

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
crore rupess ಒಂದು ಕೋಟಿ ಅಥವಾ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ಹತ್ತಾರೂ ಕಿ.ಮೀ. ರಸ್ತೆಗಳು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿರುತ್ತವೆ. ಆದರೆ, ನಗರದಲ್ಲಿ 2022ರಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ಕೇವಲ 1.83 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿರುವುದು ರಾಣೆಬೆನ್ನೂರಿಗೆ ಬರುವವರ ಹುಬ್ಬೇರಿಸುವಂತಾಗಿದೆ.
ನಗರದ ಹಲಗೇರಿ (ಸಮ್ಮಸಗಿ-ಬಿಳಿಗಿರಿರಂಗನದಿಟ್ಟು ರಾಜ್ಯ ಹೆದ್ದಾರಿ) ಚತುಷ್ಪತ ರಸ್ತೆಯ ದುಸ್ಥಿತಿಯಿದು. ಲೋಕೋಪಯೋಗಿ ಇಲಾಖೆ ವತಿಯಿಂದ 10 ಕೋಟಿ ರೂ. ವೆಚ್ಚದಲ್ಲಿ ಹಲಗೇರಿ ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ಮಾಡಲಾಗಿದೆ. ಈ ರಸ್ತೆ ನಗರದ ಹಲಗೇರಿ ವೃತ್ತದಿಂದ ಎನ್ಎಚ್-48ರ ಹಲಗೇರಿ ಸೇತುವೆವರೆಗೆ ಕೇವಲ 1.83 ಕಿ.ಮೀ. ಇದೆ.
ನಗರದ ಮಧ್ಯ ಭಾಗದಿಂದ ಹಾದು ಹೋಗಿರುವ ಈ ರಸ್ತೆ ನಗರ ಯೋಜನಾ ಪ್ರಾಧಿಕಾರದ ಮಾಸ್ಟರ್ ಪ್ಲಾ್ಯನ್ ಪ್ರಕಾರ ಒಟ್ಟು 24 ಮೀಟರ್ ಅಗಲವಿದೆ. ಬಹುತೇಕ ಕಡೆಗಳಲ್ಲಿ ರಸ್ತೆ ಅತಿಕ್ರಮಣವಾಗಿದೆ. ಆದರೆ, ಲೋಕೋಪಯೋಗಿ ಇಲಾಖೆಯವರು ರಸ್ತೆ ನಿಮಾಣಕ್ಕೂ ಮುನ್ನ ಅತಿಕ್ರಮಣ ತೆರವುಗೊಳಿಸಿಲ್ಲ.
ರಸ್ತೆಯ ಅಕ್ಕಪಕ್ಕ ಅತಿಕ್ರಮಣ ಆಗಿರುವುದು ಹಾಗಿಯೆ ಇದೆ. ಗಟಾರು, ಫುಟ್ಪಾತ್ ನಿರ್ವಿುಸಿಲ್ಲ. ಹಲಗೇರಿ ವೃತ್ತದವರೆಗೆ ರಸ್ತೆ ಪೂರ್ಣಗೊಳಿಸಿಲ್ಲ. ಅಲ್ಲದೆ, ರಸ್ತೆ ಮಧ್ಯೆದಲ್ಲಿರುವ ಒಳಚರಂಡಿಯ ಮ್ಯಾನ್ಹೋಲ್ಗಳು ಬಾಯ್ತೆರುದುಕೊಂಡಿವೆ. ವಾಹನ ಸವಾರರಿಗೆ ಕಂಟಕಪ್ರಯಾವಾಗಿವೆ. ಒಟ್ಟಾರೆ ಸಂಪೂರ್ಣ ಅವೈಜ್ಞಾನಿಕವಾಗಿ ರಸ್ತೆ ನಿರ್ವಿುಸಲಾಗಿದೆ.
ಈ ರೀತಿ ರಸ್ತೆ ನಿಮಾಣದಿಂದ ಅಕ್ಕಪಕ್ಕದ ನಿವಾಸಿಗಳು, ಪಾದಚಾರಿಗಳು ಹೇಗೆ ಓಡಾಡಬೇಕು. ಹಲಗೇರಿ ರಸ್ತೆಯಲ್ಲಿ ನಿತ್ಯವೂ ಎಪಿಎಂಸಿಗೆ ಬರುವ ಲಾರಿ, ಗೂಡ್ಸ್ ವಾಹನಗಳು ಹಾಗೂ ಬಸ್ಗಳ ಸಂಚಾರ ಅಧಿಕವಾಗಿರುತ್ತದೆ. ಇಂತಹ ಸಮಯದಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ರಸ್ತೆ ನಿರ್ವಿುಸಬೇಕಾದ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಿಸಿದರೆ, ಜನರ ಗತಿ ಏನು ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಸವಾರರು ಬಿದ್ದರೆ ಹೊಣೆ ಯಾರು?: ಕಾಮಗಾರಿ ಮಾಡಿರುವ ಗುತ್ತಿಗೆದಾರರು, ಮಾಡಿಸಿರುವ ಅಧಿಕಾರಿಗಳು, ತಹಸೀಲ್ದಾರರು, ಜನಪ್ರತಿನಿಧಿಗಳು ಇದೇ ಮಾರ್ಗದಲ್ಲಿ ನಿತ್ಯ ಓಡಾಡುತ್ತಾರೆ. ಆದರೆ, ರಸ್ತೆಯಲ್ಲಿ ವೃದ್ಧ ಬೈಕ್ ಸವಾರರು, ಮಹಿಳೆಯರು ಬಿದ್ದು ಅನಾಹುತ ಉಂಟಾದರೆ ಯಾರು ಹೊಣೆ? ಕೋಟ್ಯಂತರ ರೂ. ಖರ್ಚು ಮಾಡಿ ನಿರ್ವಿುಸಿದ ರಸ್ತೆ ಸರಿಯಾಗಿ ಆಗಿದೆಯೆ ಎಂಬ ಬಗ್ಗೆ ತಿಳಿದು ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬೇಕಿತ್ತು ಎಂಬುದು ಸ್ಥಳೀಯರ ಆಗ್ರಹ.
ಹಲಗೇರಿ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ರಾಣೆಬೆನ್ನೂರಿಗೆ ಬರುವ ಹೊಸಬರು ಈ ಮಾರ್ಗವಾಗಿ ಬಂದರೆ ಅವರಿಗೆ ನಾಚಿಕೆ ತರಿಸುವಂತಿದೆ. ಆದರೆ, ಈ ಮಾರ್ಗದಲ್ಲಿ ಓಡಾಡುವ ಅಧಿಕಾರಿ, ಜನಪ್ರತಿನಿಧಿಗಳಿಗೆ ಇದು ಅರ್ಥವಾಗದಿರುವುದು ದುರ್ದೈವದ ಸಂಗತಿ. | ಮಂಜುನಾಥ ಕೆ., ಸ್ಥಳೀಯ ನಿವಾಸಿ
ಹಲಗೇರಿ ರಸ್ತೆಯ ಮ್ಯಾನಹೋಲ್ ಸಮಸ್ಯೆ ಸೇರಿ ಸಮಗ್ರ ದುರಸ್ತಿಗಾಗಿ ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿ ಸುತ್ತೇನೆ. ಆದಷ್ಟು ಬೇಗ ದುರಸ್ತಿ ಕಾರ್ಯ ಕೈಗೊಳ್ಳಲಾ ಗುವುದು. | ಫಕೀರಪ್ಪ ಇಂಗಳಗಿ, ನಗರಸಭೆ ಆಯುಕ್ತ ಹಲಗೇರಿ ರಸ್ತೆ ಕಾಮಗಾರಿ ಈ ಹಿಂದಿನ ಅಧಿಕಾರಿಗಳು ಇದ್ದ ಸಮಯದಲ್ಲಿ ಆಗಿದೆ. ಆದರೂ ಮ್ಯಾನ್ಹೋಲ್ ಸೇರಿ ಇತರ ಸಮಸ್ಯೆ ಕುರಿತು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುವ ಕಾರ್ಯ ಮಾಡಲಾಗುವುದು. | ಎಚ್.ವಿ. ಮರಿಸ್ವಾಮಿ, ಲೋಕೋಪಯೋಗಿ ಇಲಾಖೆ ಎಇಇ