ಈ ವಾರ್ಡ್ ಪಟ್ಟಣಕ್ಕೆ ಕೂಗಳತೆ ದೂರದಲ್ಲಿ ಇದ್ದರೂ ಅಭಿವೃದ್ಧಿಯಲ್ಲಿ ಇನ್ನೂ ಹಿಂದೆ ಉಳಿದಿದೆ. ಇಲ್ಲಿನ ನಿವಾಸಿಗಳು ಹಲವು ಮೂಲ ಸೌಕರ್ಯಗಳಿಂದ
ವಂಚಿತರಾಗಿದ್ದು, ಅಭಿವೃದ್ಧಿಗಾಗಿ ಎದುರು ನೋಡುತ್ತಿದ್ದಾರೆ.
ಹೌದು... ಪಟ್ಟಣದ ಪುರಸಭೆಯ ಎರಡನೇ ವಾರ್ಡ್ ಹಲಸಿನಮರದದೊಡ್ಡಿ ವಾರ್ಡ್‌ನಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳು ಕಣ್ಣಿಗೆ ರಾಚುತ್ತಿವೆ. ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆಗಳು ಇಲ್ಲಿನ ನಿವಾಸಿಗಳನ್ನ ಬಿಟ್ಟೂ ಬಿಡದಂತೆ ಕಾಡುತ್ತಿವೆ. ಇಲ್ಲಿ ಹಲವು ಕಡೆ ತೀರಾ ಕಿರಿದಾದ ರಸ್ತೆಗಳಿದ್ದು, ವಾಹನ ಸವಾರರಿಗೆ ಬಹು ದೊಡ್ಡ ಸಮಸ್ಯೆಯಾಗಿದೆ. ಒಂದು ಕಾರು ಅಥವಾ ಆಟೋ ಮಾತ್ರ ಸಂಚರಿಸುವಷ್ಟು ಕಿರಿದಾದ ರಸ್ತೆ ಇದೆ. ಒಂದು ವಾಹನ ಬಂದರೆ ಇನ್ನೊಂದು ವಾಹನಕ್ಕೆ ಜಾಗ ಇಲ್ಲದಷ್ಟು ರಸ್ತೆ ಚಿಕ್ಕದಾಗಿದೆ.
ವಾರ್ಡ್ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳ್ಳದೆ ಅಲ್ಲಲ್ಲಿ ಕಾಮಗಾರಿ ಮಾಡಲಾಗಿದೆ. ಇನ್ನೂ ಹಲವು ಕಡೆ ಅರ್ಧದಷ್ಟು ಕಾಮಗಾರಿ ಮಾಡಿ ಹಾಗೆ ಬಿಟ್ಟಿದ್ದಾರೆ. ವಾರ್ಡ್ ಒಳಗೆ ಒಂದು ಬದಿ ಸಂಪೂರ್ಣವಾಗಿ ಸಿಸಿ ಚರಂಡಿ ನಿರ್ಮಾಣ ಮಾಡಲಾಗಿದೆ. ಅದರ ಮೇಲೆ ಸ್ಲ್ಯಾಬ್‌ಗಳನ್ನು ಹಾಕಲಾಗಿದೆ. ಇನ್ನು ಹಲವು ಕಡೆ ಕಲ್ಲಿನ ಕಟ್ಟಡದ ಚರಂಡಿಗಳಿದ್ದು, ಅವುಗಳಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯಲಾಗದ ಪರಿಸ್ಥಿತಿಗೆ ಬಂದು ತಲುಪಿವೆ.
ಪ್ರಮುಖವಾಗಿ ವಾರ್ಡ್ ವ್ಯಾಪ್ತಿಯಲ್ಲಿನ ಮ್ಯಾಗ್ನೋಲಿಯಾ ಲೇಔಟ್‌ನಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ಬೀದಿ ದೀಪ ಅಳವಡಿಸಿಲ್ಲ. ಅಲ್ಲದೆ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಿಲ್ಲ. ಹಾಗಾಗಿ ಅಲ್ಲಿನ ನಿವಾಸಿಗಳು ನೀರಿಗಾಗಿ ಪರಿತಪಿಸುತ್ತಿದ್ದಾರೆ. ವಾರ್ಡ್ ವ್ಯಾಪ್ತಿಯಲ್ಲಿ ಸ್ಮಶಾನ ಇಲ್ಲದ ಕಾರಣ ಪುರಸಭೆ ಸದಸ್ಯರು ವಾರ್ಡ್‌ನಲ್ಲಿರುವ ಗೋಮಾಳದಲ್ಲಿ ಜಾಗವನ್ನು ಗುರುತು ಮಾಡಲಾಗಿದೆ. ಕಲ್ಲುಗೋಪಹಳ್ಳಿ ಗ್ರಾಮದ ಸರ್ವೇ ನಂಬರ್ 21/1 ರಲ್ಲಿ 3 ಎಕರೆ 2 ಗುಂಟೆ ಜಾಗ ಇದೆ.
* ಕರಿಯಪ್ಪನದೊಡ್ಡಿಯಿಂದ ಹಲಸಿನಮರದದೊಡ್ಡಿ ವರೆಗೆ ರಸ್ತೆ ಡಾಂಬರೀಕರಣ.
* ಸಿಸಿ ಚರಂಡಿ ನಿರ್ಮಾಣ.
*ರಸ್ತೆ ವಿಸ್ತರಣೆ.
* ವಾರ್ಡ್ ವ್ಯಾಪ್ತಿಯಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ.
* ಹಲವು ಕಡೆ ಅರ್ಧಕ್ಕೆ ನಿಂತ್ತಿರುವ ಯುಜಿಡಿ ಕಾಮಗಾರಿ ಪೂರ್ಣಗೊಳ್ಳಬೇಕಿದೆ.
* ಕುಡಿಯುವ ನೀರಿನ ಪೈಪ್‌ಲೈನ್ ಆಗಬೇಕಿದೆ.
* ವಾರ್ಡ್ ವ್ಯಾಪ್ತಿಯಲ್ಲಿ ಸ್ಮಶಾನ ಅಗತ್ಯವಾಗಿ ಬೇಕಾಗಿದೆ.
ವಾರ್ಡ್ ವ್ಯಾಪ್ತಿ
ಹಲಸಿನಮರದದೊಡ್ಡಿ, ರಾಮಕೃಷ್ಣಯ್ಯನದೊಡ್ಡಿ, ಕರಿಯಪ್ಪನದೊಡ್ಡಿ, ಚಂದ್ರರಾಯರದೊಡ್ಡಿ
ಜನಸಂಖ್ಯೆ: 1500,
ಮತದಾರರು 850
ಲ್ಯಾಂಡ್ ಮಾರ್ಕ್
ನಿತ್ಯಾನಂದ ಸ್ವಾಮೀಜಿ ಮಠ, ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ದಿ.ಮುತ್ತಪ್ಪ ರೈ ಅವರ ನಿವಾಸ
ಪುರಸಭೆ ಸದಸ್ಯರ ಹೆಸರು:- ಮನು ಲೋಕೇಶ್
ದೂರವಾಣಿ ಸಂಖ್ಯೆ- 8310641292
ಪುರಸಭೆ ಎರಡನೇ ವಾರ್ಡ್
ನಮ್ಮ ವಾರ್ಡ್‌ನಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿಗೆ ರಸ್ತೆ ಕಿತ್ತು ಹಾಕಿದ್ದು, ದುರಸ್ತಿ ಮಾಡಿಲ್ಲ. ಮಳೆ ಬಂದರೆ ನೀರು ರಸ್ತೆಯಲ್ಲಿ ನಿಂತು ಗದ್ದೆಯಂತಾಗುತ್ತದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಮುತ್ತಪ್ಪ ರೈ ನಿವಾಸದ ಎದುರು ಕೊಳವೆ ಬಾವಿ ಕೊರೆದು 2 ವರ್ಷ ಕಳೆದಿದ್ದು, ಮೋಟರ್ ಪಂಪ್ ಬಿಟ್ಟಿದ್ದಾರೆ. ಈವರೆಗೆ ಪುರಸಭೆ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ನಾವು ಜನರಿಂದ ಆಯ್ಕೆಯಾಗಿದ್ದೇವೆ ಹೊರತು ಆಡಳಿತಾತ್ಮಕವಾಗಿ ನಮಗೆ ಯಾವುದೇ ಶಕ್ತಿ ಇಲ್ಲ. ಹಾಗಾಗಿ ಪುರಸಭೆಗೆ ಹೋಗಿ ಅಧಿಕಾರಿಗಳನ್ನ ಕೇಳಲು ಆಗುತ್ತಿಲ್ಲ.
ಮನು ಲೋಕೇಶ್, ಪುರಸಭೆ ಸದಸ್ಯೆ, 2ನೇ ವಾರ್ಡ್.
----
ನಮ್ಮ ವಾರ್ಡ್‌ನಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ. ನ್ಯಾಯಬೆಲೆ ಅಂಗಡಿ ಇಲ್ಲ. ರಸ್ತೆಗಳು ಡಾಂಬರೀಕರಣಗೊಂಡಿಲ್ಲ. ಪ್ರಮುಖವಾಗಿ ಸ್ಮಶಾನ ಇಲ್ಲ. ಈ ಸಮಸ್ಯೆ ಬಹಳ ವರ್ಷಗಳಿಂದ ಕಾಡುತ್ತಿದೆ. ಉತ್ತಮ ಚರಂಡಿಗಳಿಲ್ಲದೇ ವಾರ್ಡ್ ಗಬ್ಬೆದ್ದು ನಾರುತ್ತಿದೆ.
ನಾಗೇಶ್, ವಾರ್ಡ್ ನಿವಾಸಿ