ಹಲಸಿಗೆ ಪ್ರಸಿದ್ಧಿ ಪಡೆದ ಹಲಸಬೆಲೆ

26 RMN-MGD P1
Published on

* ಗ್ರಾಮದಲ್ಲಿ ಚೋಳರ ಕಾಲದ ದೇವಾಲಯಗಳಿರುವುದು ವಿಶೇಷ

* ಆಧುನಿಕ ಯುಗದಲ್ಲೂ ಗ್ರಾಮೀಣ ಸೊಬಗು ಜೀವಂತ

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ಭಾರತದ ಗ್ರಾಮೀಣ ಭಾಗದ ಪ್ರತಿಯೊಂದು ಗ್ರಾಮಗಳು ತನ್ನದೆಯಾದ ವೈಶಿಷ್ಟ್ಯ ಹೊಂದಿವೆ. ಇದರೊಂದಿಗೆ ಎಷ್ಟೇ ಆಧುನಿಕತೆ ಬೆಳೆದರೂ ಇಂದಿಗೂ ಬಹುತೇಕ ಗ್ರಾಮಗಳಲ್ಲಿ ಗ್ರಾಮೀಣ ಸೊಬಗು ಜೀವಂತವಾಗಿದೆ. ಅಂತೆಯೇ  ಹಲಸಬೆಲೆ ಗ್ರಾಮ ಗ್ರಾಮೀಣ  ಸೊಬಗಿಗೆ ಸಾಕ್ಷಿಯಾಗಿದೆ.

ಮಾಗಡಿಯಿಂದ 12ಕಿ.ಮೀ ದೂರ ಹುಲಿದುರ್ಗ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಪುರಾತನ ಕಾಲದ ಗ್ರಾಮವೇ ಹಲಸಬೆಲೆ ಗ್ರಾಮ. ಪುರಾತನ ಕಾಲದಲ್ಲಿ ಗ್ರಾಮದ ಹಲಸಿನ ಮರದ ಬುಡದಲ್ಲಿ ಬೃಹತ್ ಗಾತ್ರದ ಹಣ್ಣು ಬಿಟ್ಟಿದು, ಅದನ್ನು ಎತ್ತಿಕೊಂಡು ಹೋಗಲು ಸಾಧ್ಯವಾಗದೆ ಎತ್ತಿನ ಗಾಡಿಯಲ್ಲಿ ಒಯ್ದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿತ್ತು ಎನ್ನುವ ಮಾತುಗಳಿವೆ. ಇದರಿಂದ ಗ್ರಾಮಕ್ಕೆ ಹಲಸಬೆಲೆ ಎಂಬ ಹೆಸರು ಬಂದಿದೆ. ಈ ಹೆಸರು ಪ್ರಸಿದ್ಧಿ ಹೊಂದಿರುವ ಜತೆಗೆ ಈ ಭಾಗದ ಹಲಸಿನ ಹಣ್ಣು ಹೆಚ್ಚು ರುಚಿಯಾಗಿರುವುದರಿಂದ ಮೈಸೂರು ಮಹಾರಾಜರು ಇಲ್ಲಿಂದ ಹಣ್ಣನ್ನು ತರಿಸಿಕೊಂಡು ತಿನ್ನುತ್ತಿದ್ದರಿಂದ ಗ್ರಾಮಕ್ಕೆ ಹಲಸಬೆಲೆ ಎಂದು ಕರೆಯಲ್ಪಡುತ್ತಿದ್ದರು ಎಂಬ ಇತಿಹಾಸ ಇದೆ.

ಗ್ರಾಮದಲ್ಲಿ 150ಕ್ಕೂ ಹೆಚ್ಚು ಮನೆಗಳಿದ್ದು, 800 ಮತದಾರರಿದ್ದಾರೆ. ವೀರಶೈವ ಸಮುದಾಯ, ಪರಿಶಿಷ್ಟ ಜಾತಿ, ಪಂಗಡ, ವಿಶ್ವಕರ್ಮ, ಒಕ್ಕಲಿಗ ಜನಾಂಗದ ಎಲ್ಲ ಸಮುದಾಯದವರು ಐಕ್ಯತೆಯಿಂದ, ಪ್ರೀತಿ, ವಿಶ್ವಾಸದಿಂದ ಸಹಬಾಳ್ವೆ ನಡೆಸಿಕೊಂಡು ಗ್ರಾಮದ ಒಳಿತಿಗೆ ಶ್ರಮಿಸುತ್ತಿದ್ದಾರೆ.

ಪ್ರತಿದಿನ ಪೂಜೆ

ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಿರುವ ದೇವಾಲಯಗಳಿದ್ದು, ಅದರಲ್ಲಿ ಗ್ರಾಮದ ಈಶಾನ್ಯ ದಿಕ್ಕಿಗೆ ಶಂಕರೇಶ್ವರ, ನೈರುತ್ಯ ದಿಕ್ಕಿಗೆ ಮಲ್ಲೇಶ್ವರ, ವಾಯುವ್ಯ ದಿಕ್ಕಿಗೆ ಬಸವೇಶ್ವರ, ಗ್ರಾಮದ ಮಧ್ಯದಲ್ಲಿ ಮಹಾಲಿಂಗೇಶ್ವರ, ಮಾರಮ್ಮ, ಈಶಾನ್ಯ ದಿಕ್ಕಿಗೆ ಶಂಕರೇಶ್ವರ, ಶನೇಶ್ವರ ದೇವಾಲಯ, ಉತ್ತರ ‘ಭಾಗಕ್ಕೆ ಮಹೇವಮ್ಮ ದೇವಾಲಯಗಳಿರುವುದು ವಿಶೇಷತೆಯಿಂದ ಕೂಡಿದೆ. ಎಲ್ಲ ದೇವಾಲಯಗಳಲ್ಲಿ ಪ್ರತಿದಿನ ಪೂಜೆ ಹಾಗೂ ಪ್ರತಿ ವರ್ಷ ಗ್ರಾಮದ ಎಲ್ಲ ಸಮುದಾಯವರು ಸೇರಿ ಅದ್ದೂರಿಯಿಂದ ಜಾತ್ರಾ ಮಹೋತ್ಸವ ನಡೆಸಿ ಸುತ್ತಮುತ್ತಲ ಗ್ರಾಮಗಳ ಜನರಿಗೆ ಅನ್ನದಾಸೋಹ ಏರ್ಪಡಿಸುವುದು ವಿಶೇಷ.

ಕೃಷಿಯಲ್ಲಿ ಸಾಧನೆ

ರೈತರು ಬೆಳೆದಿರುವ ವಿವಿಧ ಬಗೆಯ ಹಲಸಿನ ಹಣ್ಣು ಪ್ರಸಿದ್ಧಿ ಹೊಂದಿದ್ದು, ಹಲಸಿನ ಹಣ್ಣನ್ನು ಖರೀದಿಸಲು ಸಾಕಷ್ಟು ಮಂದಿ ಮರದ ಬಳಿಯೆ ಬಂದು ಖರೀದಿಸುವುದು ವಿಶೇಷವಾದರೆ, ಮತ್ತೊಂದೆಡೆ ಪ್ರತಿ ಹಲಸಿನ ಮರದ ಒಂದು ಹಣ್ಣನ್ನಾದರೂ ಗ್ರಾಮದ ದೇವಾಲಯದಲ್ಲಿ ನಡೆಯುವ ಪೂಜೆಗೆ ನೀಡುವುದು ಮತ್ತೊಂದು ವಿಶೇಷವಾಗಿದೆ.

ಗ್ರಾಮದಲ್ಲಿ ಬಹುತೇಕ ಮಂದಿ ವಿದ್ಯಾವಂತರಿದ್ದು, ಉತ್ತಮ ವೃತ್ತಿಯಲ್ಲಿದ್ದರೆ, ಕೆಲವರು ಪಶುಸಂಗೋಪನೆ, ವಾಣಿಜ್ಯ ಬೆಳೆಗಳಾದ ಹೂವು, ಹಣ್ಣು, ತೆಂಗು, ಅಡಕೆ, ಮಾವು ಇತರ ಬೆಳೆ  ಬೆಳೆಯುವ ಮೂಲಕ ಕೃಷಿಯಲ್ಲಿ ಸಾ‘ನೆ ಮಾಡಿದ್ದಾರೆ. ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ಹಾಲಿನ ಡೇರಿಗಳು ಪ್ರಮುಖವಾಗಿವೆ.

==

ಹಲಸಬೆಲೆ ಗ್ರಾಮ ಪುರಾತನವಾದ ಗ್ರಾಮವಾಗಿದ್ದು, ಎಲ್ಲ ಸಮುದಾಯ ಜನರು ‘ಭಾವೈಕ್ಯತೆಯಿಂದ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಎಲ್ಲ ರೀತಿಯ ದೇವಾಲಯಗಳಿದ್ದು, ದೇವ ಗಿರಿಯಾಗಿದೆ.  ಗ್ರಾಮಕ್ಕೆ ಸಾಕಷ್ಟು ಇತಿಹಾಸ ಇರುವುದರಿಂದ ಗ್ರಾಮವನ್ನು ಗುರುತಿಸಿ  ಪ್ರವಾಸಿ ತಾಣ ಮಾಡಲು ಸರ್ಕಾರ ಮುಂದಾಗಬೇಕು.ಮಲ್ಲಿಕಾರ್ಜುನಯ್ಯಗ್ರಾಪಂ ಮಾಜಿ ಅಧ್ಯಕ್ಷ ಹಲಸಬೆಲೆ--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net