ಹಂಪಸಂದ್ರ ಗ್ರಾಮದ ಪ್ರತಿಮೆ, ನಾಮಫಲಕ ವಿವಾದಕ್ಕೆ ತೆರೆ

FotoJet (3)
Published on

ಎರಡೂ ಸಮುದಾಯಗಳ ನಡುವೆ ತಾಲೂಕು ಆಡಳಿತ ಶಾಂತಿ ಸಭೆ ಯಶಸ್ವಿ

ಗೌರಿಬಿದನೂರು: ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆ ಹಾಗೂ ವಾಲ್ಮೀಕಿ ಫಲಕದ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತದಿಂದ ಶಾಂತಿ ಸಭೆ ನಡೆಸಲಾಯಿತು.

ನಗರದ ತಾಲೂಕು ಕಚೇರಿಯಲ್ಲಿ ಗ್ರಾಮದ ಪರಿಶಿಷ್ಠ ಜಾತಿ ಮತ್ತು ಪಂಗಡದ ಮುಖಂಡರ ಎರಡು ಪ್ರತ್ಯೇಕ ಸಭೆಗಳನ್ನು ನಡೆಸಿದರು. ಎರಡೂ ಸಭೆಗಳಲ್ಲಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಎರಡೂ ಸಮುದಾಯಗಳ ಮುಖಂಡರನ್ನು ಸೇರಿಸಿ ಶಾಂತಿ ಸಭೆ ನಡೆಸಿ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದರು.

ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ, ಮಹರ್ಷಿ ವಾಲ್ಮೀಕಿ ರಾಮರಾಜ್ಯದ ಕನಸು ಕಂಡವರು. ಅದನ್ನು ನನಸಾಗಿಸಲು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಶ್ರಮಿಸಿದರು. ಇಬ್ಬರೂ ಮಹಾನ್ ಮಾನವತಾವಾದಿಗಳು. ಅವರ ಆದರ್ಶಗಳನ್ನು ನಾವು ಪಾಲಿಸಬೇಕೆ ಹೊರತು ಅವರ ಹೆಸರಿನಲ್ಲಿ ಸಮಾಜದಲ್ಲಿ ಶಾಂತಿ ಕದಡಬಾರದು. ಗ್ರಾಮದಲ್ಲಿ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸಲಾಗುವುದು. ಯಾರೂ ಕೂಡ ತಮ್ಮಿಷ್ಟದ ನಿರ್ಧಾರ ತೆಗೆದುಕೊಳ್ಳಬಾರದು ಎಂದ ಅವರು ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆ ಹಾಗೂ ವಾಲ್ಮೀಕಿ ನಾಮಫಲಕ ಯಥಾ ಸ್ಥಿತಿ ಇರುವುದಕ್ಕೆ ಆದೇಶಿಸಿದರು.

ವೃತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ ಮಾತನಾಡಿ, ಗೌರಿಬಿದನೂರು ಶಾಂತಿ ಸೌಹಾರ್ದತೆಗೆ ಹೆಸರಾದ ನೆಲ. ಇಲ್ಲಿ ಶಾಂತಿ ಕದಡಬಾರದು. ತಾಲೂಕಿನಲ್ಲಿ ಅನಕ್ಷರರು ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶೇ.50ರಷ್ಟು ಮುಗ್ಧ ಜನರಿಗೆ ಅಂಬೇಡ್ಕರ್ ಹಾಗೂ ವಾಲ್ಮೀಕಿ ಮಹರ್ಷಿಗಳ ವಿಚಾರಧಾರೆಗಳ ಬಗ್ಗೆಯೇ ತಿಳಿದಿಲ್ಲ. ಅವರ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸಿ ಸಮಾನತೆ ಕಾಪಾಡಬೇಕು. ಆಗ ಇಬ್ಬರೂ ಮಹನೀಯರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಅದನ್ನು ಬಿಟ್ಟು ಅವರ ಹೆಸರಿನಲ್ಲಿ ಬಡಿದಾಡಿಕೊಳ್ಳುವುದು ಒಳ್ಳೆಯದಲ್ಲ. ಗ್ರಾಮದ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ಸೇರಿ ಒಳ್ಳೆಯ ತೀರ್ಮಾನ ತೆಗೆದುಕೊಳ್ಳಲಿದೆ. ಅದನ್ನು ಎಲ್ಲ ಸಮುದಾಯಗಳು ಗೌರವಿಸಬೇಕು. ಯಾರೂ ಸಹ ಪಟಾಕಿ ಸಿಡಿಸುವ, ಸಂಭ್ರಮಿಸಬಾರದು. ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮಲ್ಲಿ ಯಾವುದೇ ಗೊಂದಲಗಳಿದ್ದರೆ ನಮ್ಮನ್ನು ಸಂಪರ್ಕಿಸಬೇಕು. ಅಗತ್ಯ ಕ್ರಮವನ್ನು ನಾವು ಜರುಗಿಸುತ್ತೇವೆ. ಗಾಳಿ ಸುದ್ದಿಗಳಿಗೆ ಕಿವಿಗೊಟ್ಟು ಸ್ವಂತ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ಡಿವೈಎಸ್ಪಿ ಶಿವಕುಮಾರ್, ಗ್ರಾಮದ ಮುಖಂಡರು ಮತ್ತು ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಗ್ರಾಮದಲ್ಲಿ ಪೊಲೀಸ್ ಬಂದೋ ಬಸ್ತ್ ಮುಂದುವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net