

ಕಾರವಾರ: ನೌಕಾಸೇನೆಯ ಕಾರ್ಯಾಚರಣೆಗೆ ಹೊಂದಿಕೆಯಾಗುವಂಥ ಸ್ವದೇಶಿ ತಂತ್ರಜ್ಞಾನದ ಯುದ್ಧ ವಿಮಾನಗಳ ಅಭಿವೃದ್ಧಿಗೆ ಸಿದ್ಧತೆ ನಡೆದಿದೆ ಎಂದು ಭಾರತೀಯ ನೌಕಾಸೇನೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ತಿಳಿಸಿದರು.
ಇಲ್ಲಿನ ಕದಂಬ ನೌಕಾನೆಲೆಗೆ ಸಂಬಂಧಿಸಿದ 10 ವಸತಿ ಸಮುಚ್ಛಯಗಳನ್ನು ಸೋಮವಾರ ಉದ್ಘಾಟಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಸದ್ಯ ನೌಕಾಸೇನೆಯಲ್ಲಿ ತೇಜಸ್ ಯುದ್ಧ ವಿಮಾನಗಳು ಕಾರ್ಯಾಚರಿಸುತ್ತಿವೆ. ಅವುಗಳ ಕಾರ್ಯಕ್ಷಮತೆಯ ಬಗ್ಗೆ ನಮಗೆ ಹೆಚ್ಚು ಸಮಾಧಾನವಿದೆ. ಮತ್ತು ಅವು ಈಗಲೂ ಮಹತ್ವ ಉಳಿಸಿಕೊಂಡಿವೆ.
ಆದರೆ, ಇನ್ನಷ್ಟು ಆಧುನಿಕ ತಂತ್ರಜ್ಞಾನಗಳನ್ನು ಹೊಂದಿದ ಹಾಗೂ ನೌಕಾಸೇನೆಯ ಕಾರ್ಯಾಚರಣೆಳಿಗೆ ಹೊಂದಿಕೆಯಾಗುವ ವಿಶೇಷತೆಗಳನ್ನು ಹೊಂದಿದ ವಿಮಾನ ಅಭಿವೃದ್ಧಿಗೆ ಸಿದ್ಧತೆ ನಡೆದಿದೆ.
ಎರಡು ಇಂಜಿನ್‌ಗಳನ್ನು ಹೊಂದಿದ ಹಡಗುಗಳ ಮೇಲೆ ಇಳಿಯಬಹುದಾದ ಯುದ್ಧ ವಿಮಾನ (ಟ್ವಿನ್ ಇಂಜಿನ್ ಡೆಕ್ ಬೇಸ್ಡ್ ಫೈಟರ್ ಜೆಟ್-ಟಿಇಡಿಬಿಎಫ್) ಅಭಿವೃದ್ಧಿಪಡಿಸಲಾಗುತ್ತಿದೆ.
ಈಗಾಗಲೇ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಇದಕ್ಕಾಗಿ ಪ್ರಸ್ತಾವನೆ ಕಳಿಸಿದೆ. 2026 ರ ಹೊತ್ತಿಗೆ ಮೊದಲ ಮಾದರಿ ಸಿದ್ಧವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ವಸತಿ ಶಾಲೆ ವಿದ್ಯಾರ್ಥಿಗಳಿಂದ ಪ್ರತಿಭಟನೆ
2031-32 ರ ಹೊತ್ತಿಗೆ ಉತ್ಪಾದನೆ ಪ್ರಾರಂಭವಾಗಲಿದೆ. 2040 ರ ಹೊತ್ತಿಗೆ ಇಂಥ 45 ವಿಮಾನಗಳು ನೌಕಾಸೇನೆಗೆ ಸೇರ್ಪಡೆಯಾಗಲಿವೆ ಎಂದು ವಿವರಿಸಿದರು.
ತಲಾ 26 ಟನ್ ತೂಕದ ಜಿಇ-414 ಇಂಜಿನಿನ್‌ಗಳು, ಯುದ್ಧ ಹಡಗುಗಳ ಮೇಲೆ ಸೀಮಿತ ರನ್‌ವೇನಲ್ಲಿ ನಿಯಂತ್ರಿತವಾಗಿ ಇಳಿಯಲು (ಅರೆಸ್ಟೆಡ್ ಲ್ಯಾಂಡಿಂಗ್)ಅನುಕೂಲಕರ ವ್ಯವಸ್ಥೆ, ಸೀಮಿತ ಉದ್ದದ ರನ್‌ವೇನಲ್ಲಿ ಟೇಕಫ್ ಆಗುವಂಥ ಸಾಮರ್ಥ್ಯ,ಮಡಚುವ ರೆಕ್ಕೆಗಳು ಮುಂತಾದ ವಿಶೇಷತೆಗಳನ್ನು ಈ ವಿಮಾನಗಳು ಹೊಂದಿರಲಿವೆ ಎಂದರು.
ರಫೆಲ್ ಶೀಘ್ರ:
ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತವಾಗಿರುವ ಯುದ್ಧ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ ಮೇಲೆ ಸದ್ಯ ಮಿಗ್-29 ವಿಮಾನಗಳು ಕಾರ್ಯಾಚರಿಸುತ್ತಿವೆ.
ಶೀಘ್ರದಲ್ಲಿ ಅದರ ಮೇಲೆ ರಫೆಲ್ ಯುದ್ಧ ವಿಮಾನಗಳ ಕಾರ್ಯಾಚರಣೆ ಪ್ರಾರಂಭಿಸಲಿದ್ದೇವೆ ಎಂದು ಅಡ್ಮಿರಲ್ ಆರ್.ಹರಿಕುಮಾರ್ ವಿವರಿಸಿದರು. ಭಾರತದ ಭದ್ರತೆಯ ದೃಷ್ಟಿಯಲ್ಲಿ ಕಾರವಾರದ ಕದಂಬ ನೌಕಾನೆಲೆಯು ಅತಿ ಮಹತ್ವದ್ದಾಗಿದೆ. ಇಲ್ಲಿ ಎರಡನೇ ಹಂತದ ವಿಸ್ತರಣೆ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಅಡ್ಮಿರಲ್ ಹರಿಕುಮಾರ್ ಕಾರ್ಯಕ್ರಮದ ವಿವರ ನೋಡಿ: https://twitter.com/IN_KTKNA/status/1693655840874733992?t=_GY-5rcDCFHNn_2p8DsGgw&s=03