More

    ವಸತಿ ಶಾಲೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಶಿರಸಿ: ತಾಲೂಕಿನ ಕಲ್ಲಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಅವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಊಟ, ಉಪಾಹಾರ ಬಿಟ್ಟು ಶಾಲಾ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಪ್ರಾಂಶುಪಾಲರನ್ನು ತಾಲೂಕಿನ ಕಲ್ಲಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ನೇಮಿಸಿದ್ದಾರೆ. ಈಗಿರುವ ಪ್ರಾಂಶುಪಾಲ ರಾಘವೇಂದ್ರ ಅವರನ್ನು ಮುಂದುವರಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ. ಅಲ್ಲಿಯವರೆಗೆ ತರಗತಿಗೆ ಹಾಜರಾಗುವುದಿಲ್ಲ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಪ್ರಾಂಶುಪಾಲರು ಯಾವುದೇ ಕಾರಣಕ್ಕೂ ನಮಗೆ ಬೇಡ. ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ 246 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ನಾಗರಪಂಚಮಿಗೆ ಮನೆಗೆ ಹೋದ ಸಂದರ್ಭದಲ್ಲಿ ಪ್ರಾಂಶುಪಾಲ ರಾಘವೇಂದ್ರ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದಾರೆ. ಹಳೆಯ ಪ್ರಾಂಶುಪಾಲರು ಮರು ನೇಮಕ ಆಗುವವರೆಗೆ ನಾವು ಊಟ, ಉಪಾಹಾರ ಮತ್ತು ನೀರನ್ನು ಸೇವಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.

    ಕಳೆದ 10 ವರ್ಷಗಳಿಂದ ಪ್ರಾಂಶುಪಾಲರಾಗಿ ರಾಘವೇಂದ್ರ ಅವರು ಶಾಲೆಯನ್ನು ಉತ್ತಮವಾಗಿ ಮುನ್ನಡೆಸಿದ್ದರು. ಯಾರೂ ಬರಲು ಒಪ್ಪದ ಸಮಯದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯನ್ನು ರಾಜ್ಯದ ಅತ್ಯುತ್ತಮ ವಸತಿ ಶಾಲೆಯನ್ನಾಗಿ ರೂಪಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರತಿ ಕ್ಷಣವೂ ನಮ್ಮ ವಿದ್ಯಾಭ್ಯಾಸ ಊಟೋಪಚಾರ ಬಗ್ಗೆ ಕಾಳಜಿ ವಹಿಸುತ್ತಿದ್ದರು. ನಾವೆಲ್ಲ ಬಡ ಕುಟುಂಬದ ಹಿನ್ನೆಲೆಯಿಂದ ಬಂದು ಈ ಶಾಲೆಯಲ್ಲಿ ಕಲಿಯುತ್ತಿದ್ದೇವೆ. ನಮ್ಮ ಮೇಲೆ ಪ್ರಾಂಶುಪಾಲರು ತೋರಿಸುವ ಪ್ರೀತಿಯಿಂದ ನಾವು ಬಡವರು ಎಂಬುದನ್ನು ಮರೆತು ಬಿಟ್ಟಿದ್ದೆವು. ಅವರು ಎಲ್ಲ ವಿದ್ಯಾರ್ಥಿಗಳನ್ನು ಸಮಾನ ರೀತಿಯಲ್ಲಿ ನೋಡುತ್ತಿದ್ದರು. ಇಂತಹ ಪ್ರಾಂಶುಪಾಲರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.

    ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶ್ರೀಧರ ಮುಂದಲಮನಿ ವಿದ್ಯಾರ್ಥಿಗಳ ಮನವೊಲಿಸಲು ಮುಂದಾದರು. ತರಗತಿ ಬಹಿಷ್ಕರಿಸುವುದು ಸರಿಯಾದ ಕ್ರಮವಲ್ಲ. ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಜಿಲ್ಲಾಧಿಕಾರಿ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವಸ್ತುಸ್ಥಿತಿ ತಿಳಿಸಲಾಗುತ್ತದೆ. ಅವರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳು ಅದಕ್ಕೆ ಒಪ್ಪದೇ ಪ್ರತಿಭಟನೆ ಮುಂದುವರಿಸಿದರು.

    ಹಳೇ ಪ್ರಾಂಶುಪಾಲರನ್ನು ಮುಂದುವರಿಸಬೇಕೆಂಬ ಆಗ್ರಹವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡುತ್ತೇನೆ. ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸುವುದು ಸರಿಯಲ್ಲ. ಶಿಕ್ಷಕರು ಜವಾಬ್ದಾರರಾಗಿದ್ದು, ಅವರು ಉತ್ತರ ನೀಡಬೇಕಾಗುತ್ತದೆ. ಪಾಲಕರು ಹಾಗೂ ಅಧಿಕಾರಿಗಳು ಸಭೆ ನಡೆಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು.

    | ಶ್ರೀಧರ ಮುಂದಲಮನಿ, ತಹಸೀಲ್ದಾರ್, ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts