ಲಿಪಿ ಮತ್ತು ಭಾಷೆಯಲ್ಲಿ ಪರಿೂರ್ಣತೆ ಸಾಧಿಸಿದ ಮೊದಲ ಭಾಷೆ ಕನ್ನಡ : ಡಾ. ಸ್ಮಿತಾರೆಡ್ಡಿ

HAL Kannada Sangha
Published on

ಬೆಂಗಳೂರು: ಲಿಪಿ ಮತ್ತು ಭಾಷೆಯ ಪರಿಪೂರ್ಣತೆಯನ್ನು ಸಾಧಿಸಿದ್ದ ಭಾರತದ ಪ್ರಥಮ ಭಾಷೆ ಕನ್ನಡ ಎಂದು ಕರ್ನಾಟಕ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕಿ ಡಾ.ಸ್ಮಿತಾರೆಡ್ಡಿ ತಿಳಿಸಿದರು.

ಎಚ್.ಎ.ಎಲ್.ಕೇಂದ್ರೀಯ ಕನ್ನಡ ಸಂಘವು ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಮಾಸದ ಮಾತು’ ಮಾಲಿಕೆಯಲ್ಲಿ ಅವರು ‘ಕನ್ನಡ ಲಿಪಿಯ ವಿಕಾಸ ಮತ್ತು ಕನ್ನಡದ ಹಿರಿಮೆ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಕ್ರಿ.ಪೂ.3ನೇ ಶತಮಾನದಿಂದ ಕ್ರಿ.ಶ.3ನೇ ಶತಮಾನದ ಮಧ್ಯದ ಅವಧಿಯ ಐತಿಹಾಸಿಕ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ತಮಿಳ ಭಾಷೆಯು ಪ್ರೌಢ ಹಂತವನ್ನು ಮುಟ್ಟುವುದಕ್ಕೆ ಸುಮಾರು ಮೂರು ಶತಮಾನಗಳ ಮುಂಚೆಯೇ ಕನ್ನಡವು ಲಿಪಿ ಮತ್ತು ಭಾಷೆಯ ಪರಿಪೂರ್ಣತೆ ಸಾಧಿಸಿದ್ದನ್ನು ತಿಳಿಯಬಹುದಾಗಿದೆ ಎಂದರು.

ಹಲ್ಮಡಿ ಶಾಸನಗಳಂತಹ ದಾಖಲೆಗಳು ಕನ್ನಡವು, ತಮಿಳಗಿಂತ ಮುನ್ನವೇ ಅಕ್ಷರಸ್ಥ ಸಮುದಾಯವಾಗಿ ರೂಪಗೊಂಡಿರುವುದನ್ನು ಸ್ಪಷ್ಟಪಡಿಸುತ್ತವೆ. ಅಶೋಕನು ಕರ್ನಾಟಕದಲ್ಲಿ ಶಾಸನ ಹಾಕಿಸುವುದಕ್ಕಿಂತ ಮುನ್ನವೇ ಪ್ರಾಕೃತ ಭಾಷೆಯು ಕರ್ನಾಟಕವನ್ನು ಪ್ರವೇಶಿಸಿತ್ತು. ಅಶೋಕನು ಒಟ್ಟು 18 ಬಂಡೆ ಶಾಸನಗಳನ್ನು ಕೊರಸಿದ್ದು, ಅವುಗಳಲ್ಲಿ 9 ಶಾಸನಗಳು ಕರ್ನಾಟಕದಲ್ಲಿಯೇ ಇವೆ. ಅಂದರೆ, ಚಾರಿತ್ರಿಕಯುಗದ ಆರಂಭ ಕಾಲದಲ್ಲಿ ಲಿಪಿ-ಭಾಷಾ ಮಾಧ್ಯಮಗಳನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಂಡ ಹಿರಿಮೆ ಇಂದಿನ ಕರ್ನಾಟಕದ್ದು ಆಗಿತ್ತೆಂದು ಅರ್ಥ ಎಂದರು.

ಕಾರ್ಯಕ್ರಮದಲ್ಲಿ ಡಾ.ಸ್ಮಿತಾರೆಡ್ಡಿ ಅವರನ್ನು ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಡಿ. ರಾಜೇಶ್, ಎಚ್.ಎ.ಎಲ್. ಕಾರ್ಮಿಕ ಸಂಘದ ಸಂಘಟನಾ ಕಾರ್ಯದರ್ಶಿ ಎ.ಎ.ಸ್. ವೆಂಕಟೇಶ್, ಕಾರ್ಯದರ್ಶಿ ಕೆ.ಡಿ. ದೇವರಾಜ್ ವಿಮಾನ ಕನ್ನಡ ಸಂಘದ ಗೋಪಾಲ ನಾಯಕ, ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net