

ಆರ್.ಬಿ.ಹಳ್ಳಿ ದಿವಾಕರ/ಯೋಗೇಶ್ ಹಲಗೂರು
ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಒಂದಾಗಿರುವ ಹಲಗೂರು ಗ್ರಾಮಕ್ಕೆ ಶತಮಾನಗಳ ಐತಿಹಾಸಿಕ ಹಿನ್ನೆಲೆಯಿದ್ದು, ಧರೆಗೆ ದೊಡ್ಡವರು ಮಂಟೇಸ್ವಾಮಿ ಶಿಷ್ಯ ಸಿದ್ದಪ್ಪಾಜಿ ಕಬ್ಬಿಣದ ಭಿಕ್ಷೆ ಕೇಳಲು ಹೋಗಿದ್ದಾಗ ಪಾಂಚಾಲರಿಂದ ಶಿಕ್ಷೆಗೆ ಗುರಿಯಾಗಿದ್ದ ಹಾಗೂ ಶ್ರೀರಂಗಪಟ್ಟಣದ ಹೈದರಾಲಿಗೆ ವಿಶ್ವಕರ್ಮರು ಹರಿತವಾದ ‘ಹಲಗು’ ಎಂದರೆ ಚೂಪಾದ, ಹರಿತವಾದ ಯುದ್ಧೋಪಕರಣಗಳನ್ನು ತಯಾರಿಸಿ ಕೊಡುವ ನೆಲೆಯಾಗಿದ್ದ ಇಂದಿನ ‘ಹಲಗೂರು’ ಗ್ರಾಮ ಹಲವಾರು ಐತಿಹ್ಯಗಳನ್ನು ಹೊಂದಿದೆ.
ಊರಿನ ಇತಿಹಾಸ: ಹಲಗೂರು ಗ್ರಾಮಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಸಾಂಸ್ಕೃತಿಕ ಸೊಗಡಾಗಿರುವ ಜಾನಪದ ಕಥಾ ಹಂದರಗಳಲ್ಲೂ ಹಲಗೂರಿನ ಹೆಸರು ಉಲ್ಲೇಖವಾಗಿದೆ.
ಗ್ರಾಮದಲ್ಲಿ ಅನೇಕ ಸಿದ್ಧಿಪುರುಷರು, ಸಾಧಕರು, ಯೋಗಿಗಳು ಮತ್ತು ತ್ಯಾಗಿಗಳ ಪವಾಡಗಳು ಜರುಗಿರುವುದಕ್ಕೆ ಗ್ರಾಮವು ಸಾಕ್ಷಿಯಾಗಿದೆ. ಇದಕ್ಕೆ ಪೂರಕವಾಗಿ ಜಾನಪದ ಕಥೆಗಳು ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಶತಮಾನಗಳ ಹಿಂದೆ ಗ್ರಾಮದಲ್ಲಿ ಕಬ್ಬಿಣದ ಕೆಲಸ ಮಾಡುವ ಅಕ್ಕಸಾಲಿಗರು ಹೆಚ್ಚು ನೆಲೆಸಿದ್ದರು ಎನ್ನಲಾಗಿದ್ದು, ಸಮೀಪವಿರುವ ಚಿಲ್ಲಾಪುರದಲ್ಲಿ ಅಪಾರ ಕಬ್ಬಿಣದ ಅದಿರಿನ ನಿಕ್ಷೇಪವಿತ್ತಂತೆ. ಈಗಲೂ ಈ ಊರುಗಳಲ್ಲಿ ಕಬ್ಬಿಣದ ಅದಿರಿನ ನಿಕ್ಷೇಪ ಕಂಡುಬರುತ್ತದೆ. ಹಾಗಾಗಿ ಕಬ್ಬಿಣದ ಅದಿರನ್ನು ಕರಗಿಸಿ ಆಯುಧಗಳು ಹಾಗೂ ಗೃಹಪಯೋಗಿ ವಸ್ತುಗಳನ್ನು ತಯಾರಿಸುವ ಕಸುಬುದಾರ ಸಮುದಾಯ ವಾಸವಿದ್ದರು. ಇವರು ಯುದ್ಧಕ್ಕೆ ಬೇಕಾದ ಆಯುಧಗಳಾದ ಕತ್ತಿ, ಚಾಕು, ಬಾಕು, ಭಲ್ಲೆ, ಇತ್ಯಾದಿಗಳನ್ನು ತಯಾರಿಸಿ ಅಂದಿನ ಪಾಳೇಗಾರರಿಗೆ ರಾಜರಿಗೆ ಪೂರೈಸುತ್ತಿದ್ದರೆಂದು ಹೇಳಲಾಗುತ್ತದೆ. ಮತ್ತೊಂದು ಉಲ್ಲೇಖದ ಪ್ರಕಾರ ಧರೆಗೆ ದೊಡ್ಡವರಾದ ಮಂಟೇಸ್ವಾಮಿ ಆಜ್ಞೆಯಂತೆ ತನ್ನ ಶಿಷ್ಯರಲ್ಲೊಬ್ಬರಾದ ಸಿದ್ದಪ್ಪಾಜಿಗೆ ಕಬ್ಬಿಣದ ಭಿಕ್ಷೆಯನ್ನು ಬೇಡಿ, ಹಲಗೂರಿಗೆ ಬಂದಿದ್ದರಂತೆ. ಈ ಊರಿನ ಪಾಂಚಾಲರು ಅವರ ಬೇಡಿಕೆಗಳನ್ನು ತಿರಸ್ಕರಿಸಿ, ಅನೇಕ ಅಡ್ಡಿಗಳನ್ನು ಉಂಟು ಮಾಡಿದರಂತೆ. ಆದರೆ ಅವುಗಳನ್ನೆಲ್ಲ ಈ ಸಿದ್ಧಪುರುಷರು ನಿವಾರಿಸಿಕೊಂಡು, ತಮ್ಮ ಪವಾಡವನ್ನು ಮೆರೆದು, ಊರಿನ ವಿಶ್ವಕರ್ಮ ಜನಾಂಗಕ್ಕೆ ಸವಾಲನ್ನು ಒಡ್ಡಿದರಂತೆ. ಆದರೂ ಪ್ರಯೋಜನವಾಗದೆ ಕುಪಿತಗೊಂಡ ಸಿದ್ದಪ್ಪಾಜಿ ಶಾಪವೊಂದನ್ನು ಕೊಟ್ಟಿದ್ದರಂತೆ. ಮಲೆಮಾದೇಶ್ವರ ಭಕ್ತರಾದ ನೀಲಗಾರ ಸಿದ್ದಪ್ಪಾಜಿ ಮತ್ತು ರಾಚಪ್ಪಾಜಿ ಅವರ ಪವಾಡಗಳನ್ನು ಜಾನಪದ ಕಥಾರೂಪಕಗಳಲ್ಲಿ ಇಂದಿಗೂ ಕೇಳಸಿಗುತ್ತವೆ. ಇದಕ್ಕೆ ಸಾಕ್ಷಿ ಈ ಊರಿನಲ್ಲಿ ಸಿದ್ದಪ್ಪಾಜಿ ಗದ್ದುಗೆಯ ಎದುರಿನಲ್ಲಿ ಕಬ್ಬಿಣದ ಸ್ತಂಭ ಮತ್ತು ಕಬ್ಬಿಣದ ಗಟ್ಟಿಗಳು ಕಾಣ ಸಿಗುತ್ತವೆ.
