ಅಕ್ರಮ-ಸಕ್ರಮ ಕಡತ ಕಾನೂನು ಪರಿಧಿಯೊಳಗೆ ವಿಲೇವಾರಿ

akrama sakrama
ಶಾಸಕ ಅಶೋಕ್ ಕುಮಾರ್ ರೈ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು
Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಕಳೆದ ಐದು ವರ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 28 ಸಾವಿರ ಅಕ್ರಮ-ಸಕ್ರಮ ಕಡತಗಳು ವಿಲೇವಾರಿಗೆ ಬಾಕಿಯಾಗಿದ್ದು, ಅವೆಲ್ಲವನ್ನೂ ಪಕ್ಷ, ರಾಜಕೀಯ ರಹಿತವಾಗಿ ಕಾನೂನು ಪರಿಧಿಯೊಳಗೆ ವಿಲೇವಾರಿ ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಉಪ್ಪಿನಂಗಡಿ ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಬೆಳ್ಳಿಪ್ಪಾಡಿ, ಕೋಡಿಂಬಾಡಿ, 34 ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ ಮತ್ತು ಬಜತ್ತೂರು ಗ್ರಾಮಗಳ ಅಕ್ರಮ-ಸಕ್ರಮ ಬೈಠಕ್ ಮತ್ತು ಹಕ್ಕುಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಮೊದಲು ಅಧಿಕಾರಿಗಳು ಅಕ್ರಮ-ಸಕ್ರಮದ ಹಕ್ಕು ನೀಡುತ್ತಿದ್ದರು. ಆದರೆ ಈಗ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಕಡತಗಳ ವಿಲೇವಾರಿ ನಡೆಯುತ್ತಿದ್ದು, ಇದರಲ್ಲಿ ಮೋಸ, ವಂಚನೆ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ರಾಜ್ಯದಲ್ಲಿ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆ್ಯಪ್ ಮೂಲಕ ಅಕ್ರಮ-ಸಕ್ರಮ ಬೈಠಕ್ ನಡೆಸಲಾಗಿದೆ. ಶಾಸಕರ ಪ್ರಯತ್ನದಿಂದ ಈಗ ತಾಲೂಕು ಕಚೇರಿಯಲ್ಲೂ ಕೂಡಾ ಆಧಾರ್ ನೋಂದಣಿ ಕೇಂದ್ರ ಉದ್ಘಾಟನೆಗೊಂಡಿದೆ ಎಂದರು.

ಅಕ್ರಮ ಸಮಿತಿಯ ಸದಸ್ಯರಾದ ಮುಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ, ರೂಪಾರೇಖಾ ಆಳ್ವ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಉಪ್ಪಿನಂಗಡಿ ಕಂದಾಯ ಹೋಬಳಿ ಉಪತಹಸೀಲ್ದಾರ್ ಚೆನ್ನಪ್ಪ ಗೌಡ, ಕಂದಾಯ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ವಿಎಗಳು, ಉಪ್ಪಿನಂಗಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಕಾರ್ಯದರ್ಶಿ ಗೀತಾ ಶೇಖರ್, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷರಾದ ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ಉಪ್ಪಿನಂಗಡಿ ಗ್ರಾ.ಪಂ.ಸದಸ್ಯರಾದ ಅಬ್ದುರ‌್ರಹ್ಮಾನ್ ಕೆ., ಅಬ್ದುರ‌್ರಶೀದ್, ಧನಂಜಯ ನಟ್ಟಿಬೈಲು, ಮತ್ತಿತರರು ಉಪಸ್ಥಿತರಿದ್ದರು. ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಸ್ವಾಗತಿಸಿ, ವಂದಿಸಿದರು.

ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳುವುದು, ವಾಸವಾಗಿದ್ದ ಸರ್ಕಾರಿ ಭೂಮಿಯ ಹಕ್ಕನ್ನು 94ಸಿ, ಅಥವಾ 94ಸಿಸಿಯಲ್ಲಿ ಪಡೆದುಕೊಳ್ಳುವುದು ಹಕ್ಕು. ಅಕ್ರಮ-ಸಕ್ರಮದಡಿಯಾಗಲಿ, 94ಸಿಯಿಂದಾಗಲಿ ಜನರಿಗೆ ಸಿಗುವ ಜಾಗವನ್ನು ಯಾರೋ ಅಧಿಕಾರಿಯ ಮನೆಯಿಂದ ಕೊಡುವುದಲ್ಲ. ಕಾನೂನಾತ್ಮಕವಾಗಿ ಅದು ಸರ್ಕಾರ ಕೊಡುವಂಥದ್ದು. ಆದ್ದರಿಂದ ದಯವಿಟ್ಟು ಇಂತಹ ಅರ್ಜಿಗಳ ಕಡತ ಬಾಕಿಯಿಟ್ಟು ಜನರನ್ನು ಸತಾಯಿಸಬಾರದು.-ಅಶೋಕ್ ಕುಮಾರ್ ರೈ, ಪುತ್ತೂರು ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net