀಡಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲುನೋವಿನಿಂದ ಉದ್ಘಾಟನೆ ಕಾರ್ಯಕ್ರಮಕ್ಕೆ ಬರಲಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಉತ್ಸವಕ್ಕೆ ಬರಲಿಲ್ಲ. ಅತಿ ಗಣ್ಯರು, ಗಣ್ಯರು ಹಾಗೂ ಸಾರ್ವಜನಿಕರಿಗೆ ಹಾಕಿದ್ದ ಬಹುತೇಕ ಕುರ್ಚಿಗಳೆಲ್ಲ ಖಾಲಿ ಇದ್ದವು. ಜಿಲ್ಲಾ ಉತ್ಸವಕ್ಕೆ ನೀಡಿದ ಪ್ರಾಮುಖ್ಯತೆ ಹಂಪಿ ಉತ್ಸವ ಯಶಸ್ವಿಗೆ ಮನಸ್ಸು ಮಾಡಲಿಲ್ಲ. ಮೈಸೂರು ದಸರಾಗೆ ನೀಡುವ ಪ್ರಾಮುಖ್ಯತೆ ಹಂಪಿ ಉತ್ಸವಕ್ಕೆ ನೀಡಲಿ ಎಂದು ಸಾರ್ವಜನಿಕರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net