ಪ್ರಮುಖ ವಾಣಿಜ್ಯ ಕೇಂದ್ರ: ತಾಲೂಕಿನ ಈಶಾನ್ಯ ದಿಕ್ಕಿಗೆ ಬೆಟ್ಟಗುಡ್ಡಗಳ ಪರಿಸರದ ನಡುವೆ ಬಯಲು ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಹಲಗೂರು ಗ್ರಾಮವಿದೆ. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ವಾಣಿಜ್ಯ, ಕಲೆ, ಕ್ರೀಡೆ, ವಿವಿಧ ಕ್ಷೇತ್ರಗಳಲ್ಲಿ ಪಟ್ಟಣದಂತೆ ಬೆಳೆದು ಗಮನ ಸೆಳೆದಿದೆ.
ರಾಷ್ಟ್ರೀಯ ಹೆದ್ದಾರಿ 209 ಈ ಊರಿನ ಬದಿಯಲ್ಲೇ ಹಾದು ಹೋಗಿದೆ. ಸಮೀಪದ ಕೋನ್ನಾಪುರ ಮತ್ತು ವಳಗೆರೆದೊಡ್ಡಿ ಗ್ರಾಮಗಳನ್ನು ಒಳಗೊಂಡು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವೂ ಆಗಿರುವ ಹಲಗೂರು ವ್ಯಾಪ್ತಿಯಲ್ಲಿ 18 ಸಾವಿರ ಜನಸಂಖ್ಯೆಯಿದ್ದು, 26 ಗ್ರಾಪಂ ಸದಸ್ಯರನ್ನು ಹೊಂದಿದೆ. ಗ್ರಾಮದಲ್ಲಿ ಪೊಲೀಸ್‌ಠಾಣೆ, ಪ್ರಾಥಮಿಕ ಆರೋಗ್ಯಕೇಂದ್ರ, ಪಶುಪಾಲನ ಆಸ್ಪತ್ರೆ, ಕಂದಾಯ ಇಲಾಖೆ ಹಲವು ಕಚೇರಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ವಿವಿಧ ಸಹಕಾರ ಸಂಘ ಸಂಸ್ಥೆಗಳು, ರಾಷ್ಟ್ರೀಕೃತ ಬ್ಯಾಂಕ್‌ನ ಶಾಖೆಗಳು ಈ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಶತಮಾನದ ದವಾಖಾನೆ: ಗ್ರಾಮದಲ್ಲಿ 1934ರಂದು ಬಡಜನರ ಅನಾರೋಗ್ಯ ನಿವಾರಣೆಗಾಗಿ ಮೈಸೂರು ಸಂಸ್ಥಾನದ ಸೀನಿಯರ್ ಸರ್ಜನ್, ಡಾ.ಎಸ್. ಸುಬ್ಬರಾವ್, ಆಸ್ಪತ್ರೆಯ ಪ್ರವೇಶ ಮಹೋತ್ಸವವನ್ನು ನೆರವೇರಿಸಿದರು. ಸಾಧಾರಣ ಕಟ್ಟಡದಲ್ಲಿ ನಡೆಯುತ್ತಿದ್ದ ಆಸ್ಪತ್ರೆಗೆ, ಎಚ್. ಬಸವಪುರದ ಬಿ.ಬಸವೇಗೌಡ ಎಂಬುವರು 1949ರಲ್ಲಿ 24 ಗುಂಟೆ ಜಾಗವನ್ನು ದಾನವಾಗಿ ನೀಡಿದ್ದರು. ಇಂದು ಅದೇ ಜಾಗದಲ್ಲಿ ಸರ್ಕಾರದ ಅನುದಾನದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಪರಿವರ್ತನೆ ಮಾಡುವುದರ ಜತೆಗೆ ಬಿ. ಬಸವೇಗೌಡ ಸ್ಮರಣಾರ್ಥ ಪ್ರಾಥಮಿಕ ಆರೋಗ್ಯ ಕೇಂದ್ರವೆಂದು ನಾಮಕರಣ ಮಾಡಲಾಗಿದೆ.
ಐತಿಹಾಸಿಕ ಹಿನ್ನೆಲೆಯ ದೇವಾಲಯಗಳ ಬೀಡು ಹಲಗೂರು ಗ್ರಾಮದಲ್ಲಿ ಪುರಾತನ ಹಾಗೂ ಐತಿಹಾಸಿಕ ಹಿನ್ನೆಲೆಗಳನ್ನೊಳಗೊಂಡ ದೇವಸ್ಥಾನಗಳಿವೆ. ಗ್ರಾಮ ದೇವತೆಯಾದ ಪಟ್ಟದಲಮ್ಮ, ಮಾಸ್ತಮ್ಮ, ವೀರಭದ್ರಸ್ವಾಮಿ, ಕಾಳಿಕಾಂಬ, ಬಸವೇಶ್ವರ, ಗಣೇಶ, ಸೋಮೆಶ್ವರ, ಮಾರಮ್ಮ, ಭೈರವೇಶ್ವರ, ಆಂಜನೇಯ, ಈಶ್ವರ ದೇವಾಲಯಗಳು ಸೇರಿದಂತೆ ರಾಮಮಂದಿರ ಹಾಗೂ ಮಠ ಮಂದಿರಗಳು ಇಲ್ಲಿ ಕಾಣ ಸಿಗುತ್ತವೆ.
ಕೆರೆಗಳಿಗೆ ತ್ಯಾಜ್ಯ: ಹಲಗೂರು ಗ್ರಾಮಕ್ಕೆ ಹೊಂದಿಕೊಂಡಿರುವ ದೊಡ್ಡಕೆರೆ 52ಎಕರೆ ವಿಸ್ತೀರ್ಣದಲ್ಲಿ ನಯನ ಮನೋಹರವಾಗಿವೆ. ಈ ಕೆರೆಗಳಿಗೆ ಇಲ್ಲಿನ ನಿವಾಸಿಗಳು ತ್ಯಾಜ್ಯವಸ್ತುಗಳನ್ನು ಹಾಕುವ ಮೂಲಕ ವಿರೂಪಗೊಳಿಸಿದ್ದಾರೆ. ಇದರಿಂದ ಸುತ್ತಲಿನ ವಾತಾವರಣ ಮಲಿನತೆಯಿಂದಲೂ ಕೂಡಿದೆ ಅಲ್ಲದೆ ಗ್ರಾಮದ ಸುತ್ತಲೂ ಹಲವು ಕಟ್ಟೆಗಳು ಇದ್ದು, ಪ್ರಸ್ತುತ ಎದುರಾಗಿರುವ ಬರದಿಂದ ಕೆರೆ-ಕಟ್ಟೆಗಳೆಲ್ಲ ಬರಿದಾಗಿ ನೀರಿಗಾಗಿ ಬಾಯ್ತೆರೆದುಕೊಂಡಿವೆ.
ಹತ್ತಾರು ಶಿಕ್ಷಣ ಸಂಸ್ಥೆಗಳು: ಹಲಗೂರು ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಹಾಗೂ ಪದವಿ ಕಾಲೇಜಿದ್ದು, ಇವುಗಳ ಜತೆಗೆ ಪದವಿಪೂರ್ವ ಕಾಲೇಜು ಸೇರಿದಂತೆ ಹಲವು ಖಾಸಗಿ ವಿದ್ಯಾಸಂಸ್ಥೆಗಳಿದ್ದು, ಸುತ್ತಲಿನ ಹತ್ತಾರು ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದು ಶಿಕ್ಷಣ ಕಲಿಯುತ್ತಾರೆ.
ಪ್ರಮುಖ ವಾಣಿಜ್ಯ ಕೇಂದ್ರ: ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಗ್ರಾಮ ಒಳಗೊಂಡಿರುವುದರ ಜತೆಗೆ ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರುವ ಹಲಗೂರು ಗ್ರಾಮ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ವರ್ತಕರ ಪೇಟೆ ಬೀದಿಯಲ್ಲಿ ಸದಾ ಜನಜಂಗುಳಿಯಿಂದ ಕೂಡಿರುತ್ತದೆ.