

ವಿ.ಕೆ. ರವೀಂದ್ರ ಹಂಪಿ
‘ಹೋ ಅಣ್ಣ, ಅಕ್ಕ, ಅಮ್ಮ, ಅಜ್ಜಿ, ಗೆಳೆಯ, ಪುಟ್ಟ ಮಗು.. ಹುಷಾರಾಗಿ ಹೋಗಿ ಬನ್ನಿ.. ಯುಗ ಯುಗಗಳು ಕಳೆದರೂ ನಿಮಗಾಗಿ ನಾವಿಲ್ಲಿ ಕಾದಿರುವೆವು. ಬರುವ ವರ್ಷ ನೀವು ಉತ್ಸವಕ್ಕೆ ಮರಳಿ ಬಂದಾಗ ಮತ್ತೆ ನಮ್ಮ ಗತವೈಭವದ ಕಥೆ ಹೇಳುವೆವು.
ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಸ್ಮಾರಕಗಳ ಅಂತರ್ದನಿ. ತಮ್ಮನ್ನು ಸೃಷ್ಟಿಸುವಾಗ ಉಳಿಪೆಟ್ಟು ನೀಡಿದರೆಂದು ಶಿಲ್ಪಿಗಳನ್ನು, ಕೆತ್ತಿಸಿದ ಮಂತ್ರಿ, ರಾಜರನ್ನು ಸ್ಮಾರಕಗಳು ಬಹುಶಃ ಶಪಿಸಿರಬಹದು. ಆದರೆ, ಸೃಷ್ಟಿಸಿದವರು ಅಳಿದು ನೂರಾರು ವರ್ಷಗಳಾದರೂ ಅವರ ನಿರ್ಮಾಣ, ಕಲೆ, ವಾಸ್ತುಶಿಲ್ಪ, ಧಾರ್ಮಿಕತೆ, ವಿಜ್ಞಾನ ಇಂದಿಗೂ ಪ್ರಸ್ತುತ. ಪರಿಣಾಮ ರಾಜರಿಗೆ ಸಿಗಬೇಕಾದ ಜನರ ಪ್ರೀತಿ, ಕಾಳಜಿ, ಪೂಜ್ಯನೀಯ ಭಾವನೆಗೆ ಹಂಪಿ ಸ್ಮಾರಕಗಳು ಭಾಜನವಾಗುತ್ತಿವೆ.
ಇದನ್ನೂ ಓದಿ: ಹಂಪಿ ಉತ್ಸವ ವಿರೂಪಾಕ್ಷೇಶ್ವರ ಆಶೀರ್ವಾದದಿಂದ ಯಶಸ್ಸು
ಹಂಪಿಯಲ್ಲಿಯೇ ಹುಟ್ಟಿ, ಬೆಳೆದವರೂ ಒಳಗೊಂಡು ನಿತ್ಯ ಭೇಟಿ ನೀಡುವ ಲಕ್ಷಾಂತರ ಜನರಿಗೆ ಹಂಪಿ ಎಂಬುದು ನಿತ್ಯ ಹೊಸತು. ಹಲವು ಕೌತುಕಗಳ ಆಗರ. ಮನೋಲ್ಲಾಸದ ಬುಗ್ಗೆ. ಕವಿ, ಸಾಹಿತಿಗಳಿಗೆ ಬರಹದ ಪ್ರೇರಣೆ. ವಿದೇಶಿಗರಿಗೆ ಭಾರತ, ಕರ್ನಾಟಕದ ಐತಿಹ್ಯ, ಸ್ವಂತಿಕೆ ಬಿಂಬಿಸುವ ಸಾಕ್ಷಿ. ಪುಟ್ಟ ಮಕ್ಕಳು, ಯುವಕರಿಗೆ ಮನರಂಜನೆಯ ಜಾತ್ರೆ. ಇತಿಹಾಸಕಾರರು, ಸಂಶೊಧಕರಿಗೆ ಹೊಸ ಒಳಹುಗಳ ವಿಷಯ ವಸ್ತು. ದೂರದೂರಿನವರಿಗೆ ಉತ್ತಮ ಪ್ರವಾಸ.
ಈ ಅನುಭವ ಮೂರು ದಿನ ಹಂಪಿ ನೋಡಲೆಂದು ಬಂದ ಜನರಿಗಾದ ಹೇಳಲಾಗದಂಥ ಅನುಭವ. ಗತಕಾಲದ ಮೆಲುಕು ಹಾಕಲು ದೊರೆತ ಅವಕಾಶ. ರೋಮ್ ಸಾಮ್ರಾಜ್ಯಕ್ಕೆ ಸಮನಾಗಿ ಗತವೈಭವ ಮೆರೆದ ವಿಜಯನಗರ ಸಾಮ್ರಾಜ್ಯದ ಪ್ರತಿಬಿಂಬದಂತಿರುವ ಹಂಪಿ ಉತ್ಸವ ಅಕ್ಷರಶಃ ಮೂರು ದಿನಗಳ ಕಾಲ ಜನತೆಗೆ ಕಲೆ, ಸಂಸ್ಕೃತಿ, ನಾಡು-ನುಡಿ ಅಸ್ಮಿತೆ ಬಿಂಬಿಸುವ ಕಾರ್ಯಕ್ರಮಗಳ ಸವಿ ಉಣಬಡಿಸಿತು.
ಪ್ರತಿ ವರ್ಷದಂತೆ ಉತ್ಸವ ಎನ್ನುವ ಜನತೆಗೆ ಈ ಬಾರಿ ಐದು ವೇದಿಕೆಗಳಲ್ಲಿ ಸ್ಥಳೀಯ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ತಮ್ಮ ಕಲೆಯ ರಸದೌತಣ ಬಡಿಸಿದರು. ಕೇವಲ ರಾಜಾಡಳಿತಕ್ಕೆ ಹೆಸರಾಗಿರದ ಹಂಪಿ, ಕಲೆ, ಸಂಸ್ಕೃತಿ, ದೇಶಾಭಿಮಾನ, ಭಾಷಾಭಿಮಾನ, ಧರ್ಮ, ಸಮಾನತೆ, ಮಾದರಿ ಆಡಳಿತಕ್ಕೆ ಮಾದರಿ. ಅದನ್ನು ಬಿಂಬಿಸುವಂತೆ ಮೂರು ದಿನ ಉತ್ಸವ ಕಂಡುಬಂತು. ದೂರದೂರಿನಿಂದ ಬಂದ ಜನರು ಹಂಪಿಯ ರಸ್ತೆ, ಸ್ಮಾರಕ, ಕಲ್ಲು ಬಂಡೆಗಳು, ಗಿಡ, ಮರಗಳ ನೆರಳಲ್ಲಿ ನಿಂತು ಉತ್ಸವ ಕಣ್ತುಂಬಿಕೊಂಡರು.
ತಮ್ಮನ್ನು ಕಾಣಲು ಬಂದ ಜನರನ್ನು ಸ್ಮಾರಕಗಳೂ ಅಷ್ಟೇ ಆದರದಿಂದ ಬರಮಾಡಿಕೊಂಡವು. ಪ್ರೀತಿಯಿಂದ ಒಡಲು ನೀಡಿದವು. ಮರಗಳು ಬಿಸಿಲಿಗೆ ದಣಿದವರಿಗೆ ನೆರಳಾದವು. ಬಂಡೆಗಲ್ಲುಗಳು ಹೆಗಲಾದವು. ದೀಪಾಲಂಕಾರದಿಂದ ಇರುಳಲು ಪ್ರಜ್ವಲಿಸಿದ ಹಂಪಿ ಮೂರು ದಿನಗಳ ಮಟ್ಟಿಗೆ ಎಂದೂ ಮಲಗದ ಸಾಮ್ರಾಜ್ಯದಂತೆ ಗೋಚರಿಸಿತು. ಹಗಲಿರುಳು ಜನರಿಗೆ ತಮ್ಮ ಕಥೆ ಹೇಳಿದ ಸ್ಮಾರಕಗಳು ದಣಿದಂತೆ ಕಂಡವು. ಮೌನವಾಗಿಯೇ ತಮ್ಮತನವನ್ನು ಪ್ರತಿಬಿಂಬಿಸಿದವು. ಮಾತಿಗಿಂತ ಕೃತಿ ಮೇಲು ಎಂಬಂತೆ, ಅಳಿದುಳಿದ ಸ್ಮಾರಕಗಳೇ ಇಷ್ಟೊಂದು ಐತಿಹಾಸಿಕ ಹಿನ್ನೆಲೆ ಮುಗುಚಿಟ್ಟುಕೊಂಡಿದ್ದು, ಅಳಿದು ಹೋದವುಗಳ ಆರ್ತನಾದ ಏನಿರಬಹುದೆಂಬ ಪ್ರಶ್ನೆ ಪ್ರೇಕ್ಷಕನ ಮನದಲ್ಲಿ ಮೂಡಿಸುವಂತೆ ಉತ್ಸವ ಮೂಡಿಬಂತು.
ಹಂಪಿ ಇತಿಹಾಸ ಬಿಂಬಿಸುವ ಅಳಿದುಳಿದ ಸ್ಮಾರಕಗಳಿರುವುದರಿಂದಲೇ ಕಾಲಗರ್ಭದಲಿ ಹುದುಗಿರುವ ಇತಿಹಾಸ ನಮಗೆ ಅರಿಯಲು ಸಹಾಯವಾಗುತ್ತಿದೆ. ಇದೇ ಕಾರಣಕ್ಕೆ ಯುನೆಸ್ಕೋ ಸ್ಮಾರಕಗಳನ್ನು ರಕ್ಷಿಸುತ್ತಿದೆ. ಹಂಪಿಯಲ್ಲಿ 150-200 ಸ್ಮಾರಕಗಳಿದ್ದರೆ, ರಾಜ್ಯದಲ್ಲಿ ಆಡಳಿತ ನಡೆಸಿದ ರಾಜಮನೆತನಗಳು, ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಸಂಸ್ಕೃತಿ, ಜೀವನ ವಿಧಾನ, ತಂತ್ರಜ್ಞಾನದ ಇತಿಹಾಸ ಬಿಂಬಿಸುವ 25 ಸಾವಿರಕ್ಕೂ ಹೆಚ್ಚು ಸ್ಮಾರಕಗಳಿವೆ.
ಅವುಗಳನ್ನು ರಕ್ಷಿಸಿದಲ್ಲಿ ಇನ್ನು ಹತ್ತು ಹಲವು ವಿಜಯನಗರ ಸಾಮ್ರಾಜ್ಯದಂಥ ಇತಿಹಾಸ ಹೆಕ್ಕಿ ತೆಗೆಯಬಹುದು. ಈ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ನಡೆಸಲಿ. ನಮ್ಮಂತೆ ಇತರ ಸ್ಮಾರಕಗಳ ಗತ ವೈಭವ ಉತ್ಸವ, ಸಾಂಸ್ಕೃತಿಕ ಹಬ್ಬಗಳ ಮೂಲಕ ನಾಡು, ದೇಶದ ಗಡಿಯಾಚೆ ಪಸರಿಸಲಿ ಎಂಬುದು ಹಂಪಿ ಸ್ಮಾರಕಗಳ ಮತ್ತೊಂದು ಆಶಯವಾಗಿದೆ.
ಬೇಸಿಗೆ ಪ್ರಖರತೆ ಹೆಚ್ಚುತ್ತಿದ್ದು, ದಿನ ಕಳೆದಂತೆ ರವಿ ಉಗ್ರರೂಪ ತಾಳುತ್ತಿದ್ದಾನೆ. ಆದರೆ, ಹಂಪಿಗೆ ಆಗಮಿಸಿದ ಜನತೆ ಮೂರು ದಿನಗಳ ಕಾಲ ಬಿಸಿಲ ಧಗೆ ಲೆಕ್ಕಿಸದೆ ಓಡಾಡಿದರು. ಮಕ್ಕಳು, ವೃದ್ಧರು, ಮಹಿಳೆಯರು ದಣಿವಾರಿಸಿಕೊಳ್ಳಲು ಮರ-ಗಿಡಗಳು, ಸ್ಮಾರಕಗಳು, ಬಂಡೆಗಲ್ಲುಗಳ ನೆರಳಿನಡಿ ತಂಗಿದ್ದು ಕಂಡುಬಂತು.
ಕೊನೆಯ ದಿನ ಭಾನುವಾರವಿದ್ದ ಕಾರಣ ಭಾಸ್ಕರನ ಪ್ರಖರತೆ ಕಡಿಮೆಯಾಗುತ್ತಲೇ ಜನ ದಟ್ಟಣೆ ಕಂಡುಬಂತು. ಶಾಲಾ ಮಕ್ಕಳು, ಯುವಕ-ಯುವತಿಯರು, ಪುರುಷ, ಮಹಿಳೆಯರು, ವೃದ್ಧರು, ನೌಕರರು, ಹೊರ್ ಜಿಲ್ಲೆಯ ಜನತೆ ಹೆಚ್ಚಾಗಿ ಕಾಣಿಸಿಕೊಂಡರು.