ಮುಂದಿನ ಪೀಳಿಗೆಗೆ ಸಂಸ್ಕೃತಿ- ಕಲೆ ತಲುಪಲಿ

Hampi Utsav Shivaraj Tangadagi Innagaration
ಹಂಪಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರು ದಿನಗಳ ಹಂಪಿ ಉತ್ಸವ ವೇದಿಕೆಯಲ್ಲಿ ಸಚಿವರಾದ ಜಮೀರ್ ಅಹಮದ್ ಖಾನ್, ಶಿವರಾಜ ತಂಗಡಗಿ, ಶಾಸಕರಾದ ಎಚ್.ಆರ್.ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ, ಲತಾ ಮಲ್ಲಿಕಾರ್ಜುನ, ಡಿಸಿ ಎಂ.ಎಸ್.ದಿವಾಕರ ಇತರರಿದ್ದರು.
Published on

ಹಂಪಿ: ನಮ್ಮ ಇತಿಹಾಸ, ರಾಜಾಡಳಿತ, ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವ ನಿಟ್ಟಿನಲ್ಲಿ ಹಂಪಿ ಉತ್ಸವ ಆಯೋಜಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಹಂಪಿ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಮಾತನಾಡಿ, ಹಂಪಿ ಉತ್ಸವ ಆಚರಣೆಯನ್ನು ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ ಜಾರಿಗೆ ತಂದರು. 1970 ರಲ್ಲಿ ಸಣ್ಣದಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಯಿತು. 1987ರಲ್ಲಿ ಸಚಿವರಾಗಿದ್ದ ಎಂ.ಪಿ.ಪ್ರಕಾಶ ರಾಜ್ಯಮಟ್ಟದ ಹಂಪಿ ಉತ್ಸವ ಆಯೋಜಿಸಿದ್ದರು. ಹಂಪಿ ಬಳಿಕ ಆನೆಗೊಂದಿ, ಚಾಲುಕ್ಯ ಉತ್ಸವ ಆರಂಭವಾದವು. ನಾನು ಸಚಿವನಾದ ಮೇಲೆ ಕನಕಗಿರಿ ಉತ್ಸವ ಆರಂಭಿಸಿದೆ ಎಂದರು.

ಈ ಹಿಂದೆ ಕೆಲವರು ತಾವೇ ಕೃಷ್ಣದೇವರಾಯನ ಮರುಜನ್ಮ ಎಂದು ಹೇಳಿಕೊಳ್ಳುತ್ತಿದ್ದರು. ಸಚಿವ ಜಮೀರ್ ಅಹ್ಮದ್ ಖಾನ್ ಅಂಥದ್ದೆಲ್ಲ ಹೇಳಿಕೊಳ್ಳುವುದಿಲ್ಲ. ಬದಲಿಗೆ ಅಚ್ಚುಕಟ್ಟಾಗಿ ಉತ್ಸವ ಆಯೋಜಿಸುತ್ತಿದ್ದಾರೆ. ಎಂ.ಪಿ.ಪ್ರಕಾಶ ಅವರು ಕಲೆ, ಸಂಸ್ಕೃತಿ ಬಗ್ಗೆ ಅಪಾರ ಗೌರವ ಹೊಂದಿದ್ದರು. ನಾವು ಹಂಪಿ, ಆನೆಗೊಂದಿ, ಕನಕಗಿರಿ ಉತ್ಸವಗಳನ್ನು ಮುನ್ನಡೆಸಿಕೊಂಡು ಹೋಗಬೇಕು. ಕಲೆ, ಸಂಸ್ಕೃತಿ ಹಾಗೂ ಬಡವರ ಬಗ್ಗೆ ಸಿಎಂ ಸಿದ್ದರಾಮಯ್ಯ ಅಪಾರ ಕಾಳಜಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅಚ್ಚುಕಟ್ಟಾಗಿ ಉತ್ಸವ ಆಯೋಜಿಸಲಾಗಿದೆ ಎಂದರು.

ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಕಳೆದೆರೆಡು ವರ್ಷದಿಂದ ಸಚಿವ ಜಮೀರ್ ಅಹ್ಮದ್ ಖಾನ್ ಮುತವರ್ಜಿ ವಹಿಸಿ ಉತ್ಸವ ಆಯೋಜಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಉತ್ಸವ ಅದ್ದೂರಿಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ, ಸಚಿವರಾದ ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ್ ಅನುದಾನ ಒದಗಿಸಿ ಸಹಕರಿಸಿದ್ದಾರೆ. ಎಲ್ಲ ಅಧಿಕಾರಿಗಳು ಶ್ರಮವಹಿಸಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.

Hampi Utsav 2025 Cultural Programmes
ಕಾಂತಾರ ಚಿತ್ರದ ದೈವದ ಹಾಡಿಗೆ ಉತ್ಸವದಲ್ಲಿ ಹೆಜ್ಜೆ ಹಾಕಿದ ಕಲಾವಿದರು. ಗಮನ ಸೆಳೆದ ವಿಜಯನಗರ ಅರಸರ ಇತಿಹಾಸ ಬಿಂಬಿಸುವ ದೃಶ್ಯಕಾವ್ಯ ಪ್ರದರ್ಶನ.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಕನ್ನಡ ತಾಯಿ ಭುವನೇಶ್ವರಿಗೆ ಪುಷ್ಪಾರ್ಪಣೆ ಮಾಡಿ, ನಗಾರಿ ಬಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ, ವಿದ್ಯಾರಣ್ಯಪೀಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ನೇಮಿರಾಜ ನಾಯ್ಕ, ಎನ್.ಟಿ.ಶ್ರೀನಿವಾಸ, ಕೃಷ್ಣ ನಾಯ್ಕ, ಲತಾ ಮಲ್ಲಿಕಾರ್ಜುನ, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಆನೆಗೊಂದಿ ರಾಜವಂಶಸ್ಥ ಶ್ರೀಕೃಷ್ಣದೆವರಾಯ, ಡಿಸಿ ಎಂ.ಎಸ್.ದಿವಾಕರ, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಎಸ್ಪಿ ಬಿ.ಎಲ್.ಶ್ರೀಹರಿಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